ಇಬ್ಬರು ಇದ್ದರೂ, ಇಲ್ಲದಿದ್ದರೂ ಕ್ರಿಕೆಟ್ ಇರುತ್ತೆ: ಸೆಹ್ವಾಗ್ ಖಡಕ್ ಮಾತು!

ಭಾರತೀಯ ಕ್ರಿಕೆಟ್‌ನಲ್ಲಿ ಸದ್ಯ ಚರ್ಚೆಯಲ್ಲಿರುವ ಅತಿ ದೊಡ್ಡ ವಿಷಯವೆಂದರೆ ಅದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರದ ಭವಿಷ್ಯ. ಈ ಇಬ್ಬರು ರನ್ ಮಷಿನ್‌ಗಳು ಸಂಪೂರ್ಣವಾಗಿ ಪ್ಯಾಡ್ ಎತ್ತಿಟ್ಟರೆ ಟೀಮ್ ಇಂಡಿಯಾದ ಕ್ರೇಝ್ ಕಮ್ಮಿಯಾಗುತ್ತಾ? ಅಭಿಮಾನಿಗಳು ಕ್ರಿಕೆಟ್ ನೋಡುವುದನ್ನು ಕಮ್ಮಿ ಮಾಡ್ತಾರಾ? ಎಂಬ ಆತಂಕ ಎಲ್ಲರಲ್ಲೂ ಇದೆ.

ಇಬ್ಬರು ಇದ್ದರೂ, ಇಲ್ಲದಿದ್ದರೂ ಕ್ರಿಕೆಟ್ ಇರುತ್ತೆ: ಸೆಹ್ವಾಗ್ ಖಡಕ್ ಮಾತು!
ವಿರಾಟ್-ವೀರೇಂದ್ರ-ರೋಹಿತ್
Image Credit source: GettyImages

Updated on: Sep 26, 2026 | 8:35 AM

ಭಾರತೀಯ ಕ್ರಿಕೆಟ್‌ನ ಎರಡು ಬಲಿಷ್ಠ ಪಿಲ್ಲರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಂಪೂರ್ಣವಾಗಿ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಏನಾಗಬಹುದು? ಭಾರತದಲ್ಲಿ ಕ್ರಿಕೆಟ್ ಕ್ರೇಝ್ ಕಮ್ಮಿಯಾಗುತ್ತಾ? ವೀಕ್ಷಕರ ಸಂಖ್ಯೆ ಕುಸಿಯುತ್ತಾ? ಇಂತಹ ಹತ್ತಾರು ಪ್ರಶ್ನೆಗಳು ಸದ್ಯ ಅಭಿಮಾನಿಗಳನ್ನು ಕಾಡುತ್ತಿವೆ. ಆದರೆ, ಈ ಎಲ್ಲಾ ಆತಂಕಗಳಿಗೆ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ನೇರ ಹಾಗೂ ಖಡಕ್ ಉತ್ತರ ನೀಡಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್, ಆಟಗಾರರಿಗಿಂತ ಕ್ರಿಕೆಟ್ ಆಟವೇ ದೊಡ್ಡದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. “ಒಬ್ಬರು ಅಥವಾ ಇಬ್ಬರು ಆಟಗಾರರಿಂದ ಕ್ರಿಕೆಟ್ ನಡೆಯುತ್ತಿಲ್ಲ. ಬರಿ ಕ್ರಿಕೆಟಿಗರಿಂದಲೇ ಈ ಆಟ ನಡೆಯುತ್ತಿದ್ದರೆ, ಕ್ರಿಕೆಟ್ ಇಷ್ಟೊತ್ತಿಗಗಲೇ ಎಂದೋ ನಿಂತುಹೋಗುತ್ತಿತ್ತು” ಎಂದು ಸೆಹ್ವಾಗ್ ಹೇಳಿದ್ದಾರೆ.

ಇತಿಹಾಸ ನೆನಪಿಸಿದ ವೀರು:

ಸ್ಟಾರ್ ಆಟಗಾರರು ಹೋದ ತಕ್ಷಣ ಕ್ರಿಕೆಟ್ ಮುಗಿದುಹೋಗುತ್ತದೆ ಎನ್ನುವ ವಾದ ಇಂದಿನದಲ್ಲ. ಈ ಹಿಂದೆಯೂ ಇಂತಹ ಆತಂಕಗಳು ಎದುರಾಗಿದ್ದವು ಎಂಬುದನ್ನು ಸೆಹ್ವಾಗ್ ನೆನಪಿಸಿದ್ದಾರೆ.

  • ದೈತ್ಯರ ನಿವೃತ್ತಿ: ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಅವರಂತಹ ದಿಗ್ಗಜರು ನಿವೃತ್ತಿಯಾದಾಗಲೂ ಜನ ಕ್ರಿಕೆಟ್ ನೋಡುವುದನ್ನು ನಿಲ್ಲಿಸಲಿಲ್ಲ.

