
ರಣಜಿ ಟ್ರೋಫಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡದ ಇರಾನಿ ಕಪ್ ಗೆಲುವಿನ ಕನಸಿಗೆ ರೆಸ್ಟ್ ಆಫ್ ಇಂಡಿಯಾ ತಂಡ ತಣ್ಣೀರೆರಚಿದೆ. ಮೊಟ್ಟ ಮೊದಲ ಬಾರಿಗೆ ರಣಜಿ ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಇರಾನಿ ಕಪ್ ಗೆಲ್ಲುವ ಅವಕಾಶವಿತ್ತು, ಆದರೆ ಕನ್ನಡಿಗ ಸ್ಮರಣ್ ರವಿಚಂದ್ರನ್ ಅವರ ಸ್ಮರಣೀಯ ಶತಕ ಅದಕ್ಕೆ ಅಡ್ಡಿ ಪಡಿಸಿತು. ಪಂದ್ಯದ ನಾಲ್ಕನೇ ದಿನದಂದು 279 ರನ್‌ಗಳ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ರೆಸ್ಟ್ ಆಫ್ ಇಂಡಿಯಾ ಕೇವಲ 111 ರನ್‌ಗಳಿಗೆ ಆಲೌಟ್ ಮಾಡಿ 167 ರನ್‌ಗಳ ಬೃಹತ್ ಗೆಲುವು ದಾಖಲಿಸುವ ಮೂಲಕ ಇರಾನಿ ಕಪ್ ಗೆದ್ದುಕೊಂಡಿತು. ರೆಸ್ಟ್ ಆಫ್ ಇಂಡಿಯಾದ ಗೆಲುವಿನಲ್ಲಿ ಕನ್ನಡಿಗ ಸ್ಮರಣ್ ರವಿಚಂದ್ರನ್ ಬ್ಯಾಟಿಂಗ್ನಲ್ಲಿ ಪ್ರಮುಖ ಪಾತ್ರವಹಿಸಿದರೆ, ಮುಖೇಶ್ ಕುಮಾರ್ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬೌಲಿಂಗ್‌ನಲ್ಲಿ ಮಿಂಚಿದರು.
ಪಂದ್ಯದ ಮೂರನೇ ದಿನದಂದು ರೆಸ್ಟ್ ಆಫ್ ಇಂಡಿಯಾ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು 306 ಕಲೆಹಾಕಿತ್ತು. ಇಲ್ಲಿಂದ ನಾಲ್ಕನೇ ದಿನದಾಟವನ್ನು ಆರಂಭಿಸಿದ ರೆಸ್ಟ್ ಆಫ್ ಇಂಡಿಯಾ ಮೊದಲ ಸೆಷನ್‌ನಲ್ಲಿಯೇ ಉಳಿದೆರಡು ವಿಕೆಟ್‌ಗಳನ್ನು ಕಳೆದುಕೊಂಡು ತನ್ನ ಸ್ಕೋರ್ಗೆ ಕೇವಲ 14 ರನ್‌ಗಳನಷ್ಟೇ ಸೇರಿಸಲು ಶಕ್ತವಾಯಿತು. ತಂಡದ ಪರ ಕನ್ನಡಿಗ ಸ್ಮರಣ್ ರವಿಚಂದ್ರನ್ 135 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 320 ರನ್‌ಗಳಿಗೆ ಕೊಂಡೊಯ್ದರು. ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಗೆಲ್ಲಲು 279 ರನ್‌ಗಳ ಗುರಿ ಸಿಕ್ಕಿತು.
ಈ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರು ಮೊದಲ ವಿಕೆಟ್ಗೆ 54 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಆದಾಗ್ಯೂ, ಮೊದಲ ವಿಕೆಟ್ ಪತನಗೊಂಡ ತಕ್ಷಣ, ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ಈ ಹಿಂದೆ ಭಾರತ ಟೆಸ್ಟ್ ತಂಡಕ್ಕಾಗಿ ಆಡಿದ್ದ ವೇಗಿಗಳಾದ ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್, ಜಮ್ಮು ಮತ್ತು ಕಾಶ್ಮೀರ ತಂಡದ ಬ್ಯಾಟ್ಸ್‌ಮನ್‌ಗಳನ್ನು ಒಬ್ಬೊಬ್ಬರಾಗಿ ಪೆವಿಲಿಯನ್ಗೆ ಕಳುಹಿಸಿದರು. ಇದರ ಪರಿಣಾಮವಾಗಿ ತಂಡವು ಕೇವಲ 28.4 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಶುಭಂ ಖಜುರಿಯಾ ತಂಡದ ಪರ ಗರಿಷ್ಠ 36 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಮಧ್ಯೆ, ರೆಸ್ಟ್ ಆಫ್ ಇಂಡಿಯಾ ಪರ ಮುಖೇಶ್ ಕುಮಾರ್ ಆರು ವಿಕೆಟ್ ಪಡೆದರೆ, ಆಕಾಶ್ ದೀಪ್ ಮೂರು ವಿಕೆಟ್ ಪಡೆದರು.
ಆದಾಗ್ಯೂ, ನಾಯಕ ರಿಷಭ್ ಪಂತ್ ಮೂರನೇ ದಿನದಿಂದ ಜ್ವರದಿಂದ ಬಳಲುತ್ತಿದ್ದ ಕಾರಣ ಅಂತಿಮ ದಿನದಂದು ಮೈದಾನಕ್ಕೆ ಇಳಿಯಲಿಲ್ಲ. ಅದಕ್ಕಾಗಿಯೇ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಅಂತಿಮ ಇನ್ನಿಂಗ್ಸ್‌ನಲ್ಲಿ, ಪಂತ್ ಬದಲಿಗೆ ಸರ್ಫರಾಜ್ ಖಾನ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
Published On - 3:27 pm, Sun, 4 October 26