
ದುಲೀಪ್ ಟ್ರೋಫಿಯ ಫೈನಲ್ ಪಂದ್ಯದ ಮೂಲಕ ಇಶಾನ್ ಕಿಶನ್ ಹೊಸ ದಾಖಲೆ ಬರೆದಿದ್ದಾರೆ. ಅದು ಸಹ ಬರೋಬ್ಬರಿ 350 ರನ್ ಕಲೆಹಾಕುವ ಮೂಲಕ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಝೋನ್ ವಿರುದ್ಧದ ಪಂದ್ಯದಲ್ಲಿ ಫೈನಲ್ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಇಶಾನ್ ಕಿಶನ್ ಮೊದಲ ಇನಿಂಗ್ಸ್ನಲ್ಲಿ 270 ರನ್ ಚಚ್ಚಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅವರು 80 ರನ್ ಬಾರಿಸಿದ್ದರು. ಈ ಮೂಲಕ ಒಂದೇ ಪಂದ್ಯದಲ್ಲಿ ಬರೋಬ್ಬರಿ 350 ರನ್ ಕಲೆಹಾಕಿದ್ದಾರೆ.
ಈ 350 ರನ್ಗಳೊಂದಿಗೆ ದುಲೀಪ್ ಟ್ರೋಫಿ ಪಂದ್ಯವೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆಯು ಇಶಾನ್ ಕಿಶನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಮಣ್ ಲಾಂಬಾ ಅವರ ಹೆಸರಿನಲ್ಲಿತ್ತು.
ಮೊದಲ ನಾಯಕ: ದುಲೀಪ್ ಟ್ರೋಫಿ ಫೈನಲ್ ಪಂದ್ಯವೊಂದರಲ್ಲಿ ದ್ವಿಶತಕ (270 ರನ್) ಬಾರಿಸಿದ ಮೊದಲ ನಾಯಕ ಎಂಬ ಅಪರೂಪದ ಹೆಗ್ಗಳಿಕೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ.
ಮೊದಲ ವಿಕೆಟ್ ಕೀಪರ್: ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಇಶಾನ್ ಕಿಶನ್ ಪಾಲಾಗಿದೆ.
ಗರಿಷ್ಠ ವೈಯಕ್ತಿಕ ಸ್ಕೋರ್: ಫೈನಲ್ ಪಂದ್ಯಗಳಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ಸ್ಕೋರ್‌ಗಳ ಪಟ್ಟಿಯಲ್ಲಿ ಇಶಾನ್ ಕಿಶನ್ ಅವರ 270 ರನ್‌ಗಳ ಇನಿಂಗ್ಸ್ ಜಂಟಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ರಮಣ್ ಲಾಂಬಾ (320 ರನ್) ಮೊದಲ ಸ್ಥಾನದಲ್ಲಿದ್ದಾರೆ.
8ನೇ ಗರಿಷ್ಠ ವೈಯಕ್ತಿಕ ಸ್ಕೋರ್: ದುಲೀಪ್ ಟ್ರೋಫಿ ಟೂರ್ನಿಯ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇಶಾನ್ ಕಿಶನ್ 8ನೇ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ: ಅಕ್ರಮ ನಿರಾಶ್ರಿತರೆಂದು ಭಾವಿಸಿ ಪಾಕ್ ಆಟಗಾರರಿಗೆ ಮುತ್ತಿಗೆ!
ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ದುಲೀಪ್ ಟ್ರೋಫಿ ಫೈನಲ್ ಪಂದ್ಯವು ಇಶಾನ್ ಕಿಶನ್ ಅವರ ವೃತ್ತಿಜೀವನದ ಸುವರ್ಣ ಮೈಲಿಗಲ್ಲಾಗಿ ಇತಿಹಾಸದ ಪುಟಗಳನ್ನು ಸೇರಿದೆ. ಚೇಪಾಕ್ ಅಖಾಡದಲ್ಲಿ ಅವರು ಎರಡೂ ಇನಿಂಗ್ಸ್‌ಗಳಿಂದ ಒಟ್ಟು ಕಲೆಹಾಕಿದ 350 ರನ್‌ಗಳ ಐತಿಹಾಸಿಕ ಪ್ರದರ್ಶನವು ಕೇವಲ ದಾಖಲೆಗಳನ್ನು ಧೂಳೀಪಟ ಮಾಡಿಲ್ಲ, ಬದಲಿಗೆ, ಭಾರತ ಟೆಸ್ಟ್ ತಂಡಕ್ಕೆ ಅವರು ಭರ್ಜರಿ ಕಂಬ್ಯಾಕ್ ಮಾಡಲು ರಾಜಮಾರ್ಗವನ್ನೇ ಸೃಷ್ಟಿಸಿದೆ.