
ಕ್ರಿಕೆಟ್ನಲ್ಲಿ ಒಂದು ಮಾತಿದೆ…ಒಬ್ಬ ಆಟಗಾರನ ವಿಕೆಟ್ ಎಷ್ಟು ಮುಖ್ಯ ಎಂಬುದು ಎದುರಾಳಿ ತಂಡದ ಸಂಭ್ರಮ ನೋಡಿ ತಿಳಿಯಬಹುದು ಎಂದು…ಅಂತಹದೊಂದು ಸಂಭ್ರಮಕ್ಕೆ ಐಪಿಎಲ್ನ 22ನೇ ಪಂದ್ಯ ಸಾಕ್ಷಿಯಾಗಿತ್ತು. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಆರಂಭದಲ್ಲಿ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್ಗಳು ಬೌಲಿಂಗ್ ಮಾಡಿದ್ದರು. ಆದರೆ 10 ಓವರ್ಗಳ ಬಳಿಕ ಎಲ್ಲವೂ ಬದಲಾಯಿತು. ಸಿಎಸ್ಕೆ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಆಲ್ರೌಂಡರ್ ಶಿವಂ ದುಬೆ ಅಬ್ಬರಿಸಲಾರಂಭಿಸಿದರು. ಅದು ಅಂತಿಂಥ ಅಬ್ಬರವಲ್ಲ. ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ ಬೌಲರ್ಗಳನ್ನು ಬದಲಿಸಿದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು. ಸಿಕ್ಸ್ ಇಲ್ಲಾ ಫೋರ್.
ಪರಿಣಾಮ ಮೂರನೇ ವಿಕೆಟ್ಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿ 165 ರನ್ಗಳ ಜೊತೆಯಾಟವಾಡಿದರು. ಈ ವೇಳೆ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 88 ರನ್ ಬಾರಿಸಿದ್ದ ರಾಬಿನ್ ಉತ್ತಪ್ಪ ಔಟಾದರು. ಆದರೆ ದುಬೆಯ ಆರ್ಭಟ ಮಾತ್ರ ಮುಂದುವರೆದಿತ್ತು. ಕೊನೆಯ ಓವರ್ವರೆಗೂ ಬ್ಯಾಟ್ ಬೀಸಿದ ದುಬೆ 8 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ ಕೇವಲ 45 ಎಸೆತಗಳಲ್ಲಿ ಅಜೇಯ 95 ರನ್ಗಳಿಸಿತ್ತು. ಅಲ್ಲಿಗೆ ಸಿಎಸ್ಕೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 216 ಕ್ಕೆ ಬಂದು ನಿಂತಿತು.
217 ರನ್ಗಳ ಟಾರ್ಗೆಟ್ ನೀಡಿದ ಸಿಎಸ್ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್ಕೆ ಪವರ್ಪ್ಲೇನಲ್ಲೇ ಆರ್ಸಿಬಿಗೆ ಆಘಾತ ನೀಡಿದರು. ಅಷ್ಟೇ ಅಲ್ಲದೆ ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 42 ರನ್ ಮಾತ್ರ. ಇನ್ನು 11 ಎಸೆತಗಳಲ್ಲಿ 26 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶಹಬಾಜ್ ಅಹ್ಮದ್ ಹಾಗೂ ಸುಯಶ್ ಪ್ರಭುದೇಸಾಯಿ ಅರ್ಧಶತಕದ ಜೊತೆಯಾಟವಾಡಿದರು. ಅದರಲ್ಲೂ ಚೊಚ್ಚಲ ಪಂದ್ಯವಾಡಿದ ಸುಯಶ್ 18 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ತಮ್ಮ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ 27 ಎಸೆತಗಳಲ್ಲಿ 41 ರನ್ ಬಾರಿಸಿ ಶಹಬಾಜ್ ಕೂಡ ಅಬ್ಬರಿಸಿದರು.
ಈ ಇಬ್ಬರ ವಿಕೆಟ್ ಬೀಳುತ್ತಿದ್ದಂತೆ ಸಿಎಸ್ಕೆ ತಂಡವು ಮೇಲುಗೈ ಸಾಧಿಸಿತು. ಇದರ ಬೆನ್ನಲ್ಲೇ ವನಿಂದು ಹಸರಂಗ ಹಾಗೂ ಆಕಾಶ್ ದೀಪ್ ಬಂದ ವೇಗದಲ್ಲೇ ವಿಕೆಟ್ ಕೈಚೆಲ್ಲಿ ಹಿಂತಿರುಗಿದರು. ಈ ವೇಳೆ ಆರ್ಸಿಬಿ ತಂಡದ ಸ್ಕೋರ್ 8 ವಿಕೆಟ್ ನಷ್ಟಕ್ಕೆ 146 ರನ್. ಎಂಟು ವಿಕೆಟ್ ಉರುಳಿಸಿದರೂ ಸಿಎಸ್ಕೆ ತಂಡ ಗೆಲುವನ್ನು ಖಚಿತಪಡಿಸಿರಲಿಲ್ಲ. ಏಕೆಂದರೆ ಒಂದೆಡೆ ಕ್ರೀಸ್ನಲ್ಲಿದಿದ್ದು ದಿನೇಶ್ ಕಾರ್ತಿಕ್ ಎಂಬ ಸ್ಪೋಟಕ ದಾಂಡಿಗ. ಯಾವುದೇ ಕ್ಷಣದಲ್ಲೂ ಸಿಡಿಯಬಲ್ಲ ಡಿಕೆ ಬಗ್ಗೆ ಸಿಎಸ್ಕೆ ಅರಿವಿತ್ತು. ಹೀಗಾಗಿ 8 ವಿಕೆಟ್ ಪಡೆದರೂ ಚೆನ್ನೈ ತಂಡವು ಗೆಲುವನ್ನು ಖಚಿತಪಡಿಸಿಕೊಳ್ಳಲು ಸಿದ್ದರಿರಲಿಲ್ಲ.
