ಭಾರತ ವಿರುದ್ಧ ಸೋತ ಪಾಕ್ ತಂಡದಲ್ಲಿ ಬದಲಾವಣೆ? ಬಾಬರ್ ಪಡೆಗೆ ಕಾಡುತ್ತಿದೆ ಅದೊಂದು ಕೊರತೆ..!

| Updated By: ಪೃಥ್ವಿಶಂಕರ

Updated on: Oct 27, 2022 | 12:08 PM

T20 World Cup 2022: 2021ರ ವಿಶ್ವಕಪ್​ ಸೋಲಿನ ಬಳಿಕ ತನ್ನ ಬ್ಯಾಟಿಂಗ್ ಲೈನ್​ಅಪ್​ನಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿರುವ ಟೀಂ ಇಂಡಿಯಾ ಆ ವಿಭಾಗದಲ್ಲಿದ್ದ ನ್ಯೂನತೆಯನ್ನು ಈ ವಿಶ್ವಕಪ್ ವೇಳೆಗೆ ಸರಿಪಡಿಸಿಕೊಂಡಿದೆ.

ಭಾರತ ವಿರುದ್ಧ ಸೋತ ಪಾಕ್ ತಂಡದಲ್ಲಿ ಬದಲಾವಣೆ? ಬಾಬರ್ ಪಡೆಗೆ ಕಾಡುತ್ತಿದೆ ಅದೊಂದು ಕೊರತೆ..!
ಐದನೇ ಕಾಕತಾಳೀಯ - 1992 ರ ಏಕದಿನ ವಿಶ್ವಕಪ್‌ನಂತೆ, 2022 ರ ಟಿ20 ವಿಶ್ವಕಪ್‌ನಲ್ಲೂ, ಪಾಕಿಸ್ತಾನ ಮೆಲ್ಬೋರ್ನ್​ನಲ್ಲಿ ಸೋಲುವುದರೊಂದಿಗೆ ಪಂದ್ಯಾವಳಿಯಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು.
Image Credit source: the indian express
Follow us on

ಟಿ20 ವಿಶ್ವಕಪ್ (T20 World Cup 2022) ಆರಂಭದಲ್ಲೇ ಕೋಟ್ಯಾಂತರ ಅಭಿಮಾನಿಗಳ ಫೈನಲ್ ಪಂದ್ಯವೊಂದು ಮುಗಿದು ಹೋಗಿದೆ. ಇಡೀ ವಿಶ್ವವೇ ಕಾತುರದಿಂದ ಕಾದು ನೋಡುತ್ತಿದ್ದ ಭಾರತ- ಪಾಕ್ ಪಂದ್ಯ ನಿರೀಕ್ಷಿತ ರೀತಿಯಲ್ಲೇ ಮನರಂಜನೆಯ ರಸದೌತಣವನ್ನೇ ನೀಡಿದೆ. ಆದರೆ ಗೆಲುವಿನ ಹೊಸ್ತಿಲಿನಲ್ಲಿದ್ದ ಪಾಕ್ ತಂಡಕ್ಕೆ ಮಾತ್ರ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೊನೆಯ ಹಂತದವರೆಗೂ ಪಂದ್ಯವನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಂಡಿದ್ದ ಬಾಬರ್ (babar azam) ಪಡೆ ತಾವು ಮಾಡಿಕೊಂಡ ತಪ್ಪುಗಳಿಂದಲ್ಲೇ ಪಂದ್ಯವನ್ನು ಕೈಚೆಲ್ಲಬೇಕಾಯಿತು. ಹೀಗಾಗಿ ಭಾರತ ವಿರುದ್ಧದ ಸೋಲಿನ ಬಳಿಕ ಪಾಕಿಸ್ತಾನ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಗಳು ದಟ್ಟವಾಗಿವೆ.

