ಅಕ್ರಮ ನಿರಾಶ್ರಿತರೆಂದು ಭಾವಿಸಿ ಪಾಕ್ ಆಟಗಾರರಿಗೆ ಮುತ್ತಿಗೆ!
ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ಅಂಡರ್-19 ಕ್ರಿಕೆಟ್ ತಂಡವನ್ನು ಅಕ್ರಮ ನಿರಾಶ್ರಿತರೆಂದು ತಪ್ಪಾಗಿ ಭಾವಿಸಿದ ಉಗ್ರ ವಲಸೆ ವಿರೋಧಿ ಪ್ರತಿಭಟನಾಕಾರರು, ಆಟಗಾರರ ಹೋಟೆಲ್‌ಗೆ ಮುತ್ತಿಗೆ ಹಾಕಿ ಭೀತಿ ಸೃಷ್ಟಿಸಿದ ಘಟನೆ ಇಡೀ ಕ್ರೀಡಾ ಜಗತ್ತನ್ನು ಬೆಚ್ಚಿಬೀಳಿಸಿದೆ. ಆದರೆ, ಈ ಆಘಾತದಿಂದ ಹೊರಬಂದ ಪಾಕ್ ಕಿರಿಯರ ಪಡೆ ಮರುದಿನವೇ ಮೈದಾನದಲ್ಲಿ ಇಂಗ್ಲೆಂಡ್ ತಂಡಕ್ಕೆ ಬ್ಯಾಟ್ ಮೂಲಕ ತಕ್ಕ ತಿರುಗೇಟು ನೀಡಿದ್ದಾರೆ.

ಬ್ರಿಟನ್ ಬೀದಿಗಳಲ್ಲಿ ವಲಸಿಗರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ಈಗ ಕ್ರಿಕೆಟ್ ಮೈದಾನದ ಹೊಸ್ತಿಲಿಗೆ ಬಂದು ತಲುಪಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ್ ಅಂಡರ್-19 ತಂಡದ ಆಟಗಾರರನ್ನು ಅಕ್ರಮ ನಿರಾಶ್ರಿತರೆಂದು ತಪ್ಪಾಗಿ ಭಾವಿಸಿದ ಪ್ರತಿಭಟನಾಕಾರರು, ಅವರು ತಂಗಿದ್ದ ಹೋಟೆಲ್‌ಗೆ ಮುತ್ತಿಗೆ ಹಾಕಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಸುಳ್ಳು ವದಂತಿ ತಂದಿಟ್ಟ ಆಪತ್ತು!
ಸೆಪ್ಟೆಂಬರ್ 8ರ ಮಂಗಳವಾರ ಸಂಜೆ ಪೋರ್ಟ್ಸ್‌ಮೌತ್‌ನ ಕೋಶಮ್‌ನಲ್ಲಿರುವ ಪ್ರತಿಷ್ಠಿತ ಮ್ಯಾರಿಯಟ್ ಹೋಟೆಲ್ ಎದುರು ಈ ಘಟನೆ ನಡೆದಿದೆ. ಈ ಹಿಂದೆ ವಲಸಿಗರನ್ನು ಸಾಗಿಸಲು ಬಳಸಲಾಗುತ್ತಿದ್ದ ಖಾಸಗಿ ಬಸ್ ಈ ಹೋಟೆಲ್ ಮುಂಭಾಗ ಬಂದು ನಿಂತಿತ್ತು. ಇದನ್ನು ಗಮನಿಸಿದ ಸ್ಥಳೀಯರು, ಹೋಟೆಲ್‌ನಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ದರು.
ಇದನ್ನು ನಂಬಿದ ಸುಮಾರು 30 ರಿಂದ 50 ಮುಖವಾಡ ಧರಿಸಿದ ಪ್ರತಿಭಟನಾಕಾರರು ತಕ್ಷಣ ಹೋಟೆಲ್ ಆವರಣಕ್ಕೆ ಧಾವಿಸಿ, ಘೋಷಣೆಗಳನ್ನು ಕೂಗುತ್ತಾ ಮುತ್ತಿಗೆ ಹಾಕಿದರು. ಆದರೆ ಬಸ್‌ನಲ್ಲಿದ್ದವರು ನಿರಾಶ್ರಿತರಲ್ಲ, ಬದಲಿಗೆ ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಆಡಲು ಬಂದಿದ್ದ ಪಾಕಿಸ್ತಾನದ ಹದಿಹರೆಯದ ಆಟಗಾರರಾಗಿದ್ದರು.
ಸಕಾಲದಲ್ಲಿ ದೂರಾದ ತಪ್ಪು ತಿಳುವಳಿಕೆ!
