12 ತಂಡಗಳ ಟೂರ್ನಿ… ಐಪಿಎಲ್ 2028ಕ್ಕೆ ಮತ್ತೆ 2 ತಂಡಗಳ ಸೇರ್ಪಡೆ!

ಕ್ರಿಕೆಟ್ ಜಗತ್ತಿನ ದೈತ್ಯ ಲೀಗ್ ಐಪಿಎಲ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗುತ್ತಿದೆ. 2028 ರ ಆವೃತ್ತಿಯ ವೇಳೆಗೆ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು 12 ಕ್ಕೆ ಹೆಚ್ಚಿಸುವ ಬೃಹತ್ ಯೋಜನೆಯನ್ನು ಬಿಸಿಸಿಐ ಕೈಗೆತ್ತಿಕೊಂಡಿದೆ. ಈ ವಿಸ್ತರಣೆಯು ಕೇವಲ ಬಿಸ್ನೆಸ್ ಮೌಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ರಿಕೆಟ್ ಅಖಾಡದಲ್ಲೂ ಭಾರಿ ಕ್ರಾಂತಿಗೆ ಕಾರಣವಾಗಲಿದೆ. 

12 ತಂಡಗಳ ಟೂರ್ನಿ... ಐಪಿಎಲ್ 2028ಕ್ಕೆ ಮತ್ತೆ 2 ತಂಡಗಳ ಸೇರ್ಪಡೆ!
Representational Image
Image Credit source: x.com

Updated on: Nov 10, 2026 | 2:19 PM

ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತನ್ನ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಿಗ್ ಪ್ಲಾನ್ ರೂಪಿಸಿದೆ. ಬಿಸಿಸಿಐ (BCCI) ಮುಂಬರುವ 2028ರ ಸೀಸನ್ ವೇಳೆಗೆ ಐಪಿಎಲ್ ತಂಡಗಳ ಸಂಖ್ಯೆಯನ್ನು 10 ರಿಂದ 12 ಕ್ಕೆ ಏರಿಸಲು ಯೋಜನೆ ಹಾಕಿಕೊಂಡಿದ್ದು, ಈ ಮೂಲಕ ಮತ್ತಷ್ಟು ಬೃಹತ್ ಮಟ್ಟದಲ್ಲಿ ಟೂರ್ನಿ ಆಯೋಜಿಸಲು ನಿರ್ಧರಿಸಿದೆ.

ಹೊಸ ತಂಡಗಳು ಯಾವುವು?

ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಹೊಸ ಫ್ರಾಂಚೈಸಿಗಳಿಗಾಗಿ ದೇಶದ ಪ್ರಮುಖ ನಗರಗಳನ್ನು ಪರಿಶೀಲಿಸುತ್ತಿದೆ. ಇದರ ನಡುವೆ ಎರಡು ನಗರಗಳ ಹೆಸರುಗಳು ಬಲವಾಗಿ ಕೇಳಿಬರುತ್ತಿದ್ದು, ಈ ತಂಡಗಳೇ ಐಪಿಎಲ್ 2028 ಕ್ಕೆ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಆ ನಗರಗಳೆಂದರೆ…

Loading...
  • ಪುಣೆ (ಮಹಾರಾಷ್ಟ್ರ): ಈ ಹಿಂದೆ ಪುಣೆ ವಾರಿಯರ್ಸ್ ಇಂಡಿಯಾ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡಗಳ ಮೂಲಕ ಐಪಿಎಲ್ ಆತಿಥ್ಯ ವಹಿಸಿದ ಅನುಭವ ಹೊಂದಿರುವ ಪುಣೆ, ಮತ್ತೊಮ್ಮೆ ಪೂರ್ಣಾವಧಿ ತಂಡವನ್ನು ಪಡೆಯುವ ನೆಚ್ಚಿನ ರೇಸ್‌ನಲ್ಲಿದೆ.
  • ವಡೋದರಾ (ಗುಜರಾತ್): ಕ್ರಿಕೆಟ್ ಇತಿಹಾಸದಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ಮತ್ತು ಇತ್ತೀಚೆಗೆ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುತ್ತಿರುವ ವಡೋದರಾ, ಎರಡನೇ ಸಂಭಾವ್ಯ ನಗರವಾಗಿ ಹೊರಹೊಮ್ಮಿದೆ.

$1 ಬಿಲಿಯನ್‌ಗೂ ಅಧಿಕ ಮೌಲ್ಯ!

