AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಬಗ್ಗೆ ಹೆಮ್ಮೆಯಿದೆ’; ಆಸ್ಪತ್ರೆಯಲ್ಲಿ ಪೈಲಟ್ ಸ್ಮಿತ್ ಮಚ್ಚರ್ ಹಣೆಗೆ ಮುತ್ತನ್ನಿಟ್ಟ ಯುಎಇ ಉಪ ಪ್ರಧಾನಿ

ಯುಎಇ ಉಪ ಪ್ರಧಾನಿ ಹಾಗೂ ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಇಂದು (ಶನಿವಾರ) ಅಬುಧಾಬಿ ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರ ಜೀವ ರಕ್ಷಿಸಿದ ಭಾರತೀಯ ಪೈಲಟ್‌ನ ಧೈರ್ಯ, ಸಾಹಸ ಮತ್ತು ಜವಾಬ್ದಾರಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಶೇಖ್ ಹಮ್ದಾನ್ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಅತ್ಯುನ್ನತ ಮಟ್ಟದ ಧೈರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಬಣ್ಣಿಸಿದ್ದು, ಯುಎಇ ನಾಯಕತ್ವದ ಪರವಾಗಿ ಭಾರತೀಯ ಪೈಲಟ್‌ಗೆ ಅಭಿನಂದನೆ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

‘ನಿಮ್ಮ ಬಗ್ಗೆ ಹೆಮ್ಮೆಯಿದೆ’; ಆಸ್ಪತ್ರೆಯಲ್ಲಿ ಪೈಲಟ್ ಸ್ಮಿತ್ ಮಚ್ಚರ್ ಹಣೆಗೆ ಮುತ್ತನ್ನಿಟ್ಟ ಯುಎಇ ಉಪ ಪ್ರಧಾನಿ
ಪೈಲಟ್ ಸ್ಮಿತ್ ಮಚ್ಚರ್ ಆರೋಗ್ಯ ವಿಚಾರಿಸಿದ ಯುಎಇ ಉಪಪ್ರಧಾನಿImage Credit source: TV9
ಸುಷ್ಮಾ ಚಕ್ರೆ
|

Updated on:Oct 03, 2026 | 7:10 PM

Share

ಅಬುಧಾಬಿ, ಅಕ್ಟೋಬರ್ 3: ಫ್ಲೈದುಬೈ ವಿಮಾನದ ಕಾಕ್​ಪಿಟ್​​ನಲ್ಲಿ ಓಮನ್ ಕೋ-ಪೈಲಟ್​​ನಿಂದ ದಾಳಿಗೆ ಒಳಗಾಗಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತನ್ನ ಪ್ರಾಣವನ್ನು ಒತ್ತೆಯಿಟ್ಟು 174 ಪ್ರಯಾಣಿಕರ ಜೀವ ಕಾಪಾಡಿದ್ದರು. ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚರ್​ ಅವರನ್ನು ಭೇಟಿಯಾದ ಯುಎಇ ಉಪ ಪ್ರಧಾನಿ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ಅವರ ಧೈರ್ಯ, ಜವಾಬ್ದಾರಿ ಹಾಗೂ ಜನರ ಮೇಲಿನ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಗುಜರಾತ್​ ಮೂಲದ ಸ್ಮಿತ್ ಮಚ್ಚರ್ ಈ ಮೊದಲು ಭಾರತದ ಸ್ಪೈಸ್​ಜೆಟ್​ ಪೈಲಟ್ ಆಗಿದ್ದರು.​ ಫ್ಲೈದುಬೈ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ತಮ್ಮ ವಿಮಾನದಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ತೋರಿದ ಸಾಹಸ ಜಗತ್ತಿನಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾಲ್ ಮಾಡಿ ಸ್ಮಿತ್ ಮಚ್ಚರ್ ಜೊತೆ ಮಾತನಾಡಿ, ಅಭಿನಂದಿಸಿದ್ದರು. ಆದರೆ, ವಿಪಕ್ಷಗಳು ಸ್ಮಿತ್ ಮಚ್ಚರ್ ಧೈರ್ಯ, ಶೌರ್ಯದ ಬಗ್ಗೆ ಒಂದು ಅಭಿನಂದನಾ ಪೋಸ್ಟ್ ಕೂಡ ಹಾಕದಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಇಸ್ರೇಲ್ ಪ್ರಧಾನಿ ನೆತನ್ಯಾಹು ಸೇರಿದಂತೆ ಜಗತ್ತಿನಾದ್ಯಂತ ಹಲವು ನಾಯಕರು ಸ್ಮಿತ್ ಮಚ್ಚರ್ ಅವರನ್ನು ಹೀರೋ ಎಂದು ಕೊಂಡಾಡಿದ್ದಾರೆ.