2021ರ ವಿಶ್ವಕಪ್​ ಸೋಲಿನ ಬಳಿಕ ತನ್ನ ಬ್ಯಾಟಿಂಗ್ ಲೈನ್​ಅಪ್​ನಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿರುವ ಟೀಂ ಇಂಡಿಯಾ ಆ ವಿಭಾಗದಲ್ಲಿದ್ದ ನ್ಯೂನತೆಯನ್ನು ಈ ವಿಶ್ವಕಪ್ ವೇಳೆಗೆ ಸರಿಪಡಿಸಿಕೊಂಡಿದೆ. ಅದರಲ್ಲೂ ವೇಗದ ಬೌಲಿಂಗ್ ಆಲ್​ರೌಂಡರ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವುದು ರೋಹಿತ್ ಪಡೆಗೆ ಆನೆ ಬಲ ತಂದಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ಎಂದಿನ ಸೂತ್ರವನ್ನೇ ಅಳವಡಿಸಿಕೊಳುತ್ತಾ, ಕೇವಲ ಆರಂಭಿಕರಿಬ್ಬರ ಮೇಲೆ ಅವಲಂಬಿತವಾಗಿದ್ದು, ಈ ವಿಶ್ವಕಪ್​ನಲ್ಲೂ ಅದೇ ತಂತ್ರವನ್ನೆ ಬಳಸಿಕೊಂಡು ಕಣಕ್ಕಿಳಿದಿದೆ. ಆದರೆ ಈಗ ಭಾರತ ವಿರುದ್ಧದ ಸೋಲಿನ ಬಳಿಕ ಸೋಲಿನ ಪರಾಮರ್ಶೆ ಮಾಡಿಕೊಂಡಿರುವ ಪಾಕ್ ತಂಡ, ತಂಡಕ್ಕೆ ಬೌಲಿಂಗ್ ಆಲ್​ರೌಂಡರ್ ಅಗತ್ಯತೆಯ ಬಗ್ಗೆ ಚರ್ಚೆ ಶುರು ಮಾಡಿದೆ.

ಗುರಿ ಬೆನ್ನಟ್ಟುವಾಗ ಮೇಲುಗೈ

ಪಾಕ್ ಬೌಲಿಂಗ್ ವಿಭಾಗದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂಬುದಕ್ಕೆ ಕಳೆದೊಂದು ವರ್ಷದ ಟ್ರ್ಯಾಕ್ ರೆಕಾರ್ಡೆ ಸಾಕ್ಷಿಯಾಗಿದೆ. 2021 ರ ವಿಶ್ವಕಪ್ ಬಳಿಕ ಪಾಕ್ ಆಡಿರುವ ಟಿ20 ಪಂದ್ಯಗಳಲ್ಲಿ ಗುರಿ ಬೆನ್ನಟ್ಟುವ ವೇಳೆ ಕೇವಲ 3 ಪಂದ್ಯಗಳಲ್ಲಿ ಸೋತಿದ್ದರೆ ಇನ್ನು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಪಾಕ್ ತಂಡ ಮೊದಲು ಬೌಲಿಂಗ್ ಮಾಡುವಾಗ ತಂಡದ ಬೌಲರ್​ಗಳು ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಆದರೆ ಇದಕ್ಕೆ ತದ್ವಿರುದ್ಧವಾಗಿ ಪಾಕ್ ತಂಡ ಮೊದಲು ಬ್ಯಾಟಿಂಗ್ ಮಾಡಿದಾಗ ಗೆಲುವಿನ ಲೆಕ್ಕಾಚಾರವೇ ಕೊಂಚ ಏರುಪೇರಾಗಿದೆ. ಇದಕ್ಕೆ ಸಾಕ್ಷಿಯಾಗಿ ಕಳೆದ ವಿಶ್ವಕಪ್​ನಿಂದ ಆಡಿರುವ ಟಿ20 ಪಂದ್ಯಗಳಲ್ಲಿ ಪಾಕ್ ತಂಡ ಮೊದಲು ಬ್ಯಾಟಿಂಗ್ ಮಾಡಿರುವ ಪಂದ್ಯಗಳಲ್ಲಿ 6 ರಲ್ಲಿ ಗೆದ್ದಿದ್ದರೆ, ಇನ್ನುಳಿದಂತೆ 7 ಪಂದ್ಯಗಳಲ್ಲಿ ಸೋತಿದೆ. ಇದರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯವೂ ಸೇರಿದೆ. ಅಲ್ಲದೆ ಮೊದಲು ಬ್ಯಾಟಿಂಗ್ ಮಾಡುವ ವೇಳೆ ಪಾಕ್ ತಂಡದ ಆಟಗಾರರು ಕೇವಲ 127.22 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದ್ದಾರೆ. ಆದರೆ ಟಿ20 ಕ್ರಿಕೆಟ್​ನ ಅಗ್ರ ಮೂರು ತಂಡಗಳಾದ ಇಂಗ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಮವಾಗಿ 152.77, 148.06 ಮತ್ತು 146.74 ರಲ್ಲಿ ರನ್ ಕಲೆ ಹಾಕಿವೆ. ಇದು ಪಾಕಿಸ್ತಾನದ ಬ್ಯಾಟಿಂಗ್ ವಿಭಾಗದಲ್ಲಿರುವ ನ್ಯೂನತೆಗಳಿಗೆ ಕೈಗನ್ನಡಿಯಾಗಿದೆ.

