
IPL 2026: ಐಪಿಎಲ್ ಅಂಗಳದಲ್ಲಿ ರನ್‌ಗಳ ಅಬ್ಬರವೇನೋ ಜೋರಾಗಿದೆ. ಆದರೆ ಕಿಕ್ಕಿರಿದು ತುಂಬುತ್ತಿದ್ದ ಪ್ರೇಕ್ಷಕರ ಗ್ಯಾಲರಿ ಮತ್ತು ಟಿವಿ ಪರದೆಯ ಮುಂದೆ ಕುಳಿತು ನೋಡುವವರ ಸಂಖ್ಯೆ ಮಾತ್ರ ಕುಸಿಯುತ್ತಿದೆ. ಐಪಿಎಲ್ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಶೇ. 26ರಷ್ಟು ಇಳಿಕೆಯಾಗಿರುವುದು ಈಗ ಬಿಸಿಸಿಐಗೆ ನಿದ್ದೆಗೆಡಿಸಿದೆ. ಈ ಕುಸಿತ ಕೇವಲ ತಾಂತ್ರಿಕ ಬದಲಾವಣೆಯೋ ಅಥವಾ ‘ಕ್ರಿಕೆಟ್ ಆಯಾಸ’ವೋ? ಈ ಬಗ್ಗೆ ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ಅವರ ಸಲಹೆಗಳು ಐಪಿಎಲ್‌ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿವೆ. ಕ್ರೀಡಾಂಗಣದ ಅವ್ಯವಸ್ಥೆಯಿಂದ ಹಿಡಿದು ಆಟದ ನಿಯಮಗಳವರೆಗೆ ಅವರು ಎತ್ತಿ ತೋರಿಸಿರುವ ‘ನಾಲ್ಕು ಕಹಿ ಸತ್ಯ’ಗಳ ವಿಶ್ಲೇಷಣೆ ಇಲ್ಲಿದೆ…”
ಸಮತೋಲಿತ ಪಿಚ್‌ಗಳು: ಇಂದಿನ ಐಪಿಎಲ್ ಪಂದ್ಯಗಳು ಕೇವಲ ಬ್ಯಾಟರ್‌ಗಳ ಸ್ವರ್ಗವಾಗಿ ಮಾರ್ಪಟ್ಟಿವೆ. ಪ್ರತೀ ಪಂದ್ಯದಲ್ಲೂ 250 ರನ್‌ಗಳ ಗುರಿ ಕಾಣುವುದು ಅಭಿಮಾನಿಗಳಿಗೆ ಆರಂಭದಲ್ಲಿ ರೋಚಕ ಎನಿಸಿದರೂ, ಕ್ರಮೇಣ ಇದು ಏಕತಾನತೆಗೆ ಕಾರಣವಾಗುತ್ತದೆ.
‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ: ಈ ನಿಯಮವು ಪಂದ್ಯವನ್ನು 11 ಆಟಗಾರರ ಬದಲಿಗೆ 12 ಆಟಗಾರರ ಆಟವನ್ನಾಗಿ ಮಾಡಿದೆ. ಇದು ಪಂದ್ಯದ ಸಮತೋಲನವನ್ನು ಕೆಡಿಸಿದೆ ಎಂಬುದು ಹರ್ಷ್ ಗೋಯೆಂಕಾ ಅವರ ವಾದ.
ಅಭಿಮಾನಿಗಳೊಂದಿಗಿನ ಸಂಬಂಧ: ಐಪಿಎಲ್ ಎನ್ನುವುದು ಕೇವಲ ಎರಡು ತಿಂಗಳ ಟೂರ್ನಿಯಾಗಬಾರದು. ಅಭಿಮಾನಿಗಳೊಂದಿಗೆ ಫ್ರಾಂಚೈಸಿಗಳು ವರ್ಷಪೂರ್ತಿ ಸಂಬಂಧ ಹೊಂದಿರಬೇಕು ಎಂದು ಹರ್ಷ್ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ.
ಕ್ರೀಡಾಂಗಣದಲ್ಲಿ ಉತ್ತಮ ಸೌಲಭ್ಯಗಳು: ಟಿವಿಯಲ್ಲಿ ಪಂದ್ಯ ನೋಡುವುದು ಸುಲಭವಾದರೂ, ಸ್ಟೇಡಿಯಂಗೆ ಬರುವ ಅಭಿಮಾನಿಗಳು ಅನುಭವಿಸುವ ಕಷ್ಟಗಳು ಸಾಕಷ್ಟಿವೆ. ಈ ಬಗ್ಗೆ ಫ್ರಾಂಚೈಸಿ ಹಾಗೂ ಕ್ರಿಕೆಟ್ ಸಂಸ್ಥೆಗಳು ಹೆಚ್ಚಿನ ಕಾಳಜಿವಹಿಸಬೇಕು ಎಂದು ಗೋಯೆಂಕಾ ತಿಳಿಸಿದ್ದಾರೆ.
ಇದಲ್ಲದೆ ಅನಿಶ್ಚಿತತೆಯೇ ಕ್ರಿಕೆಟ್‌ನ ಜೀವಾಳ ಎಂದು ಅಭಿಪ್ರಾಯಪಟ್ಟಿರುವ ಹರ್ಷ ಗೊಯೆಂಕಾ, ಪ್ರತಿದಿನ 225 vs 225 ರನ್‌ಗಳ ಪಂದ್ಯಗಳು ಬೇಸರ ತರಿಸುತ್ತವೆ. ಬ್ಯಾಟ್ ಮತ್ತು ಬಾಲ್ ನಡುವೆ ಸಮಬಲದ ಹೋರಾಟ ನಡೆದಾಗ ಮಾತ್ರ ವೀಕ್ಷಕರು ಟಿವಿಗೆ ಅಂಟಿಕೊಳ್ಳುತ್ತಾರೆ. ಹೀಗಾಗಿ ಸಮತೋಲಿತ ಪಿಚ್ ನಿರ್ಮಿಸಲು ಟೂರ್ನಿ ಆಯೋಜಕರು ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ಇಂದು ಒಂದು ತಿರುವು ಘಟ್ಟದಲ್ಲಿದೆ. ಬಿಸಿಸಿಐ ಕೇವಲ ಬೌಂಡರಿ-ಸಿಕ್ಸರ್‌ಗಳ ಅಂಕಿಅಂಶಗಳಿಗೆ ಮರುಳಾಗದೆ, ಕ್ರೀಡೆಯ ನೈಜ ಆತ್ಮವಾದ ‘ಬ್ಯಾಟ್ ಮತ್ತು ಬಾಲ್ ನಡುವಿನ ಸಮರ’ವನ್ನು ಮತ್ತೆ ತರಬೇಕಿದೆ. ಹರ್ಷ್ ಗೋಯೆಂಕಾ ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗೆ ಗೌರವ ನೀಡಿದಾಗ ಮಾತ್ರ ಐಪಿಎಲ್‌ನ ಗತವೈಭವ ಮರಳಲು ಸಾಧ್ಯ. ಅಭಿಮಾನಿಗಳೇ ಈ ಕ್ರೀಡೆಯ ಜೀವಾಳ, ಅವರ ಅತೃಪ್ತಿ ಲೀಗ್‌ನ ಅಳಿವು-ಉಳಿವಿನ ಪ್ರಶ್ನೆಯಾಗಬಹುದು ಎಂಬುದನ್ನು ಬಿಸಿಸಿಐ ಮರೆಯಬಾರದು.