AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲೈದುಬೈ ಸಾಹಸಿ ಭಾರತೀಯ ಪೈಲಟ್‌ ಸ್ಮಿತ್ ಮಚ್ಛಾರ್‌ಗೆ ರಾಜ್ಯ ಪ್ರಶಸ್ತಿ ಘೋಷಿಸಿದ ಗುಜರಾತ್ ಸರ್ಕಾರ

ಕಾಕ್‌ಪಿಟ್‌ನಲ್ಲಿ ಇರಿತಕ್ಕೊಳಗಾಗಿಯೂ ಸಮಯಪ್ರಜ್ಞೆಯಿಂದ ಓಮನ್ ಮೂಲದ ಕೋ-ಪೈಲಟ್ ವಿಮಾನ ಪತನಗೊಳಿಸಲು ನಡೆಸಿದ್ದ ಭೀಕರ ಸಂಚನ್ನು ವಿಫಲಗೊಳಿಸಿದ ಭಾರತೀಯ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಅದಮ್ಯ ಶೌರ್ಯಕ್ಕೆ ಗುಜರಾತ್ ಸರ್ಕಾರ ಗೌರವ ಸಲ್ಲಿಸಿದೆ. ಸ್ಮಿತ್ ಅವರಿಗೆ ರಾಜ್ಯದ ಉನ್ನತ 'ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ' ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘೋಷಿಸಿದ್ದಾರೆ. ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ಸ್ಮಿತ್ ಮಚ್ಛಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದುಬೈಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ.

ಫ್ಲೈದುಬೈ ಸಾಹಸಿ ಭಾರತೀಯ ಪೈಲಟ್‌ ಸ್ಮಿತ್ ಮಚ್ಛಾರ್‌ಗೆ ರಾಜ್ಯ ಪ್ರಶಸ್ತಿ ಘೋಷಿಸಿದ ಗುಜರಾತ್ ಸರ್ಕಾರ
ಸ್ಮಿತ್ ಮಚ್ಛಾರ್
ಸುಷ್ಮಾ ಚಕ್ರೆ
|

Updated on: Oct 01, 2026 | 6:15 PM

Share

ಅಹಮದಾಬಾದ್, ಅಕ್ಟೋಬರ್ 1: ಫ್ಲೈದುಬೈ ವಿಮಾನದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು 9/11 ಮಾದರಿಯ ಭಯೋತ್ಪಾದನಾ ದಾಳಿಯನ್ನು ತಡೆದು ನೂರಾರು ಜೀವಗಳನ್ನು ರಕ್ಷಿಸಿದ ಗುಜರಾತ್ ಮೂಲದ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಅದಮ್ಯ ಶೌರ್ಯಕ್ಕೆ ಇಡೀ ಜಗತ್ತೇ ಶ್ಲಾಘನೆ ವ್ಯಕ್ತಪಡಿಸುತ್ತಿದೆ. ಈ ನಡುವೆ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕ್ಯಾಪ್ಟನ್ ಸ್ಮಿತ್ ಅವರಿಗೆ ರಾಜ್ಯದ ಅತ್ಯುನ್ನತ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’  ನೀಡಿ ಗೌರವಿಸುವುದಾಗಿ ಘೋಷಿಸಿದ್ದಾರೆ.

174 ಜನರ ಪ್ರಾಣ ಉಳಿಸಿದ ಈ ಸಾಹಸಿ ಪೈಲಟ್ ಸ್ಮಿತ್ ಮಚ್ಛಾರ್ ಅವರ ಅಸಾಧಾರಣ ಶೌರ್ಯವನ್ನು ಗೌರವಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸ್ಮಿತ್ ಅವರಿಗೆ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ನೀಡಿ ಗೌರವಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.

“ಇಸ್ರೇಲ್‌‌ಗೆ ತೆರಳುತ್ತಿದ್ದ ವಿಮಾನದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ತೋರಿಸಿದ ಸಾಹಸವನ್ನು ಇಂದು ಇಡೀ ಜಗತ್ತು ಗೌರವಿಸುತ್ತಿದೆ. ದಾಳಿಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, 174 ಪ್ರಯಾಣಿಕರ ಪ್ರಾಣ ಉಳಿಸಲು ಅವರು ತೋರಿದ ಅದಮ್ಯ ಧೈರ್ಯ ಅತ್ಯಂತ ಪ್ರೇರಣಾದಾಯಿಕ. ಗುಜರಾತ್‌ನ ಈ ಧೀರ ಪುತ್ರ ತನ್ನ ಶೌರ್ಯದ ಮೂಲಕ ಇಡೀ ಜಗತ್ತಿನಲ್ಲಿ ಭಾರತ ಮತ್ತು ಗುಜರಾತ್‌ನ ಹೆಸರನ್ನು ಎತ್ತಿ ಹಿಡಿದಿದ್ದಾರೆ” ಎಂದು ಸಿಎಂ ಭೂಪೇಂದ್ರ ಪಟೇಲ್ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಸ್ಮಿತ್ ಮಚ್ಚರ್ ಕುಟುಂಬದ ಜತೆ ಮೋದಿ ಮಾತುಕತೆ: ಮತ್ತೊಂದು 9/11 ಮಾದರಿಯ ಘಟನೆ ನಡೆಯದಂತೆ ಸ್ಮಿತ್ ತಡೆದಿದ್ದಾರೆ ಎಂದ ಪ್ರಧಾನಿ

