ನಿವೃತ್ತ ಕ್ರಿಕೆಟಿಗರಿಗಾಗಿ ಆಯೋಜನೆಯಾಗುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಮೂರನೇ ಸೀಸನ್ ಇದೇ ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗಲಿದೆ. ಈ ಆವೃತ್ತಿಯಲ್ಲಿ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾದ ಶಿಖರ್ ಧವನ್ ಮತ್ತು ದಿನೇಶ್ ಕಾರ್ತಿಕ್ ಆಡುತ್ತಿರುವುದರಿಂದ ಈ ಲೀಗ್ಗೆ ಮತ್ತಷ್ಟು ಮೆರಗು ತಂದಿದೆ. ಕೇವಲ ಇವರಿಬ್ಬರಲ್ಲದೆ ಇನ್ನೂ ಹಲವು ದಿಗ್ಗಜರು ಈ ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದರ ಜೊತೆಗೆ ಸುಮಾರು 40 ವರ್ಷಗಳ ನಂತರ ಶ್ರೀನಗರದಲ್ಲಿ ಕ್ರಿಕೆಟ್ ಲೀಗ್ ಆಯೋಜನೆಯಾಗುತ್ತಿರುವುದು ಇನ್ನುಷ್ಟು ವಿಶೇಷವಾಗಿರಲಿದೆ.
ಸೆಪ್ಟೆಂಬರ್ 20 ರಂದು ಜೋಧ್‌ಪುರದ ಬರ್ಕತುಲ್ಲಾ ಖಾನ್ ಕ್ರೀಡಾಂಗಣದಲ್ಲಿ ಲೀಗ್ ಆರಂಭವಾಗಲಿದೆ. ಈ ಲೀಗ್ನಲ್ಲಿ 6 ತಂಡಗಳು 25 ಪಂದ್ಯಗಳನ್ನು ಆಡಲಿದ್ದು, ಅಗ್ರ ಎರಡು ತಂಡಗಳ ನಡುವಿನ ಫೈನಲ್ ಪಂದ್ಯ ಅಕ್ಟೋಬರ್ 16 ರಂದು ನಡೆಯಲಿದೆ. ಫ್ರಾಂಚೈಸಿ ಆಧಾರಿತ ಟೂರ್ನಿಯಲ್ಲಿ 200 ಆಟಗಾರರ ಪೂಲ್ ರಚಿಸಲಾಗಿದ್ದು, ಈ ಲೀಗ್ನ ಫೈನಲ್ ಪಂದ್ಯ ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ಈ ಆವೃತ್ತಿಯ ಬಗ್ಗೆ ಮಾಹಿತಿ ನೀಡಿದ ಎಲ್‌ಎಲ್‌ಸಿಯ ಸಹ-ಸಂಸ್ಥಾಪಕ ರಾಮನ್ ರಹೇಜಾ, ‘ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಮುಂದಿನ ಸೀಸನ್ ಇನ್ನೇನು ಪ್ರಾರಂಭವಾಗಲಿದ್ದು, ಈ ಬಾರಿ ಕಾಶ್ಮೀರದಲ್ಲೂ ಪಂದ್ಯಗಳು ನಡೆಯುತ್ತಿರುವುದು ಸಂತಸ ತಂದಿದೆ. 40 ವರ್ಷಗಳ ನಂತರ ಕಾಶ್ಮೀರದ ಜನರಿಗೆ ಕ್ರೀಡಾಂಗಣದಲ್ಲಿ ಲೈವ್ ಕ್ರಿಕೆಟ್ ವೀಕ್ಷಿಸಲು ಇದು ಒಂದು ಅನನ್ಯ ಅವಕಾಶವಾಗಿದೆ. ಅಲ್ಲದೆ ಕ್ರಿಕೆಟಿಗರಿಗೂ ಕೂಡ ಕಾಶ್ಮೀರದ ಸೌಂದರ್ಯವನ್ನು ಅನುಭವಿಸಲು ಮತ್ತು ಆತಿಥ್ಯ ಮತ್ತು ಪ್ರೀತಿಯನ್ನು ಆನಂದಿಸಲು ಸಿಕ್ಕಿರುವ ಸುವರ್ಣ ಅವಕಾಶವಾಗಿದೆ ಎಂದಿದ್ದಾರೆ.
ಇನ್ನು ಕಳೆದ ಬಾರಿ ಸುರೇಶ್ ರೈನಾ, ಆ್ಯರೊನ್ ಫಿಂಚ್, ಮಾರ್ಟಿನ್ ಗಪ್ಟಿಲ್, ಹಾಲಿ ಭಾರತ ತಂಡದ ಕೋಚ್ ಗೌತಮ್ ಗಂಭೀರ್, ಕ್ರಿಸ್ ಗೇಲ್, ಹಾಶಿಮ್ ಆಮ್ಲಾ, ರಾಸ್ ಟೇಲರ್ ಮುಂತಾದ ದಿಗ್ಗಜರು ಈ ಲೀಗ್ನಲ್ಲಿ ಆಡಿದ್ದರು. ಈ ಲೀಗ್‌ಗಾಗಿ ಇಂದು ಅಂದರೆ ಆಗಸ್ಟ್ 29 ರಂದು ಹರಾಜು ನಡೆಯುತ್ತಿದ್ದು, ಕೆಲವು ಅಚ್ಚರಿಯ ಖರೀದಿ ಕಂಡುಬಂದಿದೆ. ಇನ್ನು ಇತ್ತೀಚೆಗೆ ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್ ಮೇಲೆ ಸಾಕಷ್ಟು ಹಣದ ಮಳೆಯಾಗುವ ಸಾಧ್ಯತೆಗಳಿವೆ.
ಪಂದ್ಯಾವಳಿಯ ಮೊದಲ ಲೆಗ್ ಜೋಧ್‌ಪುರದಲ್ಲಿ ನಡೆಯಲಿದ್ದು, ಎರಡನೇ ಲೆಗ್‌ಗೆ ಸೂರತ್‌ನ ಲಾಲ್‌ಭಾಯ್ ಕಾಂಟ್ರಾಕ್ಟರ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಮೂರನೇ ಲೆಗ್ ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅಕ್ಟೋಬರ್ 16 ರಂದು ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