ಇಂದು ತಮ್ಮ ಆಸ್ಪತ್ರೆ ಭೇಟಿಯ ಫೋಟೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಯುಎಇ ಉಪ ಪ್ರಧಾನಿ ಶೇಖ್ ಹಮ್ದಾನ್, “ಧೈರ್ಯ, ಜವಾಬ್ದಾರಿ ಹಾಗೂ ಮಾನವ ಜೀವದ ಮೇಲಿನ ಕಾಳಜಿಯ ಅತ್ಯುನ್ನತ ಮೌಲ್ಯಗಳನ್ನು ಪ್ರದರ್ಶಿಸಿದ ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಭೇಟಿಯ ಸಮಯದಲ್ಲಿ ನಮ್ಮಿಂದ ಹಾಗೂ ದೇಶದ ನಾಯಕತ್ವದಿಂದ ಅವರಿಗೆ ಭಾರೀ ಮೆಚ್ಚುಗೆ ಮತ್ತು ಪ್ರಶಂಸೆಗಳನ್ನು ಸಲ್ಲಿಸಲಾಯಿತು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ

“ಅವರು ನಮ್ಮ ತಂಡದ ಭಾಗವಾಗಿರುವುದಕ್ಕೆ, ನಮ್ಮ ರಾಷ್ಟ್ರದ ಕಥೆಯ ಭಾಗವಾಗಿರುವುದಕ್ಕೆ ಮತ್ತು ಯುಎಇ ಪ್ರತಿನಿಧಿಸುವ ಕರುಣೆ, ಶಾಂತಿ ಹಾಗೂ ಮಾನವೀಯ ಮೌಲ್ಯಗಳ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ” ಎಂದು ಅವರು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ಕ್ಯಾಪ್ಟನ್ ಸ್ಮಿತ್ ಸಂಭಾಷಣೆ:

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ವೀಡಿಯೊ ಕರೆಯಲ್ಲಿ ದುರಂತದ ಭೀಕರ ಕ್ಷಣಗಳನ್ನು ಮೆಲಕುಹಾಕಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಗಾಯಗೊಂಡು ಕೆಳಗೆ ಬಿದ್ದಾಗಲೂ ವಿಮಾನವು ಕೆಳಕ್ಕೆ ಕುಸಿಯುತ್ತಿರುವುದು ತಮಗೆ ಅನುಭವಕ್ಕೆ ಬಂದಿತ್ತು ಎಂದು ತಿಳಿಸಿದರು.

“ನಾನು ರಕ್ತಸಿಕ್ತನಾಗಿ ಕೆಳಗೆ ಬಿದ್ದಿದ್ದಾಗ, ವಿಮಾನವು ತೀವ್ರವಾಗಿ ಕೆಳಗೆ ಕುಸಿಯುತ್ತಿರುವುದು ನನಗೆ ಅರ್ಥವಾಯಿತು. ಆಗ ನನಗೆ ಅನಿಸಿದ್ದು ಒಂದೇ: ‘ಸ್ಮಿತ್, ಇದು ನಿನ್ನ ಕೊನೆಯ ಯತ್ನ, ಹೇಗಾದರೂ ಮಾಡಿ ಕಾಕ್‌ಪಿಟ್ ಬಾಗಿಲು ತೆರೆ’ ಎಂದು. ನನ್ನ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದಾಗಲೂ ನಾನು ಬಾಗಿಲನ್ನು ಅನ್‌ಲಾಕ್ ಮಾಡುವಲ್ಲಿ ಯಶಸ್ವಿಯಾದೆ. ತಕ್ಷಣವೇ ಪ್ರಯಾಣಿಕರು ಒಳಬಂದರು. ಈ ರಕ್ಷಣಾ ಕಾರ್ಯದಲ್ಲಿ ವಿಮಾನದಲ್ಲಿದ್ದ ಮಿಕ್ಕ ಸಿಬ್ಬಂದಿ ಹಾಗೂ ಪ್ರಯಾಣಿಕರ ಪಾತ್ರವೂ ಅಷ್ಟೇ ದೊಡ್ಡದಿದೆ” ಎಂದು ಸ್ಮಿತ್ ಪ್ರಧಾನಿ ಮೋದಿಯವರಿಗೆ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ‘ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸಾಹಸದ ಬಗ್ಗೆ ಮೌನವೇಕೆ?’; ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿಶನ್ ರೆಡ್ಡಿ ವಾಗ್ದಾಳಿ

ಘಟನೆಯ ಹಿನ್ನೆಲೆ:

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿದ್ದಾಗ ಒಮನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಚಾಕುವಿನಿಂದ ಭೀಕರ ದಾಳಿ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದರೂ ಸ್ಮಿತ್ ಕಾಕ್‌ಪಿಟ್ ಬಾಗಿಲು ತೆರೆದಿದ್ದರಿಂದ, ಒಳಬಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ದಾಳಿಕೋರನನ್ನು ಕಟ್ಟಿಹಾಕಿದರು. ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು ಸ್ಮಿತ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ವಿಮಾನದಲ್ಲಿದ್ದ ಮತ್ತೊಂದು ಜೋಡಿ ಪೈಲಟ್‌ಗಳು ತಕ್ಷಣವೇ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು, ಸೌದಿ ಅರೇಬಿಯಾದ ತಬುಕ್ ವಿಮಾನನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದರು. ವಿಮಾನದಲ್ಲಿದ್ದ ವೈದ್ಯರು ಕ್ಯಾಪ್ಟನ್‌ಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:09 pm, Sat, 3 October 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More