AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೇನ್​ನಲ್ಲಿ ಗೃಹ ಬಿಕ್ಕಟ್ಟು; ಸಣ್ಣ ಮನೆಗೂ 2 ಲಕ್ಷ ರೂ ಬಾಡಿಗೆ; ಲಕ್ಷಾಂತರ ಜನರು ಬೀದಿಗಿಳಿದು ಹೋರಾಟ

ಸ್ಪೇನ್ ದೇಶದಲ್ಲಿ ಮನೆ ಬಾಡಿಗೆ ದರಗಳು ಗಗನಕ್ಕೇರಿರುವುದನ್ನು ಪ್ರತಿಭಟಿಸಿ ಲಕ್ಷಾಂತರ ಜನರು ಬೃಹತ್ ರ‍್ಯಾಲಿ ನಡೆಸಿದ್ದಾರೆ. ಮ್ಯಾಡ್ರಿಡ್, ಬಾರ್ಸಿಲೋನಾದಂತಹ ದೊಡ್ಡ ನಗರದಲ್ಲಿ ಒಂದು ಚದರ ಮೀಟರ್ ಜಾಗಕ್ಕೆ 20-25 ಯೂರೋ ಬಾಡಿಗೆ ಇದೆ. ಸ್ಪೇನ್‌ನಲ್ಲಿ ಎದುರಾಗಿರುವ ತೀವ್ರ ಗೃಹ ಬಿಕ್ಕಟ್ಟು, ಪ್ರವಾಸೋದ್ಯಮದ ಪ್ರಭಾವ ಮತ್ತು ಸರ್ಕಾರದ ನಿಯಮಗಳ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಸ್ಪೇನ್​ನಲ್ಲಿ ಗೃಹ ಬಿಕ್ಕಟ್ಟು; ಸಣ್ಣ ಮನೆಗೂ 2 ಲಕ್ಷ ರೂ ಬಾಡಿಗೆ; ಲಕ್ಷಾಂತರ ಜನರು ಬೀದಿಗಿಳಿದು ಹೋರಾಟ
ಸ್ಪೇನ್​ನಲ್ಲಿ ಜನರ ಪ್ರತಿಭಟನೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 04, 2026 | 7:52 PM

Share

ಬಾರ್ಸಿಲೋನಾ, ಅಕ್ಟೋಬರ್ 4: ಯೂರೋಪ್​ನ ಪ್ರಮುಖ ರಾಷ್ಟ್ರಗಳಲ್ಲೊಂದೆನಿಸಿದ ಸ್ಪೇನ್​ನಲ್ಲಿ ತೀವ್ರ ಮಟ್ಟದ ಗೃಹ ಬಿಕ್ಕಟ್ಟು ಎದುರಾಗಿದೆ. ಅಗತ್ಯ ವಸತಿ ಸೌಲಭ್ಯದ ಅತೀವ ಕೊರತೆ ಆಗಿದೆ. ಮನೆಗಳ ಲಭ್ಯತೆ ಕಡಿಮೆ ಇರುವುದರಿಂದ ಬಾಡಿಗೆ ಸಿಕ್ಕಾಪಟ್ಟೆ ಏರುತ್ತಿದೆ. ಅದರಲ್ಲೂ ಪ್ರಮುಖ ನಗರಗಳಾದ ಮ್ಯಾಡ್ರಿಡ್, ಬಾರ್ಸಿಲೋನಾದಲ್ಲಂತೂ ಜನರು ಹೈರಾಣಾಗಿ ಹೋಗಿದ್ದಾರೆ. ಲಕ್ಷಾಂತರ ಜನರು ಬೀದಿಗಿಳಿದು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. “ಬಾಡಿಗೆಯನ್ನು ಶೇ. 50 ರಷ್ಟು ಇಳಿಸಿ, ಇಲ್ಲವೇ ನಾವು ಬಾಡಿಗೆ ನೀಡುವುದನ್ನು ತಡೆಯುತ್ತೇವೆ” (Rent Strike) ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಜನಾಕ್ರೋಶಕ್ಕೆ ಸರ್ಕಾರವೇ ಪತನಗೊಳ್ಳುವ ಸಾಧ್ಯತೆ ಇದೆ.

