AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ZIM vs SA: ಆಫ್ರಿಕಾ ತಂಡದ ಪರ ಇತಿಹಾಸ ಸೃಷ್ಟಿಸಿದ ಆಂಜನೇಯನ ಪರಮ ಭಕ್ತ

Keshav Maharaj's Milestone: ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಮೊದಲ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಇದಲ್ಲದೆ, ತಂಡದ ನಾಯಕನಾಗಿ ಅವರ ಅದ್ಭುತ ಪ್ರದರ್ಶನ ದಕ್ಷಿಣ ಆಫ್ರಿಕಾ ತಂಡಕ್ಕೆ ಭರ್ಜರಿ ಗೆಲುವಿನ ಆರಂಭ ನೀಡಿದೆ. ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ಪ್ರಬಲ ಮುನ್ನಡೆ ಸಾಧಿಸಿದೆ.

ZIM vs SA: ಆಫ್ರಿಕಾ ತಂಡದ ಪರ ಇತಿಹಾಸ ಸೃಷ್ಟಿಸಿದ ಆಂಜನೇಯನ ಪರಮ ಭಕ್ತ
Keshav Maharaj
ಪೃಥ್ವಿಶಂಕರ
|

Updated on: Jun 29, 2025 | 9:57 PM

Share

ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ (South Africa vs Zimbabwe) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ತೆಂಬ ಬವುಮಾ ಅವರ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಸ್ಪಿನ್ನರ್ ಕೇಶವ್ ಮಹಾರಾಜ್ (Keshav Maharaj) ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ನಾಯಕತ್ವದ ಜೊತೆಗೆ ಆಟಗಾರನಾಗಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ದಕ್ಷಿಣ ಆಪ್ರಿಕಾ ತಂಡದ ಪರ ಇತಿಹಾಸ ಕೂಡ ನಿರ್ಮಿಸಿದ್ದಾರೆ. ಭಾರತ ಮೂಲದ ಕೇಶವ್ ಮಹಾರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರ ಮಾಡಲು ಸಾಧ್ಯವಾಗದ ದಾಖಲೆ ನಿರ್ಮಿಸಿದ್ದು ತಮ್ಮ ಹೆಸರನ್ನು ಅಮರವಾಗಿಸಿದ್ದಾರೆ.

ಇತಿಹಾಸ ನಿರ್ಮಿಸಿದ ಕೇಶವ ಮಹಾರಾಜ್

ಕೇಶವ್ ಮಹಾರಾಜ್ ಜಿಂಬಾಬ್ವೆ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಕ್ರೇಗ್ ಎರ್ವಿನ್ ಅವರನ್ನು ಔಟ್ ಮಾಡುವ ಮೂಲಕ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಅವರು ತಮ್ಮ ಮೊದಲ ವಿಕೆಟ್ ಪಡೆದ ತಕ್ಷಣ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಗಡಿ ಮುಟ್ಟಿದರು. ಇದರೊಂದಿಗೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗೆಯೇ ದಕ್ಷಿಣ ಆಫ್ರಿಕಾ ಪರ ಈ ಸಾಧನೆ ಮಾಡಿದ ಒಂಬತ್ತನೇ ಬೌಲರ್ ಕೂಡ ಆಗಿದ್ದಾರೆ. ಕೇಶವ್​ಗಿಂತ ಮೊದಲು ಈ ಸಾಧನೆ ಮಾಡಿದ ಎಂಟು ಬೌಲರ್‌ಗಳೂ ವೇಗದ ಬೌಲರ್‌ಗಳಾಗಿದ್ದರು.

ಮೇಲೆ ಹೇಳಿದಂತೆ ಕೇಶವ್ ಮಹಾರಾಜ್ ಭಾರತೀಯ ಮೂಲದ ಆಟಗಾರರಾಗಿದ್ದು ಆಂಜನೇಯನ ಪರಮ ಭಕ್ತರಾಗಿದ್ದಾರೆ. ಅಲ್ಲದೆ ಹಿಂದೂ ಧರ್ಮದ ಬಗ್ಗೆ ಅವರು ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಕೇಶವ್ ಅವರ ಪೂರ್ವಜರು ಉತ್ತರ ಪ್ರದೇಶದ ಸುಲ್ತಾನ್‌ಪುರದವರಾಗಿದ್ದು, 1874 ರಲ್ಲಿ ಎಲ್ಲರೂ ಡರ್ಬನ್‌ಗೆ ಸ್ಥಳಾಂತರಗೊಂಡರು. ಕೇಶವ್ ಕೂಡ ಡರ್ಬನ್‌ನಲ್ಲಿ ಜನಿಸಿದ್ದು, ಅಲ್ಲಿಯೇ ತಮ್ಮ ಕ್ರಿಕೆಟ್ ಬದುಕನ್ನು ಆರಂಭಿಸಿದರು.

ZIM vs SA: ಅರ್ಧಕ್ಕೆ ಆಟ ನಿಲ್ಲಿಸಿದ ಜಿಂಬಾಬ್ವೆ ಆಟಗಾರನಿಗೆ 7 ದಿನ ಕ್ರಿಕೆಟ್​ನಿಂದ ನಿಷೇಧ

ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಆರಂಭ

ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್‌ಗಳಿಗೆ 418 ರನ್ ಕಲೆಹಾಕಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತಂಡದ ಪರ ಮೊದಲ ಪಂದ್ಯವನ್ನಾಡಿದ ಲುವಾನ್-ಡ್ರೈ ಪ್ರಿಟೋರಿಯಸ್ 153 ರನ್ ಗಳಿಸಿದರೆ, ಕಾರ್ಬಿನ್ ಬಾಷ್ ಕೂಡ 100 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಮತ್ತೊಂದೆಡೆ, ಜಿಂಬಾಬ್ವೆ ತಂಡದ ಮೊದಲ ಇನ್ನಿಂಗ್ಸ್ 250 ರನ್​ಗಳಿಗೆ ಅಂತ್ಯವಾಗಿದ್ದು, ಈ ಇನ್ನಿಂಗ್ಸ್​ನಲ್ಲಿ ಕೇಶವ್ ಮಹಾರಾಜ್ 3 ವಿಕೆಟ್ ಕಬಳಿಸಿದ್ದಾರೆ. ಎರಡನೇ ದಿನದಾಟದಂತ್ಯಕ್ಕೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಆಫ್ರಿಕಾ ತಂಡ 1 ವಿಕೆಟ್ ನಷ್ಟಕ್ಕೆ 49 ರನ್ ಕಲೆಹಾಕಿ 216 ರನ್​ಗಳ ಮುನ್ನಡೆ ಸಾಧಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