
ಪಾಕಿಸ್ತಾನ್ ಕ್ರಿಕೆಟ್ ತಂಡದ ಅನುಭವಿ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಮೊಹಮ್ಮದ್ ನವಾಝ್ ಅವರು ಐಸಿಸಿ (ICC) ಆ್ಯಂಟಿ-ಡೋಪಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂರು ತಿಂಗಳ ಅವಧಿಗೆ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದಾರೆ. ಆದರೆ, ಅವರು ಈಗಾಗಲೇ ಸ್ವಯಂಪ್ರೇರಿತ ಅಮಾನತು ಅವಧಿಯನ್ನು ಪೂರೈಸಿರುವುದರಿಂದ ತಕ್ಷಣವೇ ಕ್ರಿಕೆಟ್ ಮೈದಾನಕ್ಕೆ ಮರಳಲು ಅರ್ಹರಾಗಿದ್ದಾರೆ.
ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಬಳಿಕ ಮೊಹಮ್ಮದ್ ನವಾಝ್ ಅವರ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರ ದೇಹದಲ್ಲಿ ‘ಕಾರ್ಬಾಕ್ಸಿ-ಟಿಎಚ್‌ಸಿ’ ಎಂಬ ಅಂಶ ಪತ್ತೆಯಾಗಿದೆ. ಇದು ಗಾಂಜಾ ಬಳಕೆಯಿಂದ ಉತ್ಪತ್ತಿಯಾಗುವ ರಾಸಾಯನಿಕವಾಗಿದೆ.
ಐಸಿಸಿ ನಿಯಮಗಳ ಪ್ರಕಾರ, ಇದನ್ನು ಕ್ರೀಡಾ ಪ್ರದರ್ಶನವನ್ನು ಹೆಚ್ಚಿಸುವ ಉದ್ದೇಶದ ಔಷಧಿಯ ಬದಲಿಗೆ, ‘ದುರ್ಬಳಕೆಯ ವಸ್ತು’ ಎಂದು ವರ್ಗೀಕರಿಸಲಾಗಿದೆ. ನವಾಝ್ ಇದನ್ನು ಪಂದ್ಯಾವಳಿಯ ಹೊರಗೆ ಮನರಂಜನೆಗಾಗಿ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ನವಾಝ್ ಅವರ ಮೂತ್ರದ ಮಾದರಿಯಲ್ಲಿ ಪತ್ತೆಯಾಗಿರುವ ‘ಕಾರ್ಬಾಕ್ಸಿ-ಟಿಎಚ್‌ಸಿ’ ಎಂಬ ರಾಸಾಯನಿಕವು ದೇಹದಲ್ಲಿ ಗಾಂಜಾ ಅಂಶವಿದ್