ಹೋಟೆಲ್‌ನಲ್ಲಿದ್ದ ಆಟಗಾರರು ಮತ್ತು ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾಗ, ಸ್ಥಳೀಯ ರಿಫಾರ್ಮ್ ಯುಕೆ ಪಕ್ಷದ ಕೌನ್ಸಿಲರ್ ಜಾರ್ಜ್ ಮಾಡ್ವಿಕ್ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಹೋಟೆಲ್ ಮ್ಯಾನೇಜರ್ ಮತ್ತು ಪಾಕಿಸ್ತಾನ್ ತಂಡದ ಕೋಚ್ ಭೇಟಿಯಾದ ಮಾಡ್ವಿಕ್, ಆಟಗಾರರ ಐಡೆಂಟಿಟಿ ಕಾರ್ಡ್‌ಗಳನ್ನು ಪರಿಶೀಲಿಸಿದರು.
ಬಳಿಕ ಹೊರಬಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಫ್ರೆಂಡ್ಸ್, ನೀವು ತಪ್ಪು ತಿಳುವಳಿಕೆಯಿಂದ ಇಲ್ಲಿಗೆ ಬಂದಿದ್ದೀರಿ. ಒಳಗೆ ಇರುವುದು ಯಾವುದೇ ನಿರಾಶ್ರಿತರಲ್ಲ, ಬದಲಿಗೆ ಕ್ರಿಕೆಟ್ ಆಡಲು ಬಂದಿರುವ ಕ್ರೀಡಾಪಟುಗಳು” ಎಂದು ಮನವರಿಕೆ ಮಾಡಿಕೊಟ್ಟರು.
ಸತ್ಯ ತಿಳಿಯುತ್ತಿದ್ದಂತೆ ಪ್ರತಿಭಟನಾಕಾರರು ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ಕಾಲ್ಕಿತ್ತರು. ಹ್ಯಾಂಪ್‌ಶೈರ್ ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಪ್ರತಿಭಟನಾಕಾರರು ಶಾಂತಿಯುತವಾಗಿ ಚದುರಿದ್ದರು.
ರಾಜಕೀಯ ಆಕ್ರೋಶ ಮತ್ತು ಭದ್ರತೆ ಹೆಚ್ಚಳ:
ಬ್ರಿಟನ್‌ನಲ್ಲಿ ಇತ್ತೀಚೆಗೆ ಸಮುದ್ರ ದಾಟಿ ಬರುತ್ತಿರುವ ವಲಸಿಗರ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಘಟನೆಯು ತೀವ್ರ ಸಂಚಲನ ಮೂಡಿಸಿದೆ. ಪೋರ್ಟ್ಸ್‌ಮೌತ್ ನಾರ್ತ್‌ನ ಲೇಬರ್ ಪಕ್ಷದ ಸಂಸದೆ ಅಮಾಂಡಾ ಮಾರ್ಟಿನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, “ಇದು ಅತ್ಯಂತ ಕಳವಳಕಾರಿ ಸಂಗತಿ. ಸೋಷಿಯಲ್ ಮೀಡಿಯಾದಲ್ಲಿ ಹರಡುವ ವಿಷಕಾರಿ ಸುಳ್ಳು ಸುದ್ದಿಗಳು ಎಂತಹ ಅನಾಹುತ ಸೃಷ್ಟಿಸುತ್ತವೆ ಎಂಬುದಕ್ಕೆ ಇದು ಸಾಕ್ಷಿ” ಎಂದಿದ್ದಾರೆ.
ಇತ್ತ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ತಕ್ಷಣವೇ ಪಾಕಿಸ್ತಾನ್ ತಂಡದ ಮ್ಯಾನೇಜ್‌ಮೆಂಟ್ ಜೊತೆ ಮಾತನಾಡಿ ಆಟಗಾರರ ಕ್ಷೇಮ ಸಮಾಚಾರ ವಿಚಾರಿಸಿದೆ. ಅಲ್ಲದೆ, ಪ್ರವಾಸದ ಉಳಿದ ದಿನಗಳಲ್ಲಿ ಪಾಕಿಸ್ತಾನ್ ತಂಡಕ್ಕೆ ಗರಿಷ್ಠ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದೆ.
ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್: ಸೌತ್ ಝೋನ್ಗೆ ಸೋಲು ಕಟ್ಟಿಟ್ಟ ಬುತ್ತಿ!
ಮೈದಾನದಲ್ಲಿ ತಿರುಗೇಟು ನೀಡಿದ ಪಾಕ್ ಪಡೆ:
ಈ ಆಘಾತಕಾರಿ ಘಟನೆ ನಡೆದ ಮರುದಿನವೇ (ಸೆಪ್ಟೆಂಬರ್ 9) ಮೈದಾನಕ್ಕಿಳಿದ ಪಾಕಿಸ್ತಾನ್ ಅಂಡರ್-19 ತಂಡ, ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 177 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತಮಗಾದ ಮಾನಸಿಕ ಕಿರಿಕಿರಿಗೆ ಬ್ಯಾಟ್ ಮತ್ತು ಬಾಲ್ ಮೂಲಕವೇ ಉತ್ತರಿಸಿದೆ.




