ಕೇವಲ 1 ವಿಕೆಟ್​: ಇಂಡಿಯಾ ಎ ತಂಡದ ಗೆಲುವು ಕಸಿದ ‘ಬ್ಯಾಡ್ ಲೈಟ್’

ಭಾರತ ಎ ಮತ್ತು ನ್ಯೂಝಿಲೆಂಡ್ ಎ ನಡುವಣ 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ಲಿಂಕನ್‌ನಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನ್ಯೂಝಿಲೆಂಡ್ ಎ ತಂಡ ಮುನ್ನಡೆ ಪಡೆದಿದ್ದರೂ, ದ್ವಿತೀಯ ಇನಿಂಗ್ಸ್‌ನಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದ ಭಾರತ ಎ ತಂಡ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವ ಸನಿಹದಲ್ಲಿದ್ದರು.

ಕೇವಲ 1 ವಿಕೆಟ್​: ಇಂಡಿಯಾ ಎ ತಂಡದ ಗೆಲುವು ಕಸಿದ ಬ್ಯಾಡ್ ಲೈಟ್
India A
Image Credit source: BCCI

Updated on: Oct 27, 2026 | 1:20 PM

ಲಿಂಕನ್‌ನ ಬರ್ಟ್ ಸಟ್‌ಕ್ಲಿಫ್ ಓವಲ್ ಮೈದಾನದಲ್ಲಿ ಭಾರತ ಎ ಮತ್ತು ನ್ಯೂಝಿಲೆಂಡ್ ಎ ತಂಡಗಳ ನಡುವೆ ನಡೆದ ಮೊದಲ ಅನ್‌ಅಫೀಶಿಯಲ್ ಟೆಸ್ಟ್ ಪಂದ್ಯವು ಮಂದ ಬೆಳಕಿನ (ಬ್ಯಾಡ್ ಲೈಟ್) ಕಾರಣದಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿದೆ. ರೋಚಕ ಘಟ್ಟ ತಲುಪಿದ್ದ ಈ ಪಂದ್ಯದಲ್ಲಿ ಭಾರತ ಎ ತಂಡದ ಗೆಲುವಿಗೆ ಕೇವಲ 1 ವಿಕೆಟ್ ಅಗತ್ಯವಿದ್ದಾಗ ಮಂದ ಬೆಳಕು ಎದುರಾದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ಗೆಲುವಿನ ಹೊಸ್ತಿಲಲ್ಲಿದ್ದ ಭಾರತ ಎ ತಂಡಕ್ಕೆ ಕೇವಲ 1 ವಿಕೆಟ್ ದೂರದಲ್ಲಿ ಜಯ ಕೈತಪ್ಪಿದಂತಾಗಿದೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಎ ತಂಡದ ನಾಯಕ ರೈಸ್ ಮಾರಿಯು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 113 ರನ್‌ಗಳಿಗೆ ಆಲೌಟ್ ಆಗಿ ತೀವ್ರ ಹಿನ್ನಡೆ ಅನುಭವಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಎ ತಂಡ 317 ರನ್ ಗಳಿಸಿ, 204 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.

204 ರನ್​​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ಮೊತ್ತ ಕೇವಲ 10 ರನ್ ಆಗುವಷ್ಟರಲ್ಲಿ ಇಬ್ಬರು ಸ್ಟಾರ್ ಓಪನರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.

ಈ ಹಂತದಲ್ಲಿ ಜೊತೆಗೂಡಿದ ದೇವದತ್ ಪಡಿಕ್ಕಲ್ (199) ಹಾಗೂ ಸಾಯಿ ಸುದರ್ಶನ್ (91) ಭರ್ಜರಿ ಪ್ರದರ್ಶನ ನೀಡಿದರು. ಆ ಬಳಿಕ ಬಂದ ಯಶ್ ರಾಥೋಡ್ 66 ರನ್​ ಬಾರಿಸಿದರೆ, ವಾಷಿಂಗ್ಟನ್ ಸುಂದರ್ 52 ರನ್​ಗಳಿಸಿದರು. ಇನ್ನು ಆಖಿಬ್ ನಬಿ 38 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡವು 516 ರನ್​ಗಳಿಸಿ ದ್ವಿತೀಯ ಇನಿಂಗ್ಸ್ ಅಂತ್ಯಗೊಳಿಸಿತು.

