ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ (KL Rahul) ಅಥವಾ ಹಾರ್ದಿಕ್ ಪಾಂಡ್ಯ (Hardik Pandya) ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ. ಈ ಸರಣಿಯಿಂದ ಭಾರತ ತಂಡದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ವಿಶ್ರಾಂತಿಯ ಕಾರಣ ಹೊರಗುಳಿಯಲಿದ್ದಾರೆ. ಹೀಗಾಗಿ ಏಕದಿನ ತಂಡವನ್ನು ರೋಹಿತ್ ಶರ್ಮಾ ಬದಲಿಗೆ ಕೆಎಲ್ ರಾಹುಲ್ ಅಥವಾ ಹಾರ್ದಿಕ್ ಪಾಂಡ್ಯ ಮುನ್ನಡೆಸುವ ಸಾಧ್ಯತೆಯಿದೆ.
ಝಿಂಬಾಬ್ವೆ ಸರಣಿ ಬಳಿಕ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಇಲ್ಲಿ ಏಕದಿನ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸುವ ಸಾಧ್ಯತೆಯಿದ್ದರೆ, ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಮುಂದುವರೆಯುವ ಸಾಧ್ಯತೆಯಿದೆ. ಏಕೆಂದರೆ ಈ ಹಿಂದೆ ಭಾರತ ಟಿ20 ತಂಡದ ನಾಯಕರಾಗಿ ಪಾಂಡ್ಯ ಕಾಣಿಸಿಕೊಂಡಿದ್ದರು.
ಆದರೆ ಈ ಬಾರಿಯ ಟಿ20 ವಿಶ್ವಕಪ್ಗೂ ಮುನ್ನ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಲಾಗಿತ್ತು. ಇದೀಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹಿಟ್ಮ್ಯಾನ್ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ.
ಅತ್ತ ಟಿ20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಭಾರತ ಟಿ20 ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗೆಯೇ ಏಕದಿನ ತಂಡದ ಹಂಗಾಮಿ ನಾಯಕರಾಗಿ ಕೆಎಲ್ ರಾಹುಲ್ ಆಯ್ಕೆಯಾದರೂ ಅಚ್ಚರಿಪಡಬೇಕಿಲ್ಲ.
ಭಾರತ ಮತ್ತು ಶ್ರೀಲಂಕಾ ನಡುವಣ 6 ಪಂದ್ಯಗಳ ಸರಣಿಯ ವೇಳಾಪಟ್ಟಿಯನ್ನು ಇನ್ನೂ ಸಹ ನಿಗದಿ ಮಾಡಲಾಗಿಲ್ಲ. ಇದಾಗ್ಯೂ ಟೂರ್ನಿಯನ್ನು ಜುಲೈ 27 ರಿಂದ ಆಗಸ್ಟ್ 7 ರ ನಡುವೆ ನಡೆಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಇದೇ ಅವಧಿಯಲ್ಲಿ ಆರು ಪಂದ್ಯಗಳು ನಡೆಯುವ ಸಾಧ್ಯತೆಯಿದೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿವರೆಗೆ ಭಾರತ ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ದೃಢಪಡಿಸಿದ್ದಾರೆ. ಹೀಗಾಗಿ 2025 ರವರೆಗೆ ಹಿಟ್ಮ್ಯಾನ್ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ.
ಇದನ್ನೂ ಓದಿ: Team India: ಕೊನೆಯ 10 ಓವರ್ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಸ್ ಫೈನಲ್ವರೆಗೆ ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕವಷ್ಟೇ ಭಾರತ ತಂಡದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎನ್ನಬಹುದು.