ಆರಂಭಿಕರ ಮೇಲೆ ಅವಲಂಬನೆ

ಗುರಿ ಬೆನ್ನಟ್ಟುವಾಗ ಪಾಕ್ ಬ್ಯಾಟಿಂಗ್ ವಿಭಾಗ ಪದೇಪದೇ ವಿಫಲವಾಗಲು ಪ್ರಮುಖ ಕಾರಣ, ತಂಡವೂ ಹೆಚ್ಚಾಗಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಆರಂಭಿಕ ಜೋಡಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿರುವ ಈ ಜೋಡಿ ಟಿ20 ಕ್ರಿಕೆಟ್​ನಲ್ಲಿ ಅದ್ಭುತ ಜೊತೆಯಾಟದ ಮೂಲಕ ಹಲವು ದಾಖಲೆಗಳನ್ನು ಮಾಡಿದೆ. ಇದಕ್ಕೆ ಪೂರಕವೆಂಬಂತೆ ಕಳೆದ ವಿಶ್ವಕಪ್​ನಲ್ಲೂ ಈ ಇಬ್ಬರೇ ಭಾರತ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಅಮೋಘ ಗೆಲುವು ತಂದಿತ್ತಿದ್ದರು. ಆದರೆ ಈ ವಿಶ್ವಕಪ್​ನಲ್ಲಿ ಈ ಜೋಡಿ ಬೇಗನೇ ಪೆವಿಲಿಯನ್ ಸೇರಿಕೊಂಡಿತ್ತು. ಹೀಗಾಗಿ ಪಾಕ್ ತಂಡ 160 ರನ್​ಗಳ ಸಾಧಾರಣ ಗುರಿಯನ್ನು ಭಾರತದ ಮುಂದಿಟ್ಟಿತ್ತು.

ಈ ಅಲ್ಪ ಗುರಿಯ ಮುಂದೆ ಬೌಲಿಂಗ್ ದಾಳಿಗಿಳಿದ ಪಾಕ್ ತಂಡದ ಬೌಲರ್​ಗಳು ತಂಡಕ್ಕೆ ನಿರೀಕ್ಷಿತ ಆರಂಭವನ್ನೇ ನೀಡಿದರು. ತಮ್ಮ ವೇಗ ಹಾಗೂ ನಿಖರವಾದ ದಾಳಿಯಿಂದ ಟೀಂ ಇಂಡಿಯಾಕ್ಕೆ ಹೆಚ್ಚು ರನ್ ಗಳಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಕೊನೆಯ 3 ಓವರ್​ಗಳಲ್ಲಿ ಟೀಂ ಇಂಡಿಯಾ ಗೆಲ್ಲಲು 48 ರನ್ ಬೇಕಿತ್ತು. ಅಲ್ಲದೆ ಕೊನೆಯ ಎರಡು ಓವರ್ ಎಸೆಯುವ ಜವಬ್ದಾರಿ ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಮೇಲೆ ಇದ್ದಿದ್ದರಿಂದ ಪಾಕ್ ತಂಡಕ್ಕೆ ಗೆಲುವು ನಿಶ್ಚಿತ ಅಂತಲೇ ಹೇಳಲಾಗಿತ್ತು. ಆದರೆ ಈ ಇಬ್ಬರು ಡೆತ್ ಓವರ್​ ಸ್ಪೆಷಲಿಸ್ಟ್​ಗಳ ಮೇಲೆ ಕೊಹ್ಲಿ ಅಬ್ಬರಿಸಿದ ರೀತಿ ಬಾಬರ್ ಪಡೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು. ಅಲ್ಲದೆ ಅಂತಿಮವಾಗಿ ಕೊನೆಯ ಓವರ್ ಎಸೆಯಲು ಸ್ಪಿನ್ ಬೌಲರ್​ ಬರಬೇಕಾದುದರಿಂದ ಪಾಕ್ ತಂಡದ ಸೋಲು ಇಲ್ಲಿ ಖಚಿತವಾಗಿತ್ತು.

