AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿಯಾಗಬೇಕಿದ್ದ ಟೆಕ್ಸ್‌ಟೈಲ್ ಎಂಜಿನಿಯರ್ ಈಗ 174 ಜೀವಗಳ ರಕ್ಷಕ: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಗಾಥೆ ಇಲ್ಲಿದೆ

ದುಬೈನಿಂದ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಹೈಜಾಕ್ ಯತ್ನ ವಿಫಲಗೊಳಿಸಿ, 174 ಪ್ರಯಾಣಿಕರ ಪ್ರಾಣ ಉಳಿಸಿದ ಮುಂಬೈನ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಗಾಥೆ ಇದು. ಸಹ-ಪೈಲಟ್‌ನಿಂದ ಚಾಕುವಿನಿಂದ ತೀವ್ರ ಹಲ್ಲೆಗೊಳಗಾದರೂ, ಸ್ಮಿತ್ ಧೈರ್ಯದಿಂದ ಪರಿಸ್ಥಿತಿ ನಿಭಾಯಿಸಿ, ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ನೆರವಾದರು. ಟೆಕ್ಸ್‌ಟೈಲ್ ಎಂಜಿನಿಯರಿಂಗ್ ಬಿಟ್ಟು ಪೈಲಟ್ ಆದ ಅವರ ಸ್ಫೂರ್ತಿದಾಯಕ ಜೀವನ ಪಯಣದ ಸಂಪೂರ್ಣ ವಿವರ ಇಲ್ಲಿದೆ.

ಉದ್ಯಮಿಯಾಗಬೇಕಿದ್ದ ಟೆಕ್ಸ್‌ಟೈಲ್ ಎಂಜಿನಿಯರ್ ಈಗ 174 ಜೀವಗಳ ರಕ್ಷಕ: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಗಾಥೆ ಇಲ್ಲಿದೆ
ಕ್ಯಾಪ್ಟನ್ ಸ್ಮಿತ್ ಮಚ್ಚಾರ್
ಅಕ್ಷತಾ ವರ್ಕಾಡಿ
|

Updated on:Oct 01, 2026 | 3:53 PM

Share

ವ್ಯಾಪಾರ ಮತ್ತು ಟೆಕ್ಸ್‌ಟೈಲ್ ಎಂಜಿನಿಯರಿಂಗ್ ಕಲಿತು ಉದ್ಯಮದತ್ತ ಮುಖ ಮಾಡಬೇಕಿದ್ದ ಯುವಕನೊಬ್ಬ, ಇಂದು ಮುಗಿಲೆತ್ತರದ ಕಾಕ್‌ಪಿಟ್‌ನಲ್ಲಿ ತೀವ್ರ ಗಾಯಗೊಂಡಿದ್ದರೂ ವಿಮಾನ ಹೈಜಾಕ್ ಆಗದಂತೆ ತಡೆದು 180ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ ಮಹಾನ್ ಶೂರನಾಗಿದ್ದಾರೆ. ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ FZ1073’ ವಿಮಾನದಲ್ಲಿ ನಡೆದ ಭೀಕರ ಘಟನೆಯಲ್ಲಿ, ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್, ಮುಂಬೈ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಅದಮ್ಯ ಸಾಹಸವೀಗ ಜಗತ್ತಿನಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.

14,000 ಅಡಿ ಎತ್ತರದಲ್ಲಿ ಭೀಕರ ಕದನ:

27 ಮಕ್ಕಳು ಸೇರಿದಂತೆ ಒಟ್ಟು 174 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಫ್ಲೈದುಬೈನ ಬೋಯಿಂಗ್ 737 MAX 8 ವಿಮಾನ ಲ್ಯಾಂಡಿಂಗ್ ಆಗಲು ಕೆಲವೇ ಹೊತ್ತು ಬಾಕಿ ಇರುವಾಗಲೇ ಒಮಾನ್ ಮೂಲದ ಸಹ-ಪೈಲಟ್ (Co-pilot) ವಿಮಾನವನ್ನು ಪತನಗೊಳಿಸುವ ದುಷ್ಟ ಆಲೋಚನೆಯಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ತೀವ್ರ ಹಲ್ಲೆ ನಡೆಸಿದನು. ಕೇವಲ 30 ಸೆಕೆಂಡುಗಳಲ್ಲಿ ವಿಮಾನವು ಸುಮಾರು 14,000 ಅಡಿ ಕೆಳಗೆ ಕುಸಿಯಿತು. ಕಾಕ್‌ಪಿಟ್‌ನಲ್ಲಿ ತೀವ್ರ ರಕ್ತಸ್ರಾವ ಮತ್ತು ಗಂಭೀರ ಗಾಯಗಳ ಹೊರತಾಗಿಯೂ ಧೈರ್ಯ ಗೆಡದ ಕ್ಯಾಪ್ಟನ್ ಸ್ಮಿತ್, ಸಕಾಲದಲ್ಲಿ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು.