313 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿನ 204 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 313 ರನ್​ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆಖಿಬ್ ನಬಿ ಯಶಸ್ವಿಯಾದರು. ನಾಯಕ ರೈಸ್ ಮಾರಿಯುನ (2) ಕ್ಲೀನ್ ಬೌಲ್ಡ್ ಮಾಡಿ ಮೊದಲ ಯಶಸ್ಸು ತಂದುಕೊಟ್ಟ ನಬಿ ಆ ಬಳಿಕ ಟಿಮ್ ರಾಬಿನ್ಸನ್ (0) ಅವರನ್ನು ಎಲ್​ಬಿ ಬಲೆಗೆ ಕೆಡವಿದರು. ಇದರ ಬೆನ್ನಲ್ಲೇ ಮ್ಯಾಥ್ಯೂ ಬಾಯ್ಲ್ (4) ವಿಕೆಟ್ ಕಬಳಿಸಿ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು.

ಈ ಹಂತದಲ್ಲಿ ಜೊತೆಗೂಡಿದ  ಕರ್ಟಿಸ್ ಹೀಫಿ (90*) ಹಾಗೂ ಡೀನ್ ಫಾಕ್ಸ್‌ಕ್ರಾಫ್ಟ್ (42) ದಿಟ್ಟ ಹೋರಾಟ ನಡೆಸಿದರೂ, ಭಾರತೀಯ ಬೌಲರ್​ಗಳ ಶಿಸ್ತು ಬದ್ಧ ದಾಳಿಯಿಂದಾಗಿ 187 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಕೊನೆಯ ವಿಕೆಟ್ ಪಡೆಯಲು ಇಂಡಿಯಾ ಎ ಬೌಲರ್​ಗಳು ಹರಸಾಹಸ ಪಟ್ಟರು. ಇದರ ನಡುವೆ ದುರಾದೃಷ್ಟ ಎಂಬಂತೆ ಬ್ಯಾಡ್ ಲೈಟ್ ಎದುರಾಯಿತು. ಮಂದ ಬೆಳಕಿನ ಕಾರಣ ಅಂಪೈರ್ ಪಂದ್ಯವನ್ನು ಸ್ಥಗಿತಗೊಳಿಸಿದ್ದರು.

ಇತ್ತ ಕೊನೆಯ ದಿನದಾಟದಲ್ಲಿ ಭಾರತ ಎ ತಂಡಕ್ಕೆ ಪಂದ್ಯ ಗೆಲ್ಲಲು ಉಳಿದಿದ್ದ 18 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಪಡೆಯುವ ಸುಲಭ ಗುರಿಯಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಎದುರಾದ ಮಂದ ಬೆಳಕು ಭಾರತದ ಗೆಲುವಿಗೆ ವಿಲನ್ ಆಗಿ ಪರಿಣಮಿಸಿತು.

ಟೀಮ್ ಇಂಡಿಯಾ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಆಖಿಬ್ ನಬಿ 3 ವಿಕೆಟ್ ಕಬಳಿಸಿದರೆ, ಪಾರ್ಟ್ ಟೈಮ್ ಸ್ಪಿನ್ನರ್ ಆಗಿ ಕಾಣಿಸಿಕೊಂಡ ದೇವದತ್ ಪಡಿಕ್ಕಲ್ 2 ವಿಕೆಟ್ ಉರುಳಿಸಿದರು.

ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ದೇವದತ್ ಪಡಿಕ್ಕಲ್ , ಸಾಯಿ ಸುದರ್ಶನ್ , ಧ್ರುವ್ ಜುರೆಲ್ (ನಾಯಕ) , ಯಶ್ ರಾಥೋಡ್ , ವಾಷಿಂಗ್ಟನ್ ಸುಂದರ್ , ಅನ್ಶುಲ್ ಕಾಂಬೋಜ್ , ಆಖಿಬ್ ನಬಿ , ಆಕಾಶ್ ದೀಪ್ , ಮುಖೇಶ್ ಚೌಧರಿ.

ಇದನ್ನೂ ಓದಿ: 10ನೇ ವಿಕೆಟ್​​ಗೆ ಹೊಸ ವಿಶ್ವ ದಾಖಲೆ: ಪಾಕ್ ಪಡೆಗೆ ರಣರೋಚಕ ಜಯ!

ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ , ಡೀನ್ ಫಾಕ್ಸ್‌ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್), ಸೈಮನ್ ಕೀನ್ , ಕ್ರಿಶ್ಚಿಯನ್ ಕ್ಲಾರ್ಕ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್ , ಝಾಕ್ ಗಿಬ್ಸನ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us