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕೂಡ, “ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ನೂರಾರು ಜನರ ಜೀವ ಉಳಿಸಿದ ‘ಮುಂಬೈನ ಮಗ’ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಒಬ್ಬ ನಿಜವಾದ ರಿಯಲ್ ಹೀರೋ. ತೀವ್ರವಾಗಿ ಗಾಯಗೊಂಡಿದ್ದರೂ ಅವರು ತೋರಿಸಿದ ಸಮಯಪ್ರಜ್ಞೆ ಮತ್ತು ಧೈರ್ಯ ಮಾದರಿಯಾದದ್ದು. ಕಷ್ಟದ ಸಮಯದಲ್ಲಿ ತಕ್ಷಣವೇ ತಂಡವಾಗಿ ಕೆಲಸ ಮಾಡಿ ವಿಮಾನವನ್ನು ಸುರಕ್ಷಿತವಾಗಿ ರಕ್ಷಿಸಿದ ಎಲ್ಲಾ ಪ್ರಯಾಣಿಕರಿಗೂ ನನ್ನ ಸಲಾಮ್. ಸ್ಮಿತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಶ್ಲಾಘಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಸ್ಮಿತ್ ಅವರನ್ನು ‘ರಿಯಲ್ ಹೀರೋ’ ಎಂದು ಬಣ್ಣಿಸಿದ್ದು, ಭಾರೀ ದುರಂತವನ್ನು ತಪ್ಪಿಸಿದ ಅವರ ಶೌರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ಇದನ್ನೂ ಓದಿ: ಕೋ-ಪೈಲಟ್​​ನಿಂದ ಗಾಯಗೊಂಡಿದ್ದ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಛಾರ್ ಚಿಕಿತ್ಸೆಗಾಗಿ ಸೌದಿಯಿಂದ ದುಬೈಗೆ ಏರ್‌ಲಿಫ್ಟ್

ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಹಿನ್ನೆಲೆ:

ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಕುಟುಂಬ ಮೂಲತಃ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಗ್ರಾಮವೊಂದಕ್ಕೆ ಸೇರಿದವರಾಗಿದ್ದು, ನಂತರ ಮುಂಬೈಗೆ ವಲಸೆ ಬಂದು ಘಾಟ್‌ಕೋಪರ್ ಉಪನಗರದಲ್ಲಿ ನೆಲೆಸಿತ್ತು. ಸ್ಮಿತ್ ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿದ್ದು, ಅವರ ಪತ್ನಿ ಸೋನಲ್ ಅಮ್ರೇಲಿ ಜಿಲ್ಲೆಯ ಸಾವರಕುಂಡ್ಲ ಮೂಲದವರಾಗಿದ್ದಾರೆ. ಸ್ಮಿತ್ ಮಚ್ಛಾರ್ ಅವರು ಬೋಯಿಂಗ್ 737 ವಿಮಾನ ಹಾರಾಟದಲ್ಲಿ 13ಕ್ಕೂ ಹೆಚ್ಚು ವರ್ಷಗಳ ವಾಣಿಜ್ಯ ವಿಮಾನ ಚಾಲನಾ ಅನುಭವ ಹೊಂದಿದ್ದಾರೆ. 2022ರಿಂದ ಫ್ಲೈದುಬೈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಅದಕ್ಕೂ ಮುನ್ನ ಭಾರತದ ಖಾಸಗಿ ವಿಮಾನಯಾನ ಸಂಸ್ಥೆ ‘ಸ್ಪೈಸ್‌ಜೆಟ್’ನಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.

ಜವಳಿ ಉದ್ಯಮದ ಕುಟುಂಬದಿಂದ ಬಂದ ಸ್ಮಿತ್, ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡುವಾಗ ಏವಿಯೇಷನ್ ಸೆಮಿನಾರ್‌ ಒಂದರಲ್ಲಿ ಭಾಗವಹಿಸಿ ಪೈಲಟ್ ಆಗುವ ಸ್ಫೂರ್ತಿ ಪಡೆದಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More