ಭೀಕರ ಅಪಘಾತದಲ್ಲಿ ಆಸ್ಪತ್ರೆ ಸೇರಿರುವ ರಿಷಬ್ ಪಂತ್ (Rishabh Pant) ಚೇತರಿಕೆಗೆ ವಿಶ್ವದಾದ್ಯಂತ ಕ್ರಿಕೆಟಿಗರು ಹಾರೈಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಪ್ರೇಮಿಗಳಂತೂ ಪಂತ್ ಬೇಗ ಗುಣಮುಖರಾಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ ಈ ಯುವ ಕ್ರಿಕೆಟರ್ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸುದ್ದಿಯಾಗಿದೆ. ಕಳೆದ ಶುಕ್ರವಾರ ದಿಲ್ಲಿಯಿಂದ ಉತ್ತರಾಖಂಡದ ರೂರ್ಕಿಗೆ ಪ್ರಯಾಣ ಬೆಳೆಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಭೀಕರ ಅಪಘಾತ (Accident) ಎದುರಿಸಿದ್ದರು. ಮುಂಜಾನೆ 5.30ರ ಸುಮಾರಿಗೆ ಪಂತ್ ಕಾರು ಅಪಘಾತಕ್ಕೀಡಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಸುದ್ದಿ ಕ್ಷಣಮಾತ್ರದಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಪಂತ್ ಚೇತರಿಕೆಗಾಗಿ ದೇವರಲ್ಲಿ ಮೊರೆ ಇಟ್ಟಿದ್ದರು. ಆದರೆ ಪಂತ್ಗೆ ಅಪಘಾತವಾಗಿರುವ ಸುದ್ದಿಯ ಅರಿವೇ ಇಲ್ಲದ ಅವರ ಸಹ ಕ್ರಿಕೆಟಿಗನೊಬ್ಬ, ಸುದ್ದಿ ತಿಳಿದ ಬಳಿಕ ನೀಡಿರುವ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ.
ಪ್ರಸ್ತುತ ಭಾರತದಲ್ಲಿ ರಣಜಿ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಜಾರ್ಖಂಡ್ ಪರ ಟೀಂ ಇಂಡಿಯಾ ಆಟಗಾರ ಇಶಾನ್ ಕಿಶನ್ ಕೂಡ ಆಡುತ್ತಿದ್ದಾರೆ. ಹೀಗಾಗಿ ಕಿಶನ್ಗೆ ಪಂತ್ ಅಪಘಾತಕ್ಕೀಡಾಗಿರುವ ಸುದ್ದಿ ತಿಳಿದಿರಲಿಲ್ಲ. ಸರ್ವಿಸಸ್ ವಿರುದ್ಧದ ರಣಜಿ ಪಂದ್ಯ ಮುಗಿದ ಬಳಿಕ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಕಿಶನ್ಗೆ ಈ ಆಘಾತಕ್ಕಾರಿ ಸುದ್ದಿ ತಿಳಿದಿದೆ.
ICC Rankings: ಐಸಿಸಿ ರ‍್ಯಾಂಕಿಂಗ್‌ನಲ್ಲಿ ಬರೋಬ್ಬರಿ 117 ಸ್ಥಾನ ಜಿಗಿದ ಇಶಾನ್ ಕಿಶನ್! ಕೊಹ್ಲಿಗೂ ಲಾಭ
ವಾಸ್ತವವಾಗಿ, ಕಿಶನ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ಅಭಿಮಾನಿಗಳ ಗುಂಪಿನಲ್ಲಿದ್ದವನೊಬ್ಬ ಪಂತ್ಗೆ ಅಪಘಾತವಾಗಿರುವ ಬಗ್ಗೆ ಕಿಶನ್ಗೆ ಹೇಳಿದ್ದಾರೆ. ಪಂತ್ ಬಗ್ಗೆ ಸುದ್ದಿ ಕೇಳಿದ ತಕ್ಷಣ ಶಾಕ್ಗೆ ಒಳಗಾದ ಇಶಾನ್ ಕಿಶನ್ ‘ಕ್ಯಾ’ ( ಶಾಕ್ಗೆ ಒಳಗಾದವರಂತೆ ‘ಏನು’) ಎನ್ನುತ್ತಾ ಒಂದು ಕ್ಷಣ ಸೆಲ್ಫಿ ತೆಗೆದುಕೊಳ್ಳುವುದನ್ನೇ ನಿಲ್ಲಿಸಿದ್ದಾರೆ. ಇದಾದ ಬಳಿಕ ಅಭಿಮಾನಿಗಳು ಅವರಿಗೆ ಅಪಘಾತದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕೆಲವು ಸೆಕೆಂಡ್‌ಗಳ ಕಾಲ ಅಚ್ಚರಿಯಿಂದ ನೋಡಿದ ಕಿಶನ್, ಮತ್ತೆ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