ಕಳೆದ ಐದು ವರ್ಷಗಳಲ್ಲಿ ಸ್ಪೇನ್‌ನಲ್ಲಿ ಮನೆ ಬಾಡಿಗೆ ದರಗಳು ಸರಾಸರಿ ಶೇ. 30 ರಿಂದ ಶೇ. 50 ರಷ್ಟು ಏರಿಕೆಯಾಗಿವೆ. ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾದಂತಹ ಮಹಾನಗರಗಳಲ್ಲಿ ಯುವಜನರು ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆದಾಯದ ಶೇ. 50 ಕ್ಕಿಂತ ಹೆಚ್ಚು ಭಾಗವನ್ನು ಕೇವಲ ಬಾಡಿಗೆಗಾಗಿಯೇ ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಧಾರಣ ಮನೆಗೆ 2 ಲಕ್ಷ ರೂ ಬಾಡಿಗೆ

ಪ್ರಮುಖ ನಗರಗಳಲ್ಲಿ ಒಂದು ಚದರ ಮೀಟರ್ ವಸತಿಗೆ ಸರಾಸರಿ 20ರಿಂದ 25 ಯೂರೋ ದರ ಇದೆ. ಅಂದರೆ, 1,000 ಚದರಡಿ ವಿಸ್ತೀರ್ಣದ ಮನೆಗೆ ಬರೋಬ್ಬರಿ 2 ಲಕ್ಷ ರುಪಾಯಿಗೂ ಹೆಚ್ಚಿನ ಬಾಡಿಗೆ ದರ ಚಾಲ್ತಿಯಲ್ಲಿದೆ. ಒಂದು ಅಂದಾಜು ಪ್ರಕಾರ ಸ್ಪೇನ್​ನಲ್ಲಿ ಮನೆಗಳಿಗೆ ಇರುವ ಬೇಡಿಕೆ ಪರಿಗಣಿಸಿದರೆ, ಸುಮಾರು 7 ಲಕ್ಷ ಮನೆಗಳ ಕೊರತೆ ಇದೆ. ಹೀಗಾಗಿ, ಬಾಡಿಗೆ ವಿಪರೀತ ಏರಲು ಕಾರಣವಾಗಿದೆ.

ಇದನ್ನೂ ಓದಿ: ಉಕ್ರೇನ್​ನ ಸುಮಿಯಲ್ಲಿ ರಷ್ಯನ್ ಡ್ರೋನ್ ದಾಳಿ; ಭಾರತೀಯ ವ್ಯಕ್ತಿಯ ಔಷಧ ಘಟಕ ಧ್ವಂಸ; ಒಬ್ಬನ ಸಾವು, ಹಲವರಿಗೆ ಗಾಯ

ಸ್ಪೇನ್ ಮನೆಗಳ ಬಾಡಿಗೆ ದರಕ್ಕೆ ಪ್ರವಾಸೋದ್ಯಮದ ಪರಿಣಾಮ

ಸಾಮಾನ್ಯ ನಾಗರಿಕರಿಗೆ ಬಾಡಿಗೆಗೆ ನೀಡುವ ಬದಲು, ಆಸ್ತಿ ಮಾಲೀಕರು ವಿದೇಶಿ ಪ್ರವಾಸಿಗರಿಗೆ ಅಲ್ಪಾವಧಿ ವಾಸ್ತವ್ಯಕ್ಕಾಗಿ (Short-term holiday rentals) ಮನೆಗಳನ್ನು ಹೆಚ್ಚಿನ ದರಕ್ಕೆ ಬಾಡಿಗೆಗೆ ನೀಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ನಾಗರಿಕರಿಗೆ ದೀರ್ಘಾವಧಿಯ ಬಾಡಿಗೆ ಮನೆಗಳ ತೀವ್ರ ಅಭಾವ ಎದುರಾಗಿದೆ.

