‘ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸಾಹಸದ ಬಗ್ಗೆ ಮೌನವೇಕೆ?’; ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಕಿಶನ್ ರೆಡ್ಡಿ ವಾಗ್ದಾಳಿ
ಫ್ಲೈದುಬೈ ವಿಮಾನದ ಕ್ಯಾಪ್ಟನ್ ಮಚ್ಚರ್ ಅವರ ಧೈರ್ಯ, ಸಾಹಸದ ಬಗ್ಗೆ ಇಡೀ ರಾಷ್ಟ್ರ ಹೆಮ್ಮೆಪಡುತ್ತದೆ. ಆದರೆ, ಕಾಂಗ್ರೆಸ್ ನಾಯಕರೇಕೆ ಈ ಬಗ್ಗೆ ಮೌನ ತಳೆದಿದ್ದಾರೆ? ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ. 9/11 ರೀತಿಯ ಮತ್ತೊಂದು ದಾಳಿಯನ್ನು ತಡೆಯಲು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡಿದ ಸ್ಮಿತ್ ಅವರ ಧೈರ್ಯ ಮತ್ತು ತ್ಯಾಗವನ್ನು ಇಡೀ ಜಗತ್ತು ಅಭಿನಂದಿಸಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದು ಕಿಶನ್ ರೆಡ್ಡಿ ಟೀಕಿಸಿದ್ದಾರೆ. ಕಾಕ್ಪಿಟ್ನಲ್ಲಿ ಕೋ-ಪೈಲಟ್ನಿಂದ ದಾಳಿಗೊಳಗಾಗಿದ್ದ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಇದೀಗ ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಧೈರ್ಯಕ್ಕೆ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೆತನ್ಯಾಹು, ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿದಂತೆ ಜಾಗತಿಕ ನಾಯಕರಿಂದಲೂ ಪ್ರಶಂಸೆಗಳು ವ್ಯಕ್ತವಾಗಿದೆ.

ನವದೆಹಲಿ, ಅಕ್ಟೋಬರ್ 2: ಇಸ್ರೇಲ್ನ ಟೆಲ್ ಅವೀವ್ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿ 9/11 ಮಾದರಿಯ ಭೀಕರ ವಿಮಾನ ದುರಂತವನ್ನು ತಪ್ಪಿಸಿದ ಭಾರತದ ವೀರ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಅದಮ್ಯ ಶೌರ್ಯವನ್ನು ವಿಶ್ವದ ಪ್ರಮುಖ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಘಟನೆ ನಡೆದು 2 ದಿನಗಳಾದರೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ನೆಹರು ಕುಟುಂಬವು ಈ ಕುರಿತು ಮೌನ ವಹಿಸಿರುವುದನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ತೀವ್ರವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಭಾರತೀಯರು ತೋರಿಸಿದ ಧೈರ್ಯವನ್ನು ಗುರುತಿಸುವ ಮತ್ತು ಪ್ರಶಂಸಿಸುವ ಸಾಮಾನ್ಯ ಜ್ಞಾನವೂ ಇಲ್ಲದಿರುವುದು ಆಶ್ಚರ್ಯಕರವಾಗಿದೆ ಎಂದು ಕಿಶನ್ ರೆಡ್ಡಿ ವ್ಯಂಗ್ಯವಾಡಿದ್ದಾರೆ. ಅರ್ಥಹೀನ ವಿಷಯಗಳಿಗೆ ಪ್ರತಿಕ್ರಿಯಿಸುವ ಮತ್ತು ಜಗತ್ತನ್ನು ಬದಲಾಯಿಸುವ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ, ಈ ಆಘಾತಕಾರಿ ಘಟನೆ ಮತ್ತು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಬಗ್ಗೆ ಮಾತನಾಡಿಲ್ಲ. ಅವರ ಧೈರ್ಯವನ್ನು ಹೊಗಳುವ ಒಂದೇ ಒಂದು ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಸಹ ಮಾಡಿಲ್ಲ ಎಂದು ಕಿಶನ್ ರೆಡ್ಡಿ ಟೀಕಿಸಿದ್ದಾರೆ.
యావద్భారతం గర్వపడుతున్న కెప్టెన్ స్మిత్ మచ్చర్.. మరో 9/11 తరహా ఘటన జరగకుండా ప్రాణాలను పణంగా పెట్టడాన్ని, అతని ధైర్యసాహసాలను చూసి యావత్ ప్రపంచం హర్షించి.. ఒక రోజు పూర్తయింది.