ಮತ್ತೊಬ್ಬ ವೇಗಿಯ ಕೊರತೆ

ಗೆಲುವಿನ ಹೊಸ್ತಿಲಿನಲ್ಲಿದ್ದ ಪಾಕ್ ತಂಡ ಸೋಲಲು ಪ್ರಮುಖ ಕಾರಣವೇ ಅವರ ಬಳಿ ಮತ್ತೊಬ್ಬ ವೇಗದ ಬೌಲರ್ ಆಯ್ಕೆ ಇಲ್ಲದಿದ್ದಿದ್ದು. ಭಾರತದ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ಪಾಕ್ ಸ್ಪಿನ್ನರ್ ನವಾಜ್ ದಾಳಿಗಳಿದಿದ್ದರು. ಆ ಓವರ್​ನಲ್ಲಿ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಇದರಿಂದ ನವಾಜ್​ಗೆ ಆ ಬಳಿಕ ಬೌಲಿಂಗ್​ ನೀಡುವುದಕ್ಕೆ ನಾಯಕ ಬಾಬರ್ ಮನಸ್ಸು ಮಾಡಲಿಲ್ಲ. ಅಲ್ಲದೆ ಅಫ್ರಿದಿ ಮತ್ತು ರೌಫ್ ಮೇಲೆ ಹೆಚ್ಚು ವಿಶ್ವಾಸ ಹೊಂದಿದ್ದ ಬಾಬರ್ 19 ಓವರ್​ ಅಷ್ಟರಲ್ಲೇ ಟೀಂ ಇಂಡಿಯಾವನ್ನು ಗೆಲುವಿನ ಟ್ರ್ಯಾಕ್​ನಿಂದ ದೂರ ತಳ್ಳುತ್ತಾರೆ ಎಂಬುದು ಅವರ ಅಚಲ ವಿಶ್ವಾಸವಾಗಿತ್ತು.

ಆದರೆ ಈ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಕೊಹ್ಲಿ ಈ ಇಬ್ಬರು ಬೌಲರ್​ಗಳ ಮೇಲೆ ರನ್​ಗಳ ಸುರಿಮಳೆಗೈದರು. ಅಲ್ಲದೆ 20ನೇ ಓವರ್​ನಲ್ಲಿ ಸ್ಪಿನ್ ಬೌಲರ್ ಬೌಲಿಂಗ್ ಮಾಡುವುದು ಟೀಂ ಇಂಡಿಯಾಕ್ಕೆ ಗೊತ್ತಿದ್ದರಿಂದ ಅವರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲಿಲ್ಲ. ಹಾಗೆಯೇ ಪಾಕಿಸ್ತಾನ ತಂಡದಲ್ಲೂ ಮತ್ತೊಬ್ಬ ವೇಗದ ಬೌಲರ್ ಆಗಿ ಯಾರು ಇಲ್ಲದಿದ್ದಿರಂದ ಚೆಂಡನ್ನು ಮತ್ತೊಮ್ಮೆ ನವಾಜ್‌ಗೆ ನೀಡುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಒಂದು ವೇಳೆ ಪಾಕ್ ತಂಡದಲ್ಲಿ 4ನೇ ವೇಗಿಯಾಗಿ ಮತ್ತೊಂದು ಆಯ್ಕೆ ಇದ್ದಿದ್ದರೆ ಪಾಕ್ ತಂಡಕ್ಕೆ ಗೆಲುವು ಕಾತರಿಯಾಗುತ್ತಿತ್ತು.

