AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ZIM vs SA: ಅರ್ಧಕ್ಕೆ ಆಟ ನಿಲ್ಲಿಸಿದ ಜಿಂಬಾಬ್ವೆ ಆಟಗಾರನಿಗೆ 7 ದಿನ ಕ್ರಿಕೆಟ್​ನಿಂದ ನಿಷೇಧ

ICC concussion rules: ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವಿನ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆಯ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಹೀಗಾಗಿ ಅವರ ಬದಲಿಗೆ ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೊಸ ಐಸಿಸಿ ಕನ್ಕ್ಯುಶನ್ ನಿಯಮಗಳ ಪ್ರಕಾರ, ಅವರು 7 ದಿನಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿದೆ.

ZIM vs SA: ಅರ್ಧಕ್ಕೆ ಆಟ ನಿಲ್ಲಿಸಿದ ಜಿಂಬಾಬ್ವೆ ಆಟಗಾರನಿಗೆ 7 ದಿನ ಕ್ರಿಕೆಟ್​ನಿಂದ ನಿಷೇಧ
Brian Bennett
ಪೃಥ್ವಿಶಂಕರ
|

Updated on: Jun 29, 2025 | 8:43 PM

Share

ನಾಲ್ಕನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಆರಂಭವಾಗಿದ್ದು, ಇದರಡಲ್ಲಿ ಹಲವು ದೇಶಗಳು ಟೆಸ್ಟ್ ಸರಣಿಗಳಲ್ಲಿ ನಿರತವಾಗಿವೆ. ಒಂದೆಡೆ ಭಾರತ- ಇಂಗ್ಲೆಂಡ್ (India vs England) ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಮತ್ತೊಂದೆಡೆ ಆಸ್ಟ್ರೇಲಿಯಾ- ವೆಸ್ಟ್ ಇಂಡೀಸ್, ಶ್ರೀಲಂಕಾ- ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಇವುಗಳೊಂದಿಗೆ ಹಾಲಿ ಟೆಸ್ಟ್ ಚಾಂಪಿಯನ್‌ ದಕ್ಷಿಣ ಆಫ್ರಿಕಾ ಕೂಡ ಜಿಂಬಾಬ್ಬೆ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್​ನಲ್ಲಿ ನಡೆಯುತ್ತಿದ್ದು, ನಿರೀಕ್ಷಿಸಿದಂತೆ ಆಫ್ರಿಕಾ ತಂಡ ಮೇಲುಗೈ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ (Brian Bennett) ಬ್ಯಾಟಿಂಗ್ ಮಾಡುವ ವೇಳೆಗೆ ಗಾಯಕ್ಕೆ ತುತ್ತಾಗಿದ್ದು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದಾರೆ. ಇದರ ಪರಿಣಾಮವಾಗಿ ಅವರು ಮುಂದಿನ 7 ದಿನಗಳ ಕಾಲ ಮೈದಾನದಿಂದ ಹೊರಗುಳಿಯಬೇಕಾಗಿದೆ.

ಬುಲವಾಯೊದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಆತಿಥೇಯ ಜಿಂಬಾಬ್ವೆಯ ಇನ್ನಿಂಗ್ಸ್ ಆರಂಭವಾಯಿತು. ಬ್ರಿಯಾನ್ ಬೆನೆಟ್ ಮತ್ತು ಟಿ ಕೈಟಾನೊ ತಂಡಕ್ಕೆ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್‌ನಲ್ಲಿಯೇ ಕೈಟಾನೊ ಔಟಾದರು. ನಂತರ ಐದನೇ ಓವರ್‌ನಲ್ಲಿ ಮತ್ತೊಬ್ಬ ಬ್ಯಾಟರ್ ನಿಕ್ ವೆಲ್ಚ್ ಕೂಡ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಜಿಂಬಾಬ್ವೆ ಕೇವಲ 23 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಇದರ ಜೊತೆಗೆ ಮತ್ತೊಂದು ಆಘಾತವೆಂಬಂತೆ ತಂಡದ ಆರಂಭಿಕ ಬೆನೆಟ್ ಕೂಡ ಇದ್ದಕ್ಕಿದ್ದಂತೆ ಮೈದಾನವನ್ನು ತೊರೆಯಬೇಯಿತು.

ಬೆನೆಟ್ ತಲೆಗೆ ಬಡಿದ ಚೆಂಡು

ವಾಸ್ತವವಾಗಿ, ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ, ಎಡಗೈ ವೇಗಿ ಕ್ವೆನಾ ಎಂಫಾಕಾ ಅವರ ಕೊನೆಯ ಎಸೆತದಲ್ಲಿ ಬೆನೆಟ್ ಹುಕ್ ಶಾಟ್ ಆಡಲು ಪ್ರಯತ್ನಿಸಿದರು ಆದರೆ ವಿಫಲರಾದರು. ಹೀಗಾಗಿ ಚೆಂಡು ಅವರ ಹೆಲ್ಮೆಟ್‌ಗೆ ರಬಸವಾಗಿ ಬಡಿಯಿತು. ಇದರಿಂದ ಬೆನೆಟ್ ಪಿಚ್‌ನಲ್ಲಿಯೇ ಕುಳಿತುಬಿಟ್ಟರು. ಕೂಡಲೇ ತಂಡದ ಫಿಸಿಯೋ ಮೈದಾನಕ್ಕೆ ಬಂದು ಅವರನ್ನು ದೀರ್ಘಕಾಲ ಪರೀಕ್ಷಿಸಿದರು. ಆ ಬಳಿಕ ಆಟ ಮುಂದುವರೆಸಿದ ಬೆನೆಟ್ ಮುಂದಿನ ಓವರ್‌ನಲ್ಲಿ 3 ಎಸೆತಗಳನ್ನು ಎದುರಿಸಿದರು.

