ಏಷ್ಯನ್ ಗೇಮ್ಸ್ ವೀಕ್ಷಣೆಯಲ್ಲಿ ದಾಖಲೆ ಬರೆದ ಭಾರತ- ಪಾಕ್ ಪಂದ್ಯಗಳು..!
ಭಾರತ ಮತ್ತು ಪಾಕಿಸ್ತಾನ ನಡುವಿನ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ಹಾಗೂ ಹಾಕಿ ಸೆಮಿಫೈನಲ್ ಪಂದ್ಯಗಳು ಕ್ರೀಡಾಕೂಟದ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿವೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಘೋಷಿಸಿದೆ. ಈ ಕದನಗಳು ಅಭಿಮಾನಿಗಳಿಗೆ ಹಬ್ಬವಾಗಿದ್ದು, ಆಯೋಜಕರು ಮತ್ತು ಪ್ರಸಾರಕರಿಗೆ ಭಾರಿ ಆದಾಯ ತಂದಿವೆ. ಭಾರತ ಎರಡೂ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಕ್ರೀಡೆ ನಡೆಯಲಿ, ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಉಭಯ ದೇಶಗಳ ಕ್ರೀಡಾ ಕಾಳಗವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಇದರಿಂದ ಆಯೋಜಕರಿಗೂ ಹಾಗೂ ಪ್ರಸಾರಕರಿಬ್ಬರಿಗೂ ಖಜಾನೆ ತುಂಬುವುದು ಖಚಿತ. ಅದು ಮತ್ತೊಮ್ಮೆ ಸಾಭೀತಾಗಿದ್ದು, 2026 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪುರುಷರ ಕ್ರಿಕೆಟ್ ಫೈನಲ್ ಮತ್ತು ಹಾಕಿ ಸೆಮಿಫೈನಲ್ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯಗಳಾಗಿವೆ. ಇದನ್ನು ಏಷ್ಯಾ ಒಲಿಂಪಿಕ್ ಕೌನ್ಸಿಲ್ (OCA) ಭಾನುವಾರ ಅಧಿಕೃತವಾಗಿ ಘೋಷಿಸಿದೆ.
ಕ್ರಿಕೆಟ್ ಫೈನಲ್‌ಗೆ ಜನಸ್ತೋಮ
ಅಕ್ಟೋಬರ್ 3 ರಂದು ನಡೆದ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 211 ರನ್ ಗಳಿಸಿತು. ತಂಡದ ಪರ ಅಭಿಷೇಕ್ ಶರ್ಮಾ 61 ರನ್ ಮತ್ತು ತಿಲಕ್ ವರ್ಮಾ 22 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 192 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ, ಭಾರತ 19 ರನ್‌ಗಳಿಂದ ಗೆದ್ದು ಸತತ ಎರಡನೇ ಬಾರಿಗೆ ಏಷ್ಯನ್ ಕ್ರೀಡಾಕೂಟದ ಪುರುಷರ ಕ್ರಿಕೆಟ್ ಚಿನ್ನದ ಪದಕವನ್ನು ಗೆದ್ದುಕೊಂಡಿತು.
ಹಾಕಿ ಸೆಮಿಫೈನಲ್‌ನಲ್ಲೂ ಭಾರತಕ್ಕೆ ಜಯ
ಭಾರತ ಮತ್ತು ಪಾಕಿಸ್ತಾನ ನಡುವಿನ ಪುರುಷರ ಹಾಕಿ ಸೆಮಿಫೈನಲ್ ಪಂದ್ಯವು ಕ್ರಿಕೆಟ್ ಫೈನಲ್‌ಗೆ ಒಂದು ದಿನ ಮೊದಲು ನಡೆಯಿತು. ಈ ಕಠಿಣ ಹೋರಾಟದ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು 4-3 ಅಂತರದಿಂದ ಸೋಲಿಸಿತು. ಒಂದು ಹಂತದಲ್ಲಿ ಪಂದ್ಯ 3-3 ರಲ್ಲಿ ಸಮಬಲಗೊಂಡಿದ್ದರೂ, ಅಂತಿಮ ಹಂತದಲ್ಲಿ ಭಾರತವು ನಿರ್ಣಾಯಕ ಗೋಲು ಗಳಿಸಿ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ನಂತರ, ಫೈನಲ್‌ನಲ್ಲಿ, ಭಾರತ ತಂಡವು ಮಲೇಷ್ಯಾವನ್ನು 5-1 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಉಳಿಸಿಕೊಂಡಿತು. ಈ ಗೆಲುವಿನೊಂದಿಗೆ, ಭಾರತವು ಪುರುಷರ ಹಾಕಿಯಲ್ಲಿ ತನ್ನ ಐದನೇ ಏಷ್ಯನ್ ಕ್ರೀಡಾಕೂಟದ ಚಿನ್ನವನ್ನು ಗೆದ್ದುಕೊಂಡಿತು.