ಅತ್ತ ಬೌಲರ್ಗಳಿಗೂ ಭಯ, ನಿರೀಕ್ಷೆ ನಿಜವಾಯ್ತು. ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಕೇವಲ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 34 ರನ್ ಬಾರಿಸಿದರು. ಡಿಕೆ ಅಬ್ಬರ ಶುರುವಾಗುತ್ತಿದ್ದಂತೆ ಇತ್ತ ಆರ್ಸಿಬಿ ಅಭಿಮಾನಿಗಳಿಗೆ ಗೆಲುವಿನ ನಿರೀಕ್ಷೆ ಹೆಚ್ಚಾಯ್ತು. ಅತ್ತ ಸಿಎಸ್ಕೆ ತಂಡವು ಸೋಲಿನ ಭೀತಿಯನ್ನು ಎದುರಿಸಿತ್ತು. ಆದರೆ ದುರಾದೃಷ್ಟವಶಾತ್ ಬ್ರಾವೊ ಅವರ ಮ್ಯಾಜಿಕ್ ಬಾಲ್ಗೆ ಭರ್ಜರಿ ಉತ್ತರ ನೀಡಲು ಹೋದ ಡಿಕೆಗೆ ಬೌಂಡರಿ ಲೈನ್ನಲ್ಲಿ ಕ್ಯಾಚ್ ಆದರು. ಬೌಂಡಿಯಲ್ಲಿ ಫೀಲ್ಡಿಂಗ್ನಲ್ಲಿದ್ದ ಸಿಎಸ್ಕೆ ನಾಯಕ ರವೀಂದ್ರ ಜಡೇಜಾ ಅತ್ಯುತ್ತಮ ನಿಯಂತ್ರಣ ಸಾಧಿಸುವ ಮೂಲಕ ಕ್ಯಾಚ್ ಹಿಡಿದರು. ಅಷ್ಟೇ ಯಾಕೆ ಈ ಕ್ಯಾಚ್ನೊಂದಿಗೆ ಜಡೇಜಾ ಗೆಲುವನ್ನು ಖಚಿತಪಡಿಸಿದರು. ಅಲ್ಲದೆ ಕ್ಯಾಚ್ ಹಿಡಿದ ಬೆನ್ನಲ್ಲೇ ಕೊನೆಗೂ ಗೆದ್ವಿ ಎಂಬಾರ್ಥದಲ್ಲಿ ಬೌಂಡರಿ ಲೈನ್ನಲ್ಲೇ ಮಕಾಡೆ ಮಲಗಿ ಸಂಭ್ರಮಿಸಿದರು. ಒಬ್ಬ ಬ್ಯಾಟ್ಸ್ಮನ್ ಎದುರಾಳಿಗಳಿಗೆ ಎಷ್ಟು ಭೀತಿ ಹುಟ್ಟಿಸಿದ್ದ ಎಂಬುದು ಆತನ ವಿಕೆಟ್ ಸಿಕ್ಕಾಗ ತಂಡದ ಸಂಭ್ರಮ ನೋಡಿ ತಿಳಿಯಬಹುದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.
ಒಟ್ಟಿನಲ್ಲಿ ಆರ್ಸಿಬಿ 23 ರನ್ಗಳಿಂದ ಸೋತಿದೆ. ಅಲ್ಲ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಏಕೆಂದರೆ ಸಿಎಸ್ಕೆ ವಿರುದ್ದ ಆರ್ಸಿಬಿ ಇಷ್ಟೊಂದು ಮೊತ್ತವನ್ನು ಭರ್ಜರಿಯಾಗಿ ಚೇಸ್ ಮಾಡಿರುವುದು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು. ಹೀಗಾಗಿ ಮೇ 4 ರಂದು ನಡೆಯುವ ಆರ್ಸಿಬಿ-ಸಿಎಸ್ಕೆ ನಡುವಣ 2ನೇ ಮುಖಾಮುಖಿಯಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
Published On - 2:45 pm, Wed, 13 April 22