ಕ್ಷಣವೇ ಒಳಗಡೆ ಬಂದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಹಲ್ಲೆ ಮಾಡಿದ ಸಹ-ಪೈಲಟ್‌ನನ್ನು ಕಟ್ಟಿಹಾಕಿದರು. ಅದೃಷ್ಟವಶಾತ್, ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೌದಿ ಅರೇಬಿಯಾದ ತಬುಕ್‌ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು. ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಸ್ಮಿತ್ ಅವರಿಗೆ ಶಸ್ತ್ರಚಿಕಿತ್ಸೆ ಮುಗಿದಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಟೆಕ್ಸ್‌ಟೈಲ್ ಎಂಜಿನಿಯರಿಂಗ್‌ನಿಂದ ಮ್ಯಾನೇಜ್‌ಮೆಂಟ್‌ವರೆಗೆ:

ಸ್ಮಿತ್ ಮಚ್ಚಾರ್ ಅವರ ವೃತ್ತಿಜೀವನ ಪ್ರಾರಂಭವಾಗಿದ್ದು ವಿಮಾನಯಾನದಿಂದಲ್ಲ. ಶಾಲಾ ಶಿಕ್ಷಣದ ನಂತರ, ತಮ್ಮ ಕುಟುಂಬದ ಜವಳಿ (Textile) ಉದ್ಯಮವನ್ನು ಮುಂದುವರಿಸುವ ಉದ್ದೇಶದಿಂದ ಅವರು ಟೆಕ್ಸ್‌ಟೈಲ್ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿದ್ದರು. ತದನಂತರ ಮುಂಬೈನ ಪ್ರಸಿದ್ಧ ‘ವೆಲಿಂಗ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿಯನ್ನೂ ಪಡೆದುಕೊಂಡರು.

ಜೀವನದ ಹಾದಿ ಬದಲಿಸಿದ ಸೆಮಿನಾರ್:

ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದಾಗ, ತಮ್ಮ 19ನೇ ವಯಸ್ಸಿನಲ್ಲಿ ಸ್ಮಿತ್ ಆಕಸ್ಮಿಕವಾಗಿ ವಿಮಾನಯಾನ (Aviation) ಕುರಿತಾದ ಸೆಮಿನಾರ್ ಒಂದರಲ್ಲಿ ಭಾಗವಹಿಸಿದ್ದರು. “ಪೈಲಟ್ ಆಗುವುದು ನನ್ನ ಬಾಲ್ಯದ ಕನಸಾಗಿರಲಿಲ್ಲ,” ಎಂದು ಅವರು ನಂತರದ ದಿನಗಳಲ್ಲಿ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ಆ ಒಂದು ಸೆಮಿನಾರ್ ಅವರ ಚಿಂತನೆಯನ್ನೇ ಬದಲಾಯಿಸಿತು. ತಾಯಿಯ ಆರಂಭಿಕ ಕಳವಳದ ನಡುವೆಯೂ ಧೈರ್ಯ ಮಾಡಿ, ಅವರು ಪೈಲಟ್ ತರಬೇತಿಗಾಗಿ ನ್ಯೂಜಿಲೆಂಡ್‌ಗೆ ತೆರಳಿದರು.

ದುಬೈ-ಟೆಲ್ ಅವೀವ್ ವಿಮಾನ ಅಪಹರಣ ಆತಂಕ: ಹೈಜಾಕ್ ಸಿಗ್ನಲ್ ರವಾನೆ ಬೆನ್ನಲ್ಲೇ ಗಡಿಗಿಳಿದ ಇಸ್ರೇಲ್ ಫೈಟರ್ ಜೆಟ್‌ಗಳು

ಸ್ಪೈಸ್‌ಜೆಟ್‌ನಿಂದ ಫ್ಲೈದುಬೈವರೆಗೆ 9,750 ಗಂಟೆಗಳ ಅಪಾರ ಅನುಭವ:

ನ್ಯೂಜಿಲೆಂಡ್‌ನಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಸ್ಮಿತ್, ಜೂನ್ 2011ರಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯ ಮೂಲಕ ಪೈಲಟ್ ವೃತ್ತಿ ಆರಂಭಿಸಿದರು. ಅಲ್ಲಿ 11 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿದ ಅವರು, ಹಿರಿಯ ಕಮಾಂಡರ್ ಹಾಗೂ ‘ಲೈನ್ ಟ್ರೈನಿಂಗ್ ಕ್ಯಾಪ್ಟನ್’ ಹುದ್ದೆಗೆ ಬಡ್ತಿ ಪಡೆದರು.

  • ಹಾರಾಟದ ಅನುಭವ: ಬೋಯಿಂಗ್ 737 ವಿಮಾನಗಳಲ್ಲಿ ಸುಮಾರು 9,750 ಗಂಟೆಗಳ ಸುದೀರ್ಘ ಹಾರಾಟದ ಅನುಭವ ಹೊಂದಿದ್ದಾರೆ.
  • ಕಮಾಂಡರ್ ಅನುಭವ: ಸ್ಪೈಸ್‌ಜೆಟ್‌ನಲ್ಲಿದ್ದಾಗ 6,400ಕ್ಕೂ ಹೆಚ್ಚು ಗಂಟೆಗಳ ಕಾಲ ಪೈಲಟ್-ಇನ್-ಕಮಾಂಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.
  • ಫ್ಲೈದುಬೈ ಸೇರ್ಪಡೆ: ಜೂನ್ 2022ರಲ್ಲಿ ಅವರು ನೇರ ಕ್ಯಾಪ್ಟನ್ ಆಗಿ ಫ್ಲೈದುಬೈ ಸಂಸ್ಥೆಯನ್ನು ಸೇರಿಕೊಂಡರು.

ತಮ್ಮ ಅಪಾರ ಅನುಭವ, ಕ್ಷಣಾರ್ಧದ ಸಮಯಪ್ರಜ್ಞೆ ಮತ್ತು ಅದಮ್ಯ ಧೈರ್ಯದಿಂದಾಗಿ ಮೃತ್ಯುವಿನ ದವಡೆಯಿಂದ 174 ಜೀವಗಳನ್ನು ರಕ್ಷಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ಇಂದು ಕೋಟ್ಯಂತರ ಜನರ ಪಾಲಿನ ನಿಜವಾದ ನಾಯಕನಾಗಿ ಹೊರಹೊಮ್ಮಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Thu, 1 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More