ZIM vs SA: ಹಾಲಿ ಟೆಸ್ಟ್ ಚಾಂಪಿಯನ್ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಬಾರಿಸಿದ 38 ವರ್ಷದ ಬ್ಯಾಟರ್
Zimbabwe vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಅದ್ಭುತ ಶತಕ ಸಿಡಿಸಿದ್ದಾರೆ. 38 ವರ್ಷದ ಅನುಭವಿ ಆಟಗಾರನಾದ ವಿಲಿಯಮ್ಸ್ 122 ಎಸೆತಗಳಲ್ಲಿ 100 ರನ್ ಗಳಿಸಿ ತನ್ನ ಟೆಸ್ಟ್ ವೃತ್ತಿಜೀವನದ ಆರನೇ ಶತಕವನ್ನು ಪೂರ್ಣಗೊಳಿಸಿದರು. ತನ್ನ ದೀರ್ಘ ವೃತ್ತಿಜೀವನದಲ್ಲಿ ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (world test championship 2025) ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ದಕ್ಷಿಣ ಆಫ್ರಿಕಾ ತಂಡ ಪ್ರಸ್ತುತ ಜಿಂಬಾಬ್ವೆ (Zimbabwe vs South Africa) ಪ್ರವಾಸದಲ್ಲಿದೆ. ಎರಡೂ ತಂಡಗಳ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ತಂಡ 418 ರನ್ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಜಿಂಬಾಬ್ವೆ ತಂಡದ ಪರ 38 ವರ್ಷದ ಅನುಭವಿ ಆಟಗಾರ ಸೀನ್ ವಿಲಿಯಮ್ಸ್ (Sean Williams) ಶತಕದ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಶತಕ ಬಾರಿಸಿದ ಸೀನ್ ವಿಲಿಯಮ್ಸ್
ಈ ಪಂದ್ಯದಲ್ಲಿ, ಜಿಂಬಾಬ್ವೆಯ ಅನುಭವಿ ಬ್ಯಾಟ್ಸ್‌ಮನ್ ಸೀನ್ ವಿಲಿಯಮ್ಸ್ ಅದ್ಭುತ ಪ್ರದರ್ಶನ ನೀಡಿ ಸ್ಫೋಟಕ ಶತಕ ಸಿಡಿಸಿದ್ದಾರೆ. 38 ವರ್ಷದ ವಿಲಿಯಮ್ಸ್ 122 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ 100 ರನ್ ಪೂರೈಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಆರನೇ ಶತಕವಾಗಿದ್ದು, ಈ ಇನ್ನಿಂಗ್ಸ್ ಮತ್ತೊಮ್ಮೆ ಅವರ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಇದು ಸೀನ್ ವಿಲಿಯಮ್ಸ್ ಅವರ ಟೆಸ್ಟ್ ವೃತ್ತಿಜೀವನದ 21 ನೇ ಪಂದ್ಯವಾಗಿದ್ದು, ಅವರು ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಅಫ್ಘಾನಿಸ್ತಾನ ವಿರುದ್ಧ 3 ಟೆಸ್ಟ್ ಶತಕಗಳು ಮತ್ತು ನ್ಯೂಜಿಲೆಂಡ್ ವಿರುದ್ಧ 1 ಟೆಸ್ಟ್ ಶತಕ ಸಿಡಿಸಿದ್ದಾರೆ. ಸೀನ್ ವಿಲಿಯಮ್ಸ್ ಜಿಂಬಾಬ್ವೆಯ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದು, ಜಿಂಬಾಬ್ವೆ ಪರ 162 ಏಕದಿನ ಮತ್ತು 81 ಟಿ20 ಪಂದ್ಯಗಳನ್ನು ಸಹ ಆಡಿದ್ದಾರೆ. ಅಲ್ಲದೆ ಏಕದಿನಗಳಲ್ಲಿ 8 ಶತಕಗಳು ಮತ್ತು ಟಿ20ಮಾದರಿಯಲ್ಲಿ ಜಿಂಬಾಬ್ವೆ ಪರ 11 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು; ವಿಡಿಯೋ
ಜಿಂಬಾಬ್ವೆಯ ಬ್ಯಾಟಿಂಗ್ ಬೆನ್ನೆಲುಬು
ಸೀನ್ ವಿಲಿಯಮ್ಸ್ ಬಹಳ ವರ್ಷಗಳಿಂದಲೂ ಜಿಂಬಾಬ್ವೆ ಕ್ರಿಕೆಟ್‌ನ ಅತ್ಯಂತ ವಿಶ್ವಾಸಾರ್ಹ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 2005 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಈ ಎಡಗೈ ಬ್ಯಾಟ್ಸ್‌ಮನ್ ಅಂದಿನಿಂದ ಜಿಂಬಾಬ್ವೆಯ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲೂ ತಂಡಕ್ಕೆ ಕೊಡುಗೆ ನೀಡುವ ಸೀನ್ ವಿಲಿಯಮ್ಸ್ ಜಿಂಬಾಬ್ವೆ ತಂಡದ ಮಾಜಿ ನಾಯಕರೂ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Sun, 29 June 25
