
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವೇ ರಾಹುಲ್ಗೆ ಸಿಕ್ಕಿರಲಿಲ್ಲ. ಹೀಗಾಗಿ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿದ್ದ ರಾಹುಲ್ ಅವಕಾಶ ಸಿಕ್ಕೊಡನೆ ಅದನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ನ್ಯೂ ಚಂಡೀಗಢದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ರಾಹುಲ್ ವಿಂಡೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 80 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಿಜೀವನದ 9ನೇ ಶತಕವನ್ನು ಪೂರೈಸಿದರು.ರಾಹುಲ್ 49ನೇ ಓವರ್ನ 4ನೇ ಎಸೆತವನ್ನು ಸಿಕ್ಸರ್ಗಟ್ಟುವ ಮೂಲಕ ತಮ್ಮ ಶತಕ ಪೂರೈಸಿದ್ದು ಮತ್ತಷ್ಟು ವಿಶೇಷವಾಗಿತ್ತು. ರಾಹುಲ್ ಅವರ ಶತಕದ ಬಲದಿಂದ ಭಾರತ ಮೊದಲು ಬ್ಯಾಟಿಂಗ್ ಮಾಡಿ 351 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.
ನ್ಯೂ ಚಂಡೀಗಢದಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ನಾಯಕ ಶುಭ್ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಕೇವಲ 4 ರನ್‌ಗಳಿಗೆ ಕಳೆದುಕೊಂಡಿತು. ಅಲ್ಲಿಂದ ರೋಹಿತ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿ ಉತ್ತಮ ಪಾಲುದಾರಿಕೆಯನ್ನು ರೂಪಿಸಿದರು. ರೋಹಿತ್ ಶರ್ಮಾ ಶತಕದಂಚಿನಲ್ಲಿ ಎಡವಿದರೆ, ರುತುರಾಜ್ ಅರ್ಧಶತಕ ಬಾರಿಸಿದರು. ಆ ನಂತರ ಬಂದ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿ ತಮ್ಮ ಶತಕವನ್ನು ಪೂರೈಸಿದರು.
ಇನ್ನಿಂಗ್ಸ್‌ನ 25 ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಕೆಎಲ್ ರಾಹುಲ್ ಅಜೇಯರಾಗಿ ಉಳಿದು ತಮ್ಮ ಶತಕ ಪೂರೈಸಿದರು. ನಿರೀಕ್ಷೆಯಂತೆ ಎಚ್ಚರಿಕೆಯ ಆರಂಭವನ್ನು ಪಡೆದ ರಾಹುಲ್ 41 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಆ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ರಾಹುಲ್ ಇನ್ನಿಂಗ್ಸ್‌ನ 49 ನೇ ಓವರ್‌ನಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿ ಶತಕದ ಗಡಿ ದಾಟಿದರು. ಇದು ಅವರ ಒಂಬತ್ತನೇ ಏಕದಿನ ಶತಕ ಮತ್ತು ವರ್ಷದ ಎರಡನೇ ಶತಕವಾಗಿದೆ.
ಶತಕದ ಬಳಿಕ ತಂಡದ ಸ್ಕೋರ್ ಬೋರ್ಡ್ ವೇಗವನ್ನು ಹೆಚ್ಚಿಸಿದ ರಾಹುಲ್ 50 ನೇ ಓವರ್‌ನಲ್ಲಿ 22 ರನ್ ಕಲೆಹಾಕುವ ಮೂಲಕ ತಂಡವನ್ನು 351 ರನ್‌ಗಳಿಗೆ ಕೊಂಡೊಯ್ದರು. ಅಂತಿಮವಾಗಿ ರಾಹುಲ್ ಕೇವಲ 87 ಎಸೆತಗಳಲ್ಲಿ 129 ರನ್ ಗಳಿಸಿ ಅಜೇಯರಾಗಿ ಉಳಿದರು, ಇದು ಅವರ ಏಕದಿನ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಆಗಿದೆ. ಭಾರತದ 7 ನೇ ವಿಕೆಟ್ 45.4 ಓವರ್‌ಗಳಲ್ಲಿ ಪತನವಾಯಿತು, ಆ ಸಮಯದಲ್ಲಿ ಸ್ಕೋರ್ 290 ಆಗಿತ್ತು. ರಾಹುಲ್ 78 ರನ್‌ಗಳಲ್ಲಿದ್ದರು. ಇದರ ನಂತರ, ಭಾರತ ಮುಂದಿನ 26 ಎಸೆತಗಳಲ್ಲಿ 61 ರನ್ ಕಲೆಹಾಕಿತು. ಇದರಲ್ಲಿ ಗುರ್ನೂರ್ ಬ್ರಾರ್ ಕೇವಲ 8 ರನ್ ಗಳಿಸಿದರೆ, ರಾಹುಲ್ 20 ಎಸೆತಗಳಲ್ಲಿ 51 ರನ್ ಬಾರಿಸಿದರು.
ಏಕದಿನ ಕ್ರಿಕೆಟ್ನಲ್ಲಿ ವಿಶೇಷ ಶತಕ ಪೂರೈಸಿದ ಕೆಎಲ್ ರಾಹುಲ್
5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಹುಲ್ಗೆ ಇದು ಭಾರತ ಪರ ನಾಲ್ಕನೇ ಏಕದಿನ ಶತಕವಾಗಿದೆ. ರಾಹುಲ್ ಕೇವಲ 36 ಇನ್ನಿಂಗ್ಸ್‌ಗಳಲ್ಲಿ ಈ ನಾಲ್ಕು ಶತಕಗಳನ್ನು ಬಾರಿಸುವ ಮೂಲಕ 83 ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದ ಎಂಎಸ್ ಧೋನಿ ಅವರನ್ನು ಸರಿಗಟ್ಟಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದವರ ಪಟ್ಟಿಯಲ್ಲಿ ಯುವರಾಜ್ ಸಿಂಗ್ (7 ಶತಕಗಳು, 92 ಇನ್ನಿಂಗ್ಸ್‌ಗಳು) ಮಾತ್ರ ರಾಹುಲ್ಗಿಂತ ಮುಂದಿದ್ದಾರೆ.
Published On - 6:16 pm, Sat, 3 October 26