అయినా.. ఒక భారతీయుడు ప్రదర్శించిన ఈ అసాధారణ ధైర్యసాహసాలను కనీసం గుర్తించి, అభినందించాలన్న ఇంగిత జ్ఞానం…
— G Kishan Reddy (@kishanreddybjp) October 2, 2026
ಇದನ್ನೂ ಓದಿ: ಫ್ಲೈದುಬೈ ಸಾಹಸಿ ಭಾರತೀಯ ಪೈಲಟ್ ಸ್ಮಿತ್ ಮಚ್ಛಾರ್‌ಗೆ ರಾಜ್ಯ ಪ್ರಶಸ್ತಿ ಘೋಷಿಸಿದ ಗುಜರಾತ್ ಸರ್ಕಾರ
ಸೋನಿಯಾ ಗಾಂಧಿಯವರ ಕುಟುಂಬದ ನಿಜವಾದ ಸಮಸ್ಯೆ ಏನು? ಭಾರತ ಮತ್ತು ಭಾರತೀಯರ ಬಗ್ಗೆ ಏನಾದರೂ ಒಳ್ಳೆಯದು ನಡೆದಾಗ ಮತ್ತು ಇಡೀ ಜಗತ್ತು ಭಾರತೀಯರ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಹೊಗಳಿದಾಗ ಅವರಿಗೆ ಅದು ಏಕೆ ಇಷ್ಟವಾಗುವುದಿಲ್ಲ? ಎಂದು ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ. ಅಂತಾರಾಷ್ಟ್ರೀಯ ನಾಯಕರು ಒಬ್ಬ ಭಾರತೀಯನನ್ನು ಅವರ ಧೈರ್ಯಕ್ಕಾಗಿ ಹೊಗಳಿದಾಗ, ನೆಹರು ಕುಟುಂಬಕ್ಕೆ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಅಭ್ಯಾಸವಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ಶೀಘ್ರದಲ್ಲೇ ರಾಜಕೀಯದಿಂದ ಕಣ್ಮರೆಯಾಗುತ್ತದೆ ಎಂದು ಕಿಶನ್ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
One full day has passed since Global leaders across the world have saluted the bravery of Indian hero Capt. Smit Machchhar who averted a 9/11 like incident.
However, Sonia Gandhi, Rahul Gandhi and Priyanka Gandhi have not even had the decency to acknowledge this act of bravery…
— G Kishan Reddy (@kishanreddybjp) October 2, 2026
ಕಿಶನ್ ರೆಡ್ಡಿಯ ಪೋಸ್ಟ್ನಲ್ಲೇನಿದೆ?:
“9/11 ಮಾದರಿಯ ದುರಂತವನ್ನು ತಪ್ಪಿಸಿದ ಭಾರತದ ವೀರ ಯೋಧ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯವನ್ನು ವಿಶ್ವದಾದ್ಯಂತ ಜಾಗತಿಕ ನಾಯಕರು ಕೊಂಡಾಡಿ ಇಡೀ ಒಂದು ದಿನ ಕಳೆದಿದೆ. ಆದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಭಾರತೀಯನೊಬ್ಬನ ಈ ಅಸಾಧಾರಣ ಶೌರ್ಯ ಮತ್ತು ಸಾಹಸವನ್ನು ಕನಿಷ್ಠ ಸೌಜನ್ಯಕ್ಕಾದರೂ ಅಭಿನಂದಿಸಲು ಸಾಧ್ಯವಾಗಿಲ್ಲ. ಜಗತ್ತಿನ ಪ್ರತಿಯೊಂದು ವಿಷಯದ ಬಗ್ಗೆಯೂ ಮಾತನಾಡುವ ರಾಹುಲ್ ಗಾಂಧಿ ಅವರಿಗೆ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕುರಿತು ಮಾತನಾಡುವುದು ಹಾಗಿರಲಿ, ಸಾಮಾಜಿಕ ಜಾಲತಾಣದಲ್ಲೊಂದು ಪೋಸ್ಟ್ ಹಂಚಿಕೊಳ್ಳಲು ಕೂಡ ಸಾಧ್ಯವಾಗಿಲ್ಲ. ಸೋನಿಯಾ ಕುಟುಂಬಕ್ಕೆ ಬಂದಿರುವ ಸಮಸ್ಯೆಯಾದರೂ ಏನು? ಭಾರತ ಮತ್ತು ಭಾರತೀಯರ ಯಾವುದೇ ಒಳ್ಳೆಯ ಸಾಧನೆಯನ್ನು ಗುರುತಿಸಲು ಅವರು ಏಕೆ ಸಿದ್ಧರಿಲ್ಲ? ಭಾರತೀಯನೊಬ್ಬ ತನ್ನ ಸಾಹಸಕ್ಕಾಗಿ ಪಡೆಯುತ್ತಿರುವ ಜಾಗತಿಕ ಶ್ಲಾಘನೆಯನ್ನು ಅವರಿಗೆ ಜೀರ್ಣಿಸಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಸಚಿವ ಕಿಶನ್ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೋ-ಪೈಲಟ್ನಿಂದ ಗಾಯಗೊಂಡಿದ್ದ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಛಾರ್ ಚಿಕಿತ್ಸೆಗಾಗಿ ಸೌದಿಯಿಂದ ದುಬೈಗೆ ಏರ್‌ಲಿಫ್ಟ್
ಫ್ಲೈದುಬೈ ವಿಮಾನದಲ್ಲಿ ಓಮನ್ ಮೂಲದ ಕೋ-ಪೈಲಟ್‌ನ ಭೀಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಭಾರತದ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ದುಬೈನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಜರಾತ್ ಮೂಲದ ಸ್ಮಿತ್ ಅವರ ಕುಟುಂಬವು ಬಳಿಕ ಮುಂಬೈನಲ್ಲಿ ವಾಸವಾಗಿತ್ತು. ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕಳೆದ 4 ವರ್ಷಗಳಿಂದ ಫ್ಲೈದುಬೈ ಸಂಸ್ಥೆಯಲ್ಲಿ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಭಾರತದ ‘ಸ್ಪೈಸ್‌ಜೆಟ್’ ವಿಮಾನಯಾನ ಸಂಸ್ಥೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Fri, 2 October 26