“ನಾನು ನಿವೃತ್ತಿಯಾದಾಗಲೂ ಹಲವರು ಬಂದು ‘ನೀವು ಆಡುವುದನ್ನು ನಿಲ್ಲಿಸಿದ ಮೇಲೆ ನಾವು ಕ್ರಿಕೆಟ್ ನೋಡುವುದನ್ನೇ ಬಿಟ್ಟೆವು’ ಎಂದಿದ್ದರು. ಆದರೆ ವಾಸ್ತವ ಹಾಗಿರುವುದಿಲ್ಲ, ಅಭಿಮಾನಿಗಳು ಆಟವನ್ನು ಪ್ರೀತಿಸುತ್ತಾರೆ ಮತ್ತು ವೀಕ್ಷಿಸುವುದನ್ನು ಮುಂದುವರಿಸುತ್ತಾರೆ” ಎಂದು ಸೆಹ್ವಾಗ್ ತಿಳಿಸಿದ್ದಾರೆ.

 ಡಿಜಿಟಲ್ ಕ್ರಾಂತಿಯೇ ಕ್ರಿಕೆಟ್‌ನ ಬಲ:

ಈಗಿನ ಕಾಲದಲ್ಲಿ ಕ್ರಿಕೆಟ್‌ನ ಜನಪ್ರಿಯತೆ ಕುಗ್ಗಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ತಂತ್ರಜ್ಞಾನದ ಬೆಳವಣಿಗೆಯೇ ಕಾರಣ ಎಂದಿದ್ದಾರೆ ಸೆಹ್ವಾಗ್. ಹಿಂದೆಲ್ಲಾ ಪಂದ್ಯಗಳನ್ನು ನೋಡಲು ಟಿವಿ ಮುಂದೆಯೇ ಕೂರಬೇಕಿತ್ತು. ಆದರೆ ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಬಂದಿರುವುದರಿಂದ ಎಲ್ಲಿ ಬೇಕಾದರೂ ಕ್ರಿಕೆಟ್ ನೋಡಬಹುದು. ಹೀಗಾಗಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.

ಮುಂದಿನ ಗುರಿ 2027ರ ವಿಶ್ವಕಪ್:

ಸದ್ಯ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಹಾಗೂ ಟೆಸ್ಟ್ ಮಾದರಿಯಿಂದ ದೂರ ಸರಿದಿದ್ದರೂ, ಮುಂಬರುವ 2027ರ ಏಕದಿನ ವಿಶ್ವಕಪ್ ಆಡುವತ್ತ ಗಮನ ಹರಿಸಿದ್ದಾರೆ. ಅಲ್ಲಿಯವರೆಗೆ ಇಬ್ಬರೂ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: 44 ವರ್ಷಗಳ ಕಾಯುವಿಕೆ ಅಂತ್ಯ: ಹೊಸ ಬರೆದ ಸಾವನ್ ಬರ್ವಾಲ್

ಒಟ್ಟಾರೆಯಾಗಿ, ವೀರೇಂದ್ರ ಸೆಹ್ವಾಗ್ ಅವರ ಈ ಮಾತುಗಳು ಅಕ್ಷರಶಃ ಸತ್ಯ. ಭಾರತದಲ್ಲಿ ಕ್ರಿಕೆಟ್ ಎಂಬುದು ಕೇವಲ ಒಂದು ಕ್ರೀಡೆಯಲ್ಲ, ಅದೊಂದು ಭಾವನೆ. ಸಚಿನ್, ಧೋನಿ ಹೋದಾಗಲೂ ಮುಗಿಯದ ಕ್ರಿಕೆಟ್ ಕ್ರೇಝ್, ಕೊಹ್ಲಿ-ರೋಹಿತ್ ನಂತರವೂ ಮುಂದುವರಿಯಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಹೊಸ ತಲೆಮಾರಿನ ಆಟಗಾರರು ತಂಡವನ್ನು ಮುನ್ನಡೆಸಲು ಸಜ್ಜಾಗುತ್ತಿದ್ದರೆ, ಅಭಿಮಾನಿಗಳು ಹೊಸ ಹೀರೊಗಳನ್ನು ಬರಮಾಡಿಕೊಳ್ಳಲು ಸದಾ ಸಿದ್ಧರಾಗಿರುತ್ತಾರೆ. ಆಟಗಾರರು ಬದಲಾಗಬಹುದು, ಆದರೆ ಕ್ರಿಕೆಟ್ ಮೇಲಿನ ಪ್ರೀತಿ ಎಂದಿಗೂ ಶಾಶ್ವತ ಎನ್ನಬಹುದು.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us