When Ishan kishan came to meet fans during the drinks break,he was so generous&humble. See his reaction on knowing rishabh pants’s car accident. #keenanstadium #jhvsser @ishankishan51 @BCCI @RishabhPant17 @nistula @akhileshsharma1 pic.twitter.com/3uNLnEDRiX
— Avishkar (@twstopsfreespch) December 30, 2022
ರಿಷಭ್ ಪಂತ್ ಬಲಗಾಲಿನ ಮಂಡಿಯ ಲಿಗಮೆಂಟ್ (ಅಸ್ಥಿರಜ್ಜು) ಹರಿದಿರುವುದು ಪರೀಕ್ಷೆಯಲ್ಲಿ ಗೊತ್ತಾಗಿದೆ. ಈ ಅಪಘಾತಕ್ಕೂ ಮುನ್ನ ಪಂತ್ ಮೊಣಕಾಲು ಬಲಪಡಿಸಲು ಜನವರಿ 6 ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹಾಜರಾಗಲು ಬಿಸಿಸಿಐ ಸೂಚಿಸಿತ್ತು. ಅಲ್ಲಿ ಕಂಡೀಷನಿಂಗ್ ಮತ್ತು ಅಭ್ಯಾಸ ಮಾಡಲು ಸೂಚನೆ ನೀಡಲಾಗಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುನ್ನ ಅವರು ಫಿಟ್ ಆಗಬೇಕೆಂದು ಬಿಸಿಸಿಐ ಬಯಸಿತ್ತು. ಆದರೀಗ ಮೊಣಕಾಲಿನ ನೋವು ಅಪಘಾತದಿಂದ ಹೆಚ್ಚಾಗಿರುವ ಸಾಧ್ಯತೆ ಇದೆ. ಅಪಘಾತದಲ್ಲಿ ಅವರಿಗೆ ಹಣೆಯ ಮೇಲೆ ಕೂಡ ಗಾಯವಾಗಿದೆ. ಬಲ ಮೊಣಕಾಲಿನ ಅಸ್ಥಿರಜ್ಜು ಕೂಡ ಗಾಯಗೊಂಡಿದ್ದು, ಬಲ ಮಣಿಕಟ್ಟು, ಪಾದ ಮತ್ತು ಬೆರಳಿಗೆ ಗಾಯವಾಗಿದೆ.
ಪಂತ್ ಗಾಯದ ಪ್ರಮಾಣ ಅಧಿಕವಾಗಿರುವ ಕಾರಣ ಕ್ರಿಕೆಟ್ನಿಂದ ಕನಿಷ್ಠ ಎಂಟು ತಿಂಗಳುಗಳ ಕಾಲ ದೂರವಿರಬೇಕಾಗಿದೆ. ಪಂತ್ ಅವರ ಗಾಯಗಳ ತೀವ್ರತೆಯ ಕುರಿತು ಮಾತನಾಡಿದ ಏಮ್ಸ್ ವೈದ್ಯರು, ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಪಂತ್ ಕನಿಷ್ಠ ಮೂರರಿಂದ ಆರು ತಿಂಗಳು ತೆಗೆದುಕೊಳ್ಳುತ್ತದೆ. ಎಲ್ಲಾದರು ಗಾಯದ ಪ್ರಮಾಣ ತೀವ್ರವಾಗಿದ್ದರೆ, ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಒಟ್ಟಾರೆ ಪಂತ್ ಅವರು ಪೂರ್ಣ ಫಿಟ್‌ನೆಸ್ ಮರಳಿ ಪಡೆಯಲು ಕನಿಷ್ಠ ಎಂಟು ತಿಂಗಳುಗಳು ಬೇಕಾಗಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 2 January 23