86 ಶತಕ, 41 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದ ಇಂಗ್ಲೆಂಡ್‌ನ ಲೆಜೆಂಡರಿ ಬ್ಯಾಟ್ಸ್‌ಮನ್ ನಿಧನ
England Cricket Mourns: ಇಂಗ್ಲೆಂಡ್‌ನ ಮಾಜಿ ಕ್ರಿಕೆಟ್ ಆಟಗಾರ ವೇಯ್ನ್ ಲಾರ್ಕಿನ್ಸ್ ಅವರು 71 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಒಟ್ಟಾರೆ ತಮ್ಮ ಕ್ರಿಕೆಟ್ ಜೀವನದಲ್ಲಿ 41,820 ಕ್ಕೂ ಹೆಚ್ಚು ರನ್ ಗಳಿಸಿದ್ದು, 86 ಶತಕಗಳನ್ನು ಬಾರಿಸಿದ್ದಾರೆ. ಅವರ ನಿಧನಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸಂತಾಪ ಸೂಚಿಸಿದೆ.

ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ (India vs England) ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಹೆಡಿಂಗ್ಲಿಯಲ್ಲಿ ನಡೆದ ಈ ಎರಡೂ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದೆ. ಇದೀಗ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಜುಲೈ 2 ರಿಂದ ಪ್ರಾರಂಭವಾಗುತ್ತಿದೆ. ಆದಾಗ್ಯೂ, ಎರಡನೇ ಟೆಸ್ಟ್ ಪಂದ್ಯ ಪ್ರಾರಂಭವಾಗುವ ಮೊದಲು, ಇಂಗ್ಲೆಂಡ್ ತಂಡದಲ್ಲಿ ಸೂತಕದ ಛಾಯೆ ಆವರಿಸಿದೆ. ತಂಡದ ಮಾಜಿ ಅನುಭವಿ ಆಟಗಾರ ವೇಯ್ನ್ ಲಾರ್ಕಿನ್ಸ್ (Wayne Larkins) ತಮ್ಮ 71 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ‘ನೆಡ್’ ಎಂದು ಪ್ರಸಿದ್ಧರಾಗಿದ್ದ ಲಾರ್ಕಿನ್ಸ್ ದೀರ್ಘಕಾಲದವರೆಗೆ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಚಿಕಿತ್ಸೆಯನ್ನು ಕೊಡಿಸಲಾಗುತ್ತಿತ್ತು.
86 ಶತಕ, 41 ಸಾವಿರಕ್ಕೂ ಹೆಚ್ಚು ರನ್
ವೇಯ್ನ್ ಲಾರ್ಕಿನ್ಸ್ 482 ಪ್ರಥಮ ದರ್ಜೆ ಪಂದ್ಯಗಳಲ್ಲಿ 34.44 ಸರಾಸರಿಯಲ್ಲಿ 27142 ರನ್ ಬಾರಿಸಿದ್ದಾರೆ. ಇದರಲ್ಲಿ 59 ಶತಕಗಳು ಮತ್ತು 116 ಅರ್ಧಶತಕಗಳು ಸೇರಿವೆ. ವೇಯ್ನ್ ಲಾರ್ಕಿನ್ 485 ಲಿಸ್ಟ್ ಎ ಪಂದ್ಯಗಳಲ್ಲಿ 30.75 ಸರಾಸರಿಯಲ್ಲಿ 13594 ರನ್ ಕಲೆಹಾಕಿದ್ದು, ಲಿಸ್ಟ್ ಎ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ಒಟ್ಟು 26 ಶತಕಗಳು ಮತ್ತು 66 ಅರ್ಧಶತಕಗಳು ಸಿಡಿದಿವೆ. ಹಾಗೆಯೇ ಅವರು ಇಂಗ್ಲೆಂಡ್ ಪರ 13 ಟೆಸ್ಟ್ ಮತ್ತು 25 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ವೇಯ್ನ್ ಲಾರ್ಕಿನ್ಸ್ ತಮ್ಮ ಅಂತ ಟೆಸ್ಟ್ ವೃತ್ತಿಜೀವನದಲ್ಲಿ 3 ಅರ್ಧಶತಕಗಳ ಸಹಾಯದಿಂದ 493 ರನ್ ಗಳಿಸಿದ್ದು, 25 ಏಕದಿನ ಪಂದ್ಯಗಳಲ್ಲಿ 1 ಶತಕದ ಸಹಾಯದಿಂದ 591 ರನ್ ಗಳಿಸಿದ್ದಾರೆ. ಈ ರೀತಿಯಾಗಿ, ಲಾರ್ಕಿನ್ಸ್ ತಮ್ಮ ಇಡೀ ಕ್ರಿಕೆಟ್ ವೃತ್ತಿಜೀವನದಲ್ಲಿ 1358 ಇನ್ನಿಂಗ್ಸ್‌ಗಳಲ್ಲಿ 41,820 ರನ್ ಗಳಿಸಿದ್ದಾರೆ. ಇದರಲ್ಲಿ 86 ಶತಕಗಳು ಮತ್ತು 185 ಅರ್ಧಶತಕಗಳು ಸೇರಿವೆ.
England Cricket is deeply saddened to learn that Wayne Larkins has passed away at the age of 71.
We offer our sincerest condolences to Wayne’s family and his many friends.
— England Cricket (@englandcricket) June 29, 2025
ಸಂತಾಪ ಸೂಚಿಸಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ
ಮಾಜಿ ಬ್ಯಾಟ್ಸ್‌ಮನ್ ವೇಯ್ನ್ ಲಾರ್ಕಿನ್ಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ , ದಿಗ್ಗಜ ಆಟಗಾರನ ನಿಧನದಿಂದಾಗಿ ಮಂಡಳಿ ತೀವ್ರ ದುಃಖಿತವಾಗಿದೆ. ಮೈದಾನದಲ್ಲಿ ಅವರ ಸಾಧನೆಗಳಿಗಾಗಿ ಮಾತ್ರವಲ್ಲದೆ ಅವರು ಆಟಕ್ಕೆ ತಂದ ಹಾಸ್ಯ ಮತ್ತು ಉತ್ಸಾಹದಿಂದಲೂ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಮ್ಮ ಸಂತಾಪಗಳು ಎಂದು ಬರೆದುಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:26 pm, Sun, 29 June 25
