
2026 ರ ಐಪಿಎಲ್‌ನಲ್ಲಿ (IPL 2026) ಗುಜರಾತ್ ಟೈಟಾನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದ ವೆಸ್ಟ್ ಇಂಡೀಸ್ನ ಸ್ಟಾರ್ ಆಲ್‌ರೌಂಡರ್ ಜೇಸನ್ ಹೋಲ್ಡರ್ (Jason Holder) ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹೋಲ್ಡರ್ ಅವರ ಈ ನಿರ್ಧಾರವನ್ನು ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ದೃಢಪಡಿಸಿದ್ದಾರೆ. ಹೋಲ್ಡರ್ ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ, ಆದರೆ ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರೆಸುತ್ತಾರೆ ಎಂದು ಸ್ಯಾಮಿ ವಿಸ್ಡನ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ. ಆದಾಗ್ಯೂ ಜೇಸನ್ ಹೋಲ್ಡರ್ ಅವರ ಈ ನಿವೃತ್ತಿ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಾಗಲಿ ಅಥವಾ ಹೋಲ್ಡರ್ ಆಗಲಿ ಇದುವರೆಗೂ ಖಚಿತಪಡಿಸಿಲ್ಲ.
2027 ರ ಏಕದಿನ ವಿಶ್ವಕಪ್ಗೆ ವೆಸ್ಟ್ ಇಂಡೀಸ್ ತಂಡದ ಯೋಜನೆಗಳಲ್ಲಿ ಹೋಲ್ಡರ್ ಅವರ ಪಾತ್ರ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಡ್ಯಾರೆನ್ ಸ್ಯಾಮಿ, ‘ಜೇಸನ್ ಹೋಲ್ಡರ್ ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಆದರೆ ಅವರು ಟೆಸ್ಟ್ ತಂಡದ ಭಾಗವಾಗಿರಲಿದ್ದಾರೆ. ಅವರಿಗೆ ಟೆಸ್ಟ್ ಆಡಲು ಆಸಕ್ತಿಯೂ ಇದೆ. ಇದರ ಜೊತೆಗೆ ಹೋಲ್ಡರ್ ಫ್ರಾಂಚೈಸ್ ಕ್ರಿಕೆಟ್ ಆಡುವುದನ್ನು ಮುಂದುವರೆಸಲಿದ್ದಾರೆ. ಆದ್ದರಿಂದ ಏಕದಿನ ತಂಡಕ್ಕೆ ಅವರ ಲಭ್ಯತೆ ದೊಡ್ಡ ಪ್ರಶ್ನೆಯಾಗಿದೆ’ ಎಂದು ಸ್ಯಾಮಿ ಹೇಳಿದ್ದಾರೆ.
ಜೇಸನ್ ಹೋಲ್ಡರ್ 2013 ರಿಂದ 2023 ರವರೆಗಿನ ತಮ್ಮ 10 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 138 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 24.85 ರ ಸರಾಸರಿಯಲ್ಲಿ 2237 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯಧಿಕ ಸ್ಕೋರ್ 99 ಆಗಿದೆ. ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಹೋಲ್ಡರ್, ತಮ್ಮ ಏಕದಿನ ವೃತ್ತಿಜೀವನದಲ್ಲಿ ಒಮ್ಮೆಯೂ ಶತಕದ ಗಡಿ ದಾಟಲು ಸಾಧ್ಯವಾಗಿಲ್ಲ. ಆದರೆ ಅವರು 11 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಜೇಸನ್ ಹೋಲ್ಡರ್ಗೆ ಸತತ ಎರಡನೇ ಪಂದ್ಯದಲ್ಲೂ ಕೈಕೊಟ್ಟ ಅದೃಷ್ಟ; ತಂಡಕ್ಕೆ ಹ್ಯಾಟ್ರಿಕ್ ಸೋಲು
ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹೋಲ್ಡರ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 36.96 ಸರಾಸರಿಯಲ್ಲಿ 159 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಎರಡು ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಲ್‌ರೌಂಡರ್ ಆಗಿರುವುದರ ಜೊತೆಗೆ, ಹೋಲ್ಡರ್ ಒಬ್ಬ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದರು, ತಮ್ಮ ಏಕದಿನ ವೃತ್ತಿಜೀವನದಲ್ಲಿ 65 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಜೇಸನ್ ಹೋಲ್ಡರ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 86 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
Published On - 4:33 pm, Sat, 11 July 26