ದಾಖಲೆಯ ವೀಕ್ಷಣೆ
ಒಸಿಎ ಸಮನ್ವಯ ಸಮಿತಿ ಅಧ್ಯಕ್ಷ ತಯ್ಯಬ್ ಇಕ್ಬಾಲ್ ಅವರ ಪ್ರಕಾರ, ಭಾರತ-ಪಾಕಿಸ್ತಾನ ಕ್ರಿಕೆಟ್ ಫೈನಲ್ ಪಂದ್ಯವು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯವಾಗಿದೆ. ಇದಕ್ಕೂ ಮೊದಲು ನಡೆದ ಭಾರತ-ಪಾಕಿಸ್ತಾನ ಹಾಕಿ ಸೆಮಿಫೈನಲ್ ಪಂದ್ಯವು ಕ್ರೀಡಾಕೂಟದ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯವಾಗಿತ್ತು. ಆದಾಗ್ಯೂ, ಈ ಎರಡು ಪಂದ್ಯಗಳನ್ನು ವೀಕ್ಷಿಸಿದ ಪ್ರೇಕ್ಷಕರ ನಿಖರವಾದ ಸಂಖ್ಯೆಯನ್ನು ಒಸಿಎ ಬಹಿರಂಗಪಡಿಸಿಲ್ಲ.
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಭಾರತೀಯ ವೈಭವ್ ಸೂರ್ಯವಂಶಿ
ಏಷ್ಯನ್ ಕ್ರೀಡಾಕೂಟದಲ್ಲಿ ಹೆಚ್ಚಿನ ದಾಖಲೆಗಳು
ಆಯೋಜಕರ ಪ್ರಕಾರ, ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಒಟ್ಟು 54 ವಿಶ್ವ ದಾಖಲೆಗಳು, 11 ಜೂನಿಯರ್ ವಿಶ್ವ ದಾಖಲೆಗಳು, 89 ಏಷ್ಯನ್ ದಾಖಲೆಗಳು ಮತ್ತು 212 ಏಷ್ಯನ್ ಕ್ರೀಡಾಕೂಟದ ದಾಖಲೆಗಳು ದಾಖಲಾಗಿವೆ. ಮತ್ತೊಂದೆಡೆ, 2023 ರ ಹ್ಯಾಂಗ್‌ಝೌಗೆ ಹೋಲಿಸಿದರೆ OCA ಮಾರ್ಕೆಟಿಂಗ್ ಮತ್ತು ಪ್ರಾಯೋಜಕತ್ವದ ಆದಾಯವು ಶೇಕಡಾ 19 ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೊಡ್ಡ ಪಂದ್ಯಾವಳಿಯನ್ನು ಆಯೋಜಿಸುವಲ್ಲಿ ವಸತಿ ಮತ್ತು ಸಾರಿಗೆ ಸಮಸ್ಯೆಗಳ ಬಗ್ಗೆ ಟೀಕೆಗಳ ಹೊರತಾಗಿಯೂ, ಈ ಏಷ್ಯನ್ ಕ್ರೀಡಾಕೂಟಗಳು ಕ್ರೀಡಾ ಪ್ರದರ್ಶನದ ವಿಷಯದಲ್ಲಿ ವಿಶೇಷ ಮನ್ನಣೆಯನ್ನು ಗಳಿಸಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Sun, 4 October 26




