
ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಶಶಾಂಕ್ ಸಿಂಗ್ ಮತ್ತು ಅವರ ಕುಟುಂಬದ ವಿರುದ್ಧ ಭೋಪಾಲ್‌ನಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. ಅಡುಗೆ ಭಟ್ಟನಿಗೆ ಮೌಖಿಕವಾಗಿ ನಿಂದಿಸಿ, ಹಲ್ಲೆ ನಡೆಸಿದ ಆರೋಪದ ಮೇಲೆ ಶಶಾಂಕ್ ಸಿಂಗ್, ಅವರ ತಂದೆ ಶೈಲೇಶ್ ಸಿಂಗ್ (ನಿವೃತ್ತ ವಿಶೇಷ ಡಿಜಿಪಿ) ಮತ್ತು ಅವರ ಚಾಲಕ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಶಶಾಂಕ್ ಸಿಂಗ್ ಅವರ ಮನೆಯಲ್ಲಿ ಅಡುಗೆ ಕೆಲಸಕ್ಕಿದ್ದ 31 ವರ್ಷದ ವಿಪೇಂದ್ರ ಸಿಂಗ್ ತೋಮರ್ ಎಂಬುವವರು ರತೀಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಊಟದ ಗುಣಮಟ್ಟದ ವಿಚಾರವಾಗಿ ಮನೆಯಲ್ಲಿ ವಿವಾದ ಉಂಟಾಗಿತ್ತು. ಇದರಿಂದ ಬೇಸತ್ತು ಕೆಲಸ ಬಿಟ್ಟು ಹೋಗಲು ನಿರ್ಧರಿಸಿದಾಗ, ಯಾರನ್ನೂ ಸಂಪರ್ಕಿಸದಂತೆ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಳ್ಳಲಾಯಿತು.
ಭಯದಿಂದ ನಾನು (ವಿಪೇಂದ್ರ ಸಿಂಗ್ ತೋಮರ್) ಕೋಣೆಯೊಂದರಲ್ಲಿ ಬೀಗ ಹಾಕಿಕೊಂಡಾಗ, ಶಶಾಂಕ್ ಸಿಂಗ್, ಅವರ ತಂದೆ ಶೈಲೇಶ್ ಸಿಂಗ್ ಮತ್ತು ಅವರ ಚಾಲಕ ಮಿಶ್ರಾ ಬಾಗಿಲು ಮುರಿದು ಒಳನುಗ್ಗಿ ಕೈ ಮತ್ತು ಮುಷ್ಟಿಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ವಿಪೇಂದ್ರ ಸಿಂಗ್ ತೋಮರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ತೋಮರ್ ಅವರ ಮುಖ ಮತ್ತು ದೇಹದ ಮೇಲೆ ಗಾಯದ ಗುರುತುಗಳು ಇರುವುದು ದೃಢಪಟ್ಟಿದೆ. ಇದರ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ದೌರ್ಜನ್ಯ, ಜಂಟಿ ಕ್ರಿಮಿನಲ್ ಹೊಣೆಗಾರಿಕೆ ಮತ್ತು ಸಾರ್ವಜನಿಕ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಶಶಾಂಕ್ ಸಿಂಗ್, ಇವೆಲ್ಲವೂ ಸುಳ್ಳು ಮತ್ತು ಕಲ್ಪಿತ ಕಥೆ ಎಂದು ಹೇಳಿದ್ದಾರೆ.
ವಿಪೇಂದ್ರ ಸಿಂಗ್ ತೋಮರ್ ತನಗೆ ದೊಡ್ಡ ಹೋಟೆಲ್‌ಗಳಲ್ಲಿ ಅಡುಗೆ ಮಾಡಿದ ಅನುಭವವಿದೆ ಎಂದು ಸುಳ್ಳು ಹೇಳಿ ಕೆಲಸಕ್ಕೆ ಸೇರಿದ್ದrಉ. ಆದರೆ ಅವನಿಗೆ ಅಡುಗೆಯ ಪ್ರಾಥಮಿಕ ಜ್ಞಾನವೂ ಇರಲಿಲ್ಲ.
ಅಲ್ಲದೆ ನಮ್ಮ ಮನೆಯ ಬೆಡ್‌ರೂಮ್‌ಗಳಿಗೆ ನುಗ್ಗಿ ಅಲ್ಲಿನ ದುಬಾರಿ ವಾಚ್‌ಗಳು, ಸನ್‌ಗ್ಲಾಸ್‌ಗಳು ಮತ್ತು ವಾರ್ಡ್‌ರೋಬ್‌ಗಳ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ.
ಈ ವಿಡಿಯೋಗಳನ್ನು ಡಿಲೀಟ್ ಮಾಡಲು ಹೇಳಿದಾಗ ತಪ್ಪು ಒಪ್ಪಿಕೊಂಡ ತೋಮರ್, ದಯವಿಟ್ಟು ಪೊಲೀಸ್ ಕೇಸ್ ಮಾಡಬೇಡಿ ಎಂದು ಕಾಲು ಹಿಡಿದು ಬೇಡಿಕೊಂಡಿದ್ದ. ಆನಂತರ ಅವನನ್ನು ಗೌರವಯುತವಾಗಿಯೇ ಮನೆಯಿಂದ ಕಳುಹಿಸಲಾಗಿತ್ತು. ಯಾವುದೇ ಹಲ್ಲೆ ಮಾಡಿಲ್ಲ ಎಂದು ಶಶಾಂಕ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Shreyas Iyer: ಐರ್ಲೆಂಡ್ ವಿರುದ್ಧ ಸೋತಿದ್ದಕ್ಕೆ ಮುಜಗರವೇನು ಇಲ್ಲ..!
ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಸಿರುವ ಭೋಪಾಲ್ ಪೊಲೀಸರು ಎರಡೂ ಕಡೆಯ ಹೇಳಿಕೆಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.