AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೇಸನ್ ಹೋಲ್ಡರ್​ಗೆ ಸತತ ಎರಡನೇ ಪಂದ್ಯದಲ್ಲೂ ಕೈಕೊಟ್ಟ ಅದೃಷ್ಟ; ತಂಡಕ್ಕೆ ಹ್ಯಾಟ್ರಿಕ್ ಸೋಲು

MLC 2025: ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 2025ರ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸತತವಾಗಿ ಮೂರು ಪಂದ್ಯಗಳನ್ನು ಸೋತಿದೆ. ನಾಯಕ ಜೇಸನ್ ಹೋಲ್ಡರ್ ಅವರಿಗೆ ಕೈಕೊಟ್ಟ ಅದೃಷ್ಟ ಕೂಡ ಈ ಸೋಲುಗಳಿಗೆ ಕಾರಣ ಎನ್ನಬಹುದು. ಕ್ಯಾಚ್ ಕೈಚೆಲ್ಲುವುದು ಮತ್ತು ಸ್ಟಂಪ್‌ಗಳಿಗೆ ಚೆಂಡು ಬಡಿದರೂ ನಾಟ್ ಔಟ್ ಎಂದು ಘೋಷಣೆಯಾದ ಘಟನೆಗಳು ಇದಕ್ಕೆ ಸಾಕ್ಷಿ.

ಜೇಸನ್ ಹೋಲ್ಡರ್​ಗೆ ಸತತ ಎರಡನೇ ಪಂದ್ಯದಲ್ಲೂ ಕೈಕೊಟ್ಟ ಅದೃಷ್ಟ; ತಂಡಕ್ಕೆ ಹ್ಯಾಟ್ರಿಕ್ ಸೋಲು
Jason Holder
ಪೃಥ್ವಿಶಂಕರ
|

Updated on: Jun 29, 2025 | 5:26 PM

Share

2025 ರ ಮೇಜರ್ ಲೀಗ್ ಕ್ರಿಕೆಟ್ (MLC 2025) ನಲ್ಲಿ, ಜೇಸನ್ ಹೋಲ್ಡರ್ (Jason Holder) ನಾಯಕತ್ವದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ (LA Night Riders ) ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಈ ಆವೃತ್ತಿಯಲ್ಲಿ ಇದುವರೆಗೆ ಏಳು ಪಂದ್ಯಗಳನ್ನಾಡಿರುವ ಶಾರುಖ್ ಖಾನ್ ಒಡೆತನದ ತಂಡ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಅದರಲ್ಲೂ ಕಳೆದ ಎರಡು ಪಂದ್ಯಗಳಲ್ಲಿ ತಂಡದ ಸೋಲಿಗೆ ನಾಯಕ ಜೇಸನ್ ಹೋಲ್ಡರ್ ಅವರೇ ಪರೋಕ್ಷ ಕಾರಣ ಎನ್ನಬಹುದು. ಇದಕ್ಕೆ ಪೂರಕವಾಗಿ ಕಳೆದ ಎರಡು ಪಂದ್ಯಗಳಲ್ಲಿ ತಂಡ 200 ಕ್ಕೂ ಹೆಚ್ಚು ರನ್ ಗಳಿಸಿದ್ದರೂ ಸೋಲಿನತ್ತ ಮುಖ ಮಾಡಿದೆ. ಈ ಮೊದಲು ವಾಷಿಂಗ್ಟನ್ ಫ್ರೀಡಂ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿ ತಂಡದ ಸೋಲಿಗೆ ನಾಯಕ ಹೋಲ್ಡರ್ ನೇರವಾಗಿ ಕಾರಣರಾಗಿದ್ದರು. ಇದೀಗ ಸಿಯಾಟಲ್ ಓರ್ಕಾಸ್ ವಿರುದ್ಧದ ಪಂದ್ಯದಲ್ಲಿ, ಜೇಸನ್ ಹೋಲ್ಡರ್ ಬೌಲ್ ಮಾಡಿದ ಚೆಂಡು ಸ್ಟಂಪ್‌ಗಳಿಗೆ ಹೊಡೆದರೂ ಬ್ಯಾಟ್ಸ್‌ಮನ್ ಔಟಾಗಿಲ್ಲ. ಇದೀಗ ಇದರ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ.