ಆದರೆ 8 ನೇ ಓವರ್‌ನ ಮೊದಲ ಎಸೆತದ ನಂತರ, ಅವರು ಇದ್ದಕ್ಕಿದ್ದಂತೆ ಮೈದಾನವನ್ನು ತೊರೆಯಲು ನಿರ್ಧರಿಸಿ ರಿಟೈರ್ಡ್ ಹರ್ಟ್ ಆಗಿ ಡಗೌಟ್​ಗೆ ಮರಳಿದರು. ಸ್ವಲ್ಪ ಸಮಯದ ನಂತರ, ಜಿಂಬಾಬ್ವೆ ಕ್ರಿಕೆಟ್ ಬೆನೆಟ್‌ಗೆ ಇಂಜುರಿಯಾಗಿದೆ, ಇದರಿಂದಾಗಿ ಅವರು ಈ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಹೇಳಿಕೆ ನೀಡಿತು. ಅವರ ಬದಲಿಯಾಗಿ ಪ್ರಿನ್ಸ್ ಮಸ್ವೌರೆ ಅವರನ್ನು ಆಡುವ ಹನ್ನೊಂದರ ತಂಡದಲ್ಲಿ ಸೇರಿಸಿಕೊಳ್ಳುವುದಾಗಿ ಮಂಡಳಿ ಘೋಷಿಸಿತು. ರಿಟೈರ್ಡ್ ಹರ್ಟ್ ಆಗುವ ಮೊದಲು, ಬೆನೆಟ್ 28 ಎಸೆತಗಳಲ್ಲಿ 19 ರನ್ ಗಳಿಸಿದ್ದರು.

86 ಶತಕ, 41 ಸಾವಿರಕ್ಕೂ ಹೆಚ್ಚು ರನ್‌ ಬಾರಿಸಿದ್ದ ಇಂಗ್ಲೆಂಡ್​ನ ಲೆಜೆಂಡರಿ ಬ್ಯಾಟ್ಸ್‌ಮನ್ ನಿಧನ

7 ದಿನ ಕ್ರಿಕೆಟ್​ನಿಂದ ನಿಷೇಧ

ಈ ಪಂದ್ಯದಿಂದ ಬೆನೆಟ್ ಹೊರಗುಳಿದಿರುವುದರಿಂದ, ಅವರು ಮುಂದಿನ 7 ದಿನಗಳವರೆಗೆ ಕ್ರಿಕೆಟ್ ಮೈದಾನಕ್ಕೆ ಮರಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ, ಇತ್ತೀಚೆಗೆ ಐಸಿಸಿ ಕನ್ಕ್ಯುಶನ್ ನಿಯಮಗಳ ಕುರಿತು ತಂದಿರುವ ಬದಲಾವಣೆ. ವಾಸ್ತವವಾಗಿ ಶ್ರೀಲಂಕಾ-ಬಾಂಗ್ಲಾದೇಶ ಟೆಸ್ಟ್ ಸರಣಿಯೊಂದಿಗೆ 4ನೇ ಆವೃತ್ತಿಯ ಡಬ್ಲ್ಯೂಟಿಸಿ ಸೀಸನ್ ಕೂಡ ಪ್ರಾರಂಭವಾಗಿದೆ. ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನ್ಕ್ಯುಶನ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ. ಆ ಪ್ರಕಾರ, ಪಂದ್ಯದ ಸಮಯದಲ್ಲಿ ಆಟಗಾರನೊಬ್ಬ ಇಂಜುರಿಯಿಂದ ಅಥವಾ ಇತರೆ ಕಾರಣಗಳಿಂದ ಪಂದ್ಯದಿಂದ ಹೊರಗುಳಿದು, ಆತನ ಬದಲಿಗೆ ಇನ್ನೊಬ್ಬ ಆಟಗಾರ ತಂಡಕ್ಕೆ ಸೇರ್ಪಡೆಗೊಂಡರೆ, ಆ ಗಾಯಗೊಂಡ ಆಟಗಾರ ಕನಿಷ್ಠ 7 ದಿನಗಳವರೆಗೆ ಮೈದಾನಕ್ಕೆ ಮರಳುವಂತಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಹೀಗಾಗಿ ಬ್ರಿಯಾನ್ ಬೆನೆಟ್ ಈ ಹೊಸ ನಿಯಮದ ಪ್ರಕಾರ ಮುಂದಿನ 7 ದಿನಗಳ ಕಾಲ ತಂಡದೊಂದಿಗೆ ಕಣಕ್ಕಿಳಿಯುವಂತಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