2022 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಸೇರ್ಪಡೆಯಿಂದ ಬಿಸಿಸಿಐಗೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬಂದಿತ್ತು. ಈಗ ಸೇರ್ಪಡೆಯಾಗಲಿರುವ ಎರಡು ಹೊಸ ತಂಡಗಳ ಮೌಲ್ಯವು ತಲಾ 1 ಬಿಲಿಯನ್ ಡಾಲರ್ (ಅಂದಾಜು ₹8,400 ಕೋಟಿಗೂ ಅಧಿಕ) ದಾಟಬಹುದು ಎಂದು ಅಂದಾಜಿಸಲಾಗಿದೆ. ಇದು ಐಪಿಎಲ್‌ನ ಬ್ರ್ಯಾಂಡ್ ಮೌಲ್ಯವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.’

ಮಹಾ ಹರಾಜಿಗೆ ನ್ಯೂ ಟೀಮ್:

ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಹೊಸ ತಂಡಗಳನ್ನು ಸೇರಿಸುವಾಗ ಮಹಾ ಹರಾಜು  ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್​ ತಂಡಗಳು ಬಂದಾಗಲೂ ಬಿಸಿಸಿಐ ಮಹಾ ಹರಾಜನ್ನೇ ಆಯೋಜಿಸಿತ್ತು.

ಈಗ 2028 ರ ಸೀಸನ್‌ಗೆ ಎರಡು ಹೊಸ ತಂಡಗಳನ್ನು ಸೇರಿಸಲು ಯೋಜನೆ ರೂಪಿಸುತ್ತಿರುವುದರಿಂದ, ಆ ಸೀಸನ್‌ಗೂ ಮುನ್ನ ಅಂದರೆ 2027 ರ ಕೊನೆಯಲ್ಲಿ ಅಥವಾ 2028 ರ ಆರಂಭದಲ್ಲಿ ಮತ್ತೊಂದು ರೋಚಕ ‘ಮಹಾ ಹರಾಜು’ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಈ ಮಹಾ ಹರಾಜಿನ ಮೂಲಕವೇ ಹೊಸದಾಗಿ ಬರುವ ಎರಡು ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಖರೀದಿಸಿ, ತಮ್ಮ ಸಂಪೂರ್ಣ ಹೊಸ ತಂಡವನ್ನು ಕಟ್ಟಿಕೊಳ್ಳಲಿವೆ. ಅಂದರೆ, 2028ರ ಐಪಿಎಲ್‌ಗೂ ಮುನ್ನ ನಡೆಯುವ ಹರಾಜಿನಲ್ಲಿ ಹಾಲಿ ಇರುವ ತಂಡಗಳಿಗೆ ಕೆಲವೇ ಕೆಲವು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ಇರಲಿದೆ.

ಇದನ್ನೂ ಓದಿ: 100 ಗ್ರ್ಯಾಂಡ್‌ಮಾಸ್ಟರ್ಸ್​: ಚೆಸ್ ಲೋಕದಲ್ಲಿ ಭಾರತದ ‘ಸೆಂಚುರಿ’

ಈ ಬದಲಾವಣೆ ಯಾವಾಗ?

ಬಿಸಿಸಿಐ ಸದ್ಯ ಪ್ರಾಥಮಿಕ ಹಂತದ ಮಾತುಕತೆಗಳನ್ನು ಆರಂಭಿಸಿದ್ದು, 2028 ರಲ್ಲಿ 12 ತಂಡಗಳನ್ನು ಕಣಕ್ಕಿಳಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಈ ಬಿಗ್ ಪ್ಲ್ಯಾನ್ ಜಾರಿಯಾದರೆ ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೋಚಕತೆ ಸೃಷ್ಟಿಯಾಗಲಿದೆ.

ತಂಡಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪಂದ್ಯಗಳ ಮಹಾಸಮರವೂ ದುಪ್ಪಟ್ಟಾಗಲಿದ್ದು, ಜಗತ್ತಿನಾದ್ಯಂತ ಇರುವ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ನಾನ್-ಸ್ಟಾಪ್ ಹೈ-ವೋಲ್ಟೇಜ್ ಮನರಂಜನೆ ಸಿಗುವುದು ಗ್ಯಾರಂಟಿ. ಅಷ್ಟೇ ಅಲ್ಲ, ಪ್ರತಿಭೆ ಇದ್ದರೂ ಅವಕಾಶ ಸಿಗದೆ ತೆರೆಮರೆಯಲ್ಲೇ ಉಳಿದುಹೋಗಿರುವ ನೂರಾರು ದೇಶಿ ಯುವ ಆಟಗಾರರ ಪಾಲಿಗೆ ಈ ಮೆಗಾ ಟೂರ್ನಿಯು ರಾತ್ರೋರಾತ್ರಿ ಸ್ಟಾರ್‌ಗಳಾಗಿ ಮಿಂಚಲು ಅತ್ಯುತ್ತಮ ವೇದಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

 

Published On - 2:11 pm, Tue, 10 November 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us