ಸ್ಟಂಪ್​ಗೆ ಚೆಂಡು ಬಡಿದರೂ ನಾಟೌಟ್

ವಾಸ್ತವವಾಗಿ ಲೀಗ್​ನ20 ನೇ ಪಂದ್ಯದಲ್ಲಿ, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 202 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಲು ಬಂದ ಸಿಯಾಟಲ್ ಓರ್ಕಾಸ್ ತಂಡದ ಇನ್ನಿಂಗ್ಸ್ ಸಮಯದ 11 ನೇ ಓವರ್‌ನಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. 11 ನೇ ಓವರ್ ಅನ್ನು ನೈಟ್ ರೈಡರ್ಸ್ ನಾಯಕ ಜೇಸನ್ ಹೋಲ್ಡರ್ ಎಸೆದರು. ಈ ಓವರ್​ನ ಮೊದಲ ಎಸೆತವನ್ನು ಸಿಯಾಟಲ್ ಓರ್ಕಾಸ್ ಆರಂಭಿಕ ಶಯಾನ್ ಜಹಾಂಗೀರ್ ಎದುರಿಸಿದರು. ಆದರೆ ಚೆಂಡು ಬ್ಯಾಟ್ಸ್‌ಮನ್ ಕಣ್ತಪ್ಪಿಸಿ ಸ್ಟಂಪ್‌ಗೆ ಬಡಿಯಿತು. ಆದರೆ ಬೆಲ್ಸ್​ಗಳು ಮಾತ್ರ ಕೆಳಗೆ ಬೀಳಲಿಲ್ಲ. ಇದರಿಂದಾಗಿ ಜಹಾಂಗೀರ್ ಅವರನ್ನು ನಾಟ್ ಔಟ್ ಎಂದು ಘೋಷಿಸಲಾಯಿತು. ಇದರಿಂದ ಜೇಸನ್ ಹೋಲ್ಡರ್ ತುಂಬಾ ನಿರಾಶೆಗೊಂಡಂತೆ ಕಾಣುತ್ತಿದ್ದರು.

ಅಂತಿಮವಾಗಿ ಸಿಯಾಟಲ್ ಓರ್ಕಾಸ್ ತಂಡದ ಪರ ಮತ್ತೊಂದು ಗೆಲುವನ ಇನ್ನಿಂಗ್ಸ್ ಆಡಿದ ಶಿಮ್ರಾನ್ ಹೆಟ್ಮೆಯರ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ ಅಜೇಯ 64 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕೊನೆಯ ಎಸೆತದಲ್ಲಿ ಕ್ಯಾಚ್ ಕೈಬಿಟ್ಟಿದ್ದ ಹೋಲ್ಡರ್

ವಾಸ್ತವವಾಗಿ ಇದೇ ಲೀಗ್​ನ 17 ನೇ ಪಂದ್ಯದ ಕೊನೆಯ ಎಸೆತದಲ್ಲಿ ಜೇಸನ್ ಹೋಲ್ಡರ್, ಎದುರಾಳಿ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಅವರ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರಿಂದಾಗಿ ತಂಡ ಸೋಲನುಭವಿಸಬೇಕಾಯಿತು. ಈ ಪಂದ್ಯದಲ್ಲಿ, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ವಾಷಿಂಗ್ಟನ್ ಫ್ರೀಡಂ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿತು.

ಈ ಪಂದ್ಯದ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಗೆಲ್ಲಲು ಒಂದು ರನ್ ಬೇಕಿತ್ತು. ಇತ್ತ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಪರ ಅನುಭವಿ ಆಲ್‌ರೌಂಡರ್ ಆಂಡ್ರೆ ರಸೆಲ್ ಫುಲ್-ಟಾಸ್ ಬೌಲಿಂಗ್ ಮಾಡಿದರು. ಈ ವೇಳೆ, ವಾಷಿಂಗ್ಟನ್ ಫ್ರೀಡಂ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್ ಚೆಂಡನ್ನು ಮಿಡ್-ಆನ್‌ನಲ್ಲಿ ನಿಂತಿದ್ದ ಜೇಸನ್ ಹೋಲ್ಡರ್ ಕೈಗೆ ಹೊಡೆದರು, ಆದರೆ ಚೆಂಡು ಹೋಲ್ಡರ್ ಕೈಯಿಂದ ಜಾರಿತು. ಇದಾದ ನಂತರ, ಹೋಲ್ಡರ್ ಎರಡನೇ ಬಾರಿಗೆ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರು, ಆದರೆ ಅವರು ಯಶಸ್ವಿಯಾಗಲಿಲ್ಲ. ಹೋಲ್ಡರ್ ಕೈಯಿಂದ ಚೆಂಡು ಜಾರಿದ ತಕ್ಷಣ, ಬ್ಯಾಟ್ಸ್‌ಮನ್‌ಗಳು ರನ್ ಕದ್ದು, ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