
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯ (Maharaja T20 Trophy) 9ನೇ ಪಂದ್ಯ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ನಮ್ಮ ಶಿವಮೊಗ್ಗ (Shivamogga vs Bengaluru Blasters) ತಂಡಗಳ ನಡುವೆ ನಡೆಯಿತು. ಮಳೆ ಪೀಡಿತ ಈ ಪಂದ್ಯವನ್ನು ತಲಾ 6 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನಮ್ಮ ಶಿವಮೊಗ್ಗ ತಂಡ 6 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 62 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನು 9 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡ ಮೂರನೇ ಓವರ್ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಗೌತಮ್ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಹಾರ್ದಿಕ್ ರಾಜ್ 3 ರನ್ಗೆ ಸುಸ್ತಾದರೆ, ಅನುಭವಿ ಅನಿರುದ್ಧ ಜೋಶಿ ಅವರ ಆಟ ಕೂಡ 4 ರನ್ಗೆ ಅಂತ್ಯವಾಯಿತು.
ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ನಿಹಾಲ್ ಉಪ್ಪಾಳ್ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 31 ರನ್ಗಳ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿ 8ನೇ ಕ್ರಮಾಂಕದಲ್ಲಿ ಬಂದ ದರ್ಶನ್ 14 ರನ್ಗಳ ಕಾಣಿಕೆ ನೀಡಿದರು. ಇವರಿಬ್ಬರನ್ನು ಬಿಟ್ಟರೆ ಉಳಿದವರ್ಯಾರು ಎರಡಂಕಿ ಮೊತ್ತ ದಾಟಲಿಲ್ಲ. ಇತ್ತ ಬೆಂಗಳೂರು ಪರ ನಾಯಕ ಶುಭಾಂಗ್ ಹೆಗ್ಡೆ 3 ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಮೊದಲ ವಿಕೆಟ್ಗೆ 25 ರನ್ ಕಲೆಹಾಕಿತು. ಆರಂಭಿಕ ಚೇತನ್ 16 ರನ್ ಬಾರಿಸಿ ಔಟಾದರೆ, ಮತ್ತೊಬ್ಬ ರೋಹನ್ ಪಾಟೀಲ್ ಅವರ ಇನ್ನಿಂಗ್ಸ್ ಕೂಡ 12 ರನ್ಗಳಿಗೆ ಅಂಗತ್ಯವಾಯಿತು. ಕೊನೆಯಲ್ಲಿ ಅನುಭವಿ ಮಯಾಂಕ್ ಅಗರ್ವಾಲ್ ಹಾಗೂ ನಾಯಕ ಶುಭಾಂಗ್ ಅಜೇಯ ಇನ್ನಿಂಗ್ಸ್ ಅಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇವರಿಬ್ಬರು ಕ್ರಮವಾಗಿ 18 ಮತ್ತು 14 ರನ್ಗಳ ಇನ್ನಿಂಗ್ಸ್ ಆಡಿದರು. ಈ ಗೆಲುವಿನೊಂದಿಗೆ ಬೆಂಗಳೂರು ತಂಡ ಈ ಲೀಗ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ನಮ್ಮ ಶಿವಮೊಗ್ಗ ತಂಡ ಇದುವರೆಗೆ ತನ್ನ ಗೆಲುವಿನ ಖಾತೆಯನ್ನು ತೆರೆಯಲು ಕಸರತ್ತು ಪಡೆಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Fri, 15 August 25