ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗುರುವಾರ (ಆಗಸ್ಟ್ 05), ಭಾರತೀಯ ಪುರುಷರ ಹಾಕಿ ತಂಡ ಜರ್ಮನಿಯ ವಿರುದ್ಧ 5-4 ಗೋಲುಗಳಿಂದ ಐತಿಹಾಸಿಕ ಗೆಲುವು ದಾಖಲಿಸುವ ಮೂಲಕ ಕಂಚಿನ ಪದಕ ಗೆದ್ದಿತು. ಈ ವಿಜಯವು ಐತಿಹಾಸಿಕವಾಗಿದೆ ಏಕೆಂದರೆ ಭಾರತೀಯ ಹಾಕಿ ತಂಡವು 41 ವರ್ಷಗಳ ನಂತರ ಒಲಿಂಪಿಕ್ ಪದಕವನ್ನು ಗೆದ್ದಿದೆ. ಪಂದ್ಯದ ಕೊನೆಯ ಸೆಕೆಂಡಿನವರೆಗೂ ಉತ್ಸಾಹ ಉತ್ತುಂಗದಲ್ಲಿತ್ತು. ಮನ್ ಪ್ರೀತ್ ಸಿಂಗ್ ನೇತೃತ್ವದ ತಂಡದ ಐತಿಹಾಸಿಕ ವಿಜಯವನ್ನು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನಾ ಸಂದೇಶಗಳೊಂದಿಗೆ ಆಚರಿಸಿದರು. ಟೋಕಿಯೊ ಕ್ರೀಡಾಕೂಟದಲ್ಲಿ ಹಾಕಿ ತಂಡದ ಅದ್ಭುತ ಸಾಧನೆಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಹಿಡಿದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರೆಗೂ ಪ್ರಶಂಸೆಗಳ ಮಹಾಪೂರವೆ ಹರಿದುಬಂತು. ಆದರೆ ಪುರುಷರ ತಂಡದ ವಿಜಯದ ನಂತರ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ಹಳೆಯ ಟ್ವೀಟ್ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮಹೇಂದ್ರ ಸಿಂಗ್ ಧೋನಿಯ ಟ್ವೀಟ್ 2014 ರ ವರ್ಷದ್ದು. ಅದರಲ್ಲಿ ಧೋನಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹಾಕಿ ತಂಡವನ್ನು ಅಭಿನಂದಿಸಿದ್ದರು. ಧೋನಿ ಆ ಸಮಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಮುನ್ನಡೆಸುತ್ತಿದ್ದರು. CSK 2014 ರ ಐಪಿಎಲ್ ಫೈನಲ್‌ಗೆ ಪ್ರವೇಶಿಸಲು ರೋಚಕ ಸೆಮಿಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು.
ಧೋನಿ ಹಾಕಿ ತಂಡವನ್ನು ಅಭಿನಂದಿಸಿದ್ದರು
ಫೈನಲ್‌ಗೆ ತಮ್ಮ ತಂಡದ ಪ್ರವೇಶ ಮತ್ತು ಚಿನ್ನದ ಪದಕ ಗೆದ್ದ ಭಾರತೀಯ ಹಾಕಿ ತಂಡವನ್ನು ಧೋನಿ ಟ್ವಿಟ್ಟರ್ನಲ್ಲಿ ಅಭಿನಂದಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಧೋನಿ, “ಇಂದು ಒಂದು ಉತ್ತಮ ದಿನ, CSK ಫೈನಲ್ ತಲುಪಿದ್ದರಿಂದ ಅಲ್ಲ. ಬದಲಿಗೆ, ಭಾರತೀಯ ಹಾಕಿ ತಂಡ ಚಿನ್ನದ ಪದಕ ಗೆದ್ದಿರುವುದೇ ಇದಕ್ಕೆ ಕಾರಣ. ನಮಗೆ ಹೆಮ್ಮೆ ತಂದಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ಭಾರತ ಹಾಕಿ ತಂಡ 2014 ರ ಏಷ್ಯನ್ ಗೇಮ್ಸ್ ಫೈನಲ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು .
Outstanding day today not because CSK got into the finals but because INDIAN HOCKEY TEAM won the gold medal,thanks for making us proud
— Mahendra Singh Dhoni (@msdhoni) October 2, 2014
ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿಯನ್ನು ಬಗ್ಗು ಬಡಿಯಿತು
ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 5-2 ಅಂತರದಲ್ಲಿ ಸೋತ ಭಾರತ ತಂಡವು ಕಂಚಿನ ಪದಕದ ಪಂದ್ಯದಲ್ಲಿ ಗುರುವಾರ ಜರ್ಮನಿಯನ್ನು ಎದುರಿಸಿತು. ಭಾರತವು 5-4 ಅಂತರದಲ್ಲಿ ಗೆಲುವು ಸಾಧಿಸುವ ಮುನ್ನ ಪಂದ್ಯದಲ್ಲಿ ಹಿಂದುಳಿದಿತ್ತು. ಆದರೆ ತಂಡವು ಉತ್ತಮ ಪುನರಾಗಮನ ಮಾಡಿ ಜರ್ಮನಿಯನ್ನು ಸೋಲಿಸಿ ಪದಕ ಗೆದ್ದಿತು. ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹಾರ್ದಿಕ್ ಸಿಂಗ್ ಮತ್ತು ಸಿಮ್ರಂಜಿತ್ ಸಿಂಗ್ ಗೋಲು ಗಳಿಸಿದರು.