ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ವಿಷಪೂರಿತ ದ್ರವ ಸೇವಿಸಿದ್ದು, ಹೀಗಾಗಿ ಮುಂದಿನ 48 ಗಂಟೆಗಳ ಕಾಲ ಅವರಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ವರದಿಯಾಗಿದೆ. ರಣಜಿ ಪಂದ್ಯವಾಡಲು ತ್ರಿಪುರದ ಅಗರ್ತಲದಿಂದ ಸೂರತ್ಗೆ ತೆರಳಬೇಕಿದ್ದ ವಿಮಾನದಲ್ಲಿದ್ದ ಇರಿಸಲಾಗಿದ್ದ ವಿಷಕಾರಿ ದ್ರವವನ್ನು ಮಯಾಂಕ್ ನೀರು ಎಂದು ಸೇವಿಸಿದ್ದರು. ಇದರ ಬೆನ್ನಲ್ಲೇ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಇದಾಗ್ಯೂ ಅವರ ಬಾಯಯಲ್ಲಿ ಉರಿ ಊತ ಮತ್ತು ಹುಣ್ಣುಗಳು ಕಾಣಿಸಿಕೊಂಡಿದ್ದು, ಹೀಗಾಗಿ ಮುಂದಿನ 48 ಗಂಟೆಗಳ ಕಾಲ ಅವರಿಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತ್ರಿಪುರ ವಿರುದ್ಧದ ರಣಜಿ ಪಂದ್ಯದ ಬಳಿಕ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವಾಡಲು ಗುಜರಾತ್ಗೆ ತೆರಳಬೇಕಿತ್ತು. ಮಯಾಂಕ್ ಅಗರ್ವಾಲ್ ಸೇರಿದಂತೆ ಕರ್ನಾಟಕ ತಂಡದ ಆಟಗಾರರು ಸೂರತ್ಗೆ ತೆರಳಲು ಇಂಡಿಗೋ ವಿಮಾನ ಹತ್ತಿದ್ದರು. ಈ ವೇಳೆ ವಿಮಾನದಲ್ಲಿ ಇಡಲಾಗಿದ್ದ ವಿಷಕಾರಿ ದ್ರವ ಪದಾರ್ಥವನ್ನು ನೀರು ಎಂದು ಮಯಾಂಕ್ ಅಗರ್ವಾಲ್ ಕುಡಿದಿದ್ದಾರೆ.
ಇದರ ಬೆನ್ನಲ್ಲೇ ಅವರ ಗಂಟಲಿನಲ್ಲಿ ಉರಿಯ ಅನುಭವವಾಗಿದೆ. ಇದರಿಂದ ಅಸ್ವಸ್ಥಗೊಂಡ ಅವರನ್ನು ಕೂಡಲೇ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರಿಶೀಲಿಸಿದಾಗ ಅವರ ಬಾಯಲ್ಲಿ ಊತ ಹಾಗೂ ಸುಟ್ಟು ಗಾಯಗಳು ಕಂಡು ಬಂದಿದೆ ಎಂದು ವರದಿಯಾಗಿದೆ.
ವೈದ್ಯಕೀಯ ರಿಪೋರ್ಟ್ ಬೆನ್ನಲ್ಲೇ ಇದೀಗ ಮಯಾಂಕ್ ಅಗರ್ವಾಲ್ ತನ್ನ ಮ್ಯಾನೇಜರ್ NCCPS ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ನಾವು ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದು ಪಶ್ಚಿಮ ತ್ರಿಪುರ ಎಸ್ಪಿ ಕಿರಣ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: IND vs ENG: 2ನೇ ಟೆಸ್ಟ್ಗೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಹೆಸರಿಸಿದ ಹರ್ಭಜನ್ ಸಿಂಗ್
ಫೆಬ್ರವರಿ 2 ರಿಂದ ಶುರುವಾಗಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಮಯಾಂಕ್ ಅಗರ್ವಾಲ್ ಹೊರಗುಳಿದಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಕರ್ನಾಟಕ ತಂಡದ ಮ್ಯಾನೇಜರ್ ರಮೇಶ್ ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕ ತಂಡದ ಮುಂದಿನ ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ ಕಾಣಿಸಿಕೊಳ್ಳುವುದು ಅನುಮಾನ. ಅವರ ಅನುಪಸ್ಥಿತಿಯಲ್ಲಿ ಕರ್ನಾಟಕ ತಂಡವನ್ನು ಯುವ ಆಟಗಾರ ನಿಕಿನ್ ಜೋಸ್ ಮುನ್ನಡೆಸುವ ಸಾಧ್ಯತೆಯಿದೆ.