ವಿದೇಶಿ ರಿಯಲ್ ಎಸ್ಟೇಟ್ ಹೂಡಿಕೆದಾರರು ಮತ್ತು ಕಾರ್ಪೊರೇಟ್ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ವಸತಿ ಸಮುಚ್ಚಯಗಳನ್ನು ಖರೀದಿಸಿ, ಕೃತಕವಾಗಿ ಬಾಡಿಗೆ ದರಗಳನ್ನು ಹೆಚ್ಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜನಸಾಮಾನ್ಯರಲ್ಲಿ ಪ್ರತಿಭಟನೆಯ ಕಿಡಿ ಹಚ್ಚಿಸಿದ ಅಜ್ಜಿ

ಬಾಡಿಗೆ ಪಾವತಿಸಲು ಸಾಧ್ಯವಾಗದ ಸಾವಿರಾರು ಕುಟುಂಬಗಳನ್ನು ಮತ್ತು ಯುವಕರನ್ನು ಕಾನೂನುಬದ್ಧವಾಗಿ ಮನೆಗಳಿಂದ ಹೊರಹಾಕಲಾಗುತ್ತಿದೆ. ಸ್ಥಳೀಯ ಯುವಸಮೂಹವು 30 ವರ್ಷ ದಾಟಿದರೂ ಸ್ವಂತ ಮನೆ ಅಥವಾ ಸ್ವತಂತ್ರ ವಾಸ್ತವ್ಯಕ್ಕೆ ತೆರಳಲು ಸಾಧ್ಯವಾಗದೆ ತಂದೆ-ತಾಯಿಯರ ಜೊತೆಯೇ ವಾಸಿಸುವಂತಾಗಿದೆ. ಇತ್ತೀಚೆಗೆ, ಮೇರಿಕಾರ್ಮನ್ ಅಬಾಸ್ಕಲ್ ಎನ್ನುವ 87 ವರ್ಷದ ಅಜ್ಜಿಯೊಬ್ಬಳನ್ನು, ಮನೆ ಬಾಡಿಗೆ ಕಟ್ಟಿಲ್ಲವೆಂದು ಹೊರಹಾಕಲಾಗಿತ್ತು. ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಲು ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: ‘ನಿಮ್ಮ ಬಗ್ಗೆ ಹೆಮ್ಮೆಯಿದೆ’; ಆಸ್ಪತ್ರೆಯಲ್ಲಿ ಪೈಲಟ್ ಸ್ಮಿತ್ ಮಚ್ಚರ್ ಹಣೆಗೆ ಮುತ್ತನ್ನಿಟ್ಟ ಯುಎಇ ಉಪ ಪ್ರಧಾನಿ

ಸರ್ಕಾರದ ನಡೆ ಮತ್ತು ಸವಾಲುಗಳು

ಸ್ಪೇನ್ ಸರ್ಕಾರವು ಹೊಸ ವಸತಿ ಕಾನೂನು (Housing Law) ಜಾರಿಗೆ ತಂದು ಬಾಡಿಗೆ ದರಗಳ ಮೇಲೆ ಪರಿಮಿತಿ ಹೇರಲು ಪ್ರಯತ್ನಿಸಿದರೂ, ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಸಾರ್ವತ್ರಿಕ ಬಾಡಿಗೆ ಮಾರುಕಟ್ಟೆಯಿಂದ ಹಿಂಪಡೆದು ಪ್ರವಾಸಿ ವಸತಿಗಳಾಗಿ ಪರಿವರ್ತಿಸುತ್ತಿರುವುದು ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಬಾಡಿಗೆದಾರರಿಗೆ ಅನುಕೂಲವಾಗುವಂತಹ ಕಾನೂನುಗಳನ್ನು ತರಲು ಸರ್ಕಾರ ಮಾಡಿರುವ ಪ್ರಯತ್ನವು ಸಂಸತ್ತಿನಲ್ಲಿ ವಿಫಲವಾಗಿದೆ.

ಸಾಮಾನ್ಯ ನಾಗರಿಕರು ಮತ್ತು ವಸತಿ ಹಕ್ಕುಗಳ ಹೋರಾಟಗಾರರು ವಸತಿಯನ್ನು ‘ಲಾಭದಾಯಕ ವ್ಯಾಪಾರ’ ಎಂದು ನೋಡುವ ಬದಲು ‘ಮೂಲಭೂತ ಮಾನವ ಹಕ್ಕು’ ಎಂದು ಪರಿಗಣಿಸಿ ಕಟ್ಟುನಿಟ್ಟಿನ ನಿಯಂತ್ರಣ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More