ರೋಹಿತ್ ತಂತ್ರ

ಪಾಕ್ ತಂಡಕ್ಕೆ ಹೋಲಿಸಿಕೊಂಡರೆ ಈ ತಂತ್ರದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಈ ಪಂದ್ಯಕ್ಕೆ 3 ವೇಗಿಗಳು, ಇಬ್ಬರು ಸ್ಪಿನ್ನರ್​ಗಳನ್ನು ರೋಹಿತ್ ಕಣಕ್ಕಿಳಿಸಿದರೆ, ಬೌಲಿಂಗ್ ಆಲ್​ರೌಂಡರ್ ಆಗಿ ಪಾಂಡ್ಯರನ್ನು ಕಣಕ್ಕಿಳಿಸಿದರು. ಹೀಗಾಗಿ ಪಾಕ್ ಇನ್ನಿಂಗ್ಸ್​ನ 12ನೇ ಓವರ್​ನಲ್ಲಿ ಅಕ್ಷರ್ ಪಟೇಲ್ ದುಬಾರಿಯಾಗಿದ್ದರಿಂದ ಅವರಿಗೆ ಮತ್ತೆ ಬೌಲಿಂಗ್ ನೀಡುವ ಗೋಜಿಗೆ ರೋಹಿತ್ ಹೋಗಲಿಲ್ಲ. ಬೌಲಿಂಗ್ ಆಲ್‌ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಪಾಂಡ್ಯ, ಮತ್ತೊಬ್ಬ ಬೌಲರ್​ ಆಗಿ ತಂಡದಲ್ಲಿ ಇದ್ದಿದ್ದರಿಂದ ರೋಹಿತ್, ಪಾಂಡ್ಯ ಕೋಟಾವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅಲ್ಲದೆ ಅಶ್ವಿನ್​ ಕೋಟಾವನ್ನು ರೋಹಿತ್ 3 ಓವರ್​ಗಳಿಗೆ ಕೊನೆ ಮಾಡಿದರು. ಹೀಗಾಗಿ ಕೊನೆಯ 5 ಓವರ್​ಗಳನ್ನು ಎಸೆಯಲು ರೋಹಿತ್, ತಂಡದ 4 ವೇಗಿಗಳನ್ನು ಬಳಸಿಕೊಂಡರು. ಈ ತಂತ್ರದಲ್ಲಿ ರೋಹಿತ್ ಯಶಸ್ವಿಯಾದರು ಕೂಡ.

ಆದರೆ ಪಾಕ್ ತಂಡದಲ್ಲಿ ವೇಗದ ಬೌಲಿಂಗ್ ಆಲ್‌ರೌಂಡರ್ ಇಲ್ಲದಿರುವ ಕಾರಣ ಕೊನೆಯ ಓವರ್ ಎಸೆಯಲು ಸ್ಪಿನ್ನರೇ ಬರಬೇಕಾಯಿತು. ಪಾಕ್ ತಂಡದಲ್ಲಿ ಸ್ಪಿನ್ ಆಲ್‌ರೌಂಡರ್​ಗಳಿಗೆ ಕೊರೆತಯಿಲ್ಲ. ತಂಡದಲ್ಲಿ ಶಾದಾಬ್ ಖಾನ್, ನವಾಜ್, ಇಫ್ತಿಕರ್ ಅಹ್ಮದ್ ಕೂಡ ಆಫ್-ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡಬಲ್ಲರು. ಆದರೆ ತಂಡದಲ್ಲಿ ಸೀಮ್ ಬೌಲಿಂಗ್ ಆಲ್ರೌಂಡರ್‌ ಕೊರತೆಯಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಬಾಬರ್ ಪಡೆಯಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೈದರ್ ಅಲಿ ಅಥವಾ ಆಸಿಫ್ ಅಲಿ ಅವರ ಸ್ಥಾನಕ್ಕೆ ತಂಡದ ಯುವ ಬೌಲಿಂಗ್ ಆಲ್ರೌಂಡರ್‌ ಮೊಹಮ್ಮದ್ ವಾಸಿಮ್ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.

Published On - 11:43 am, Thu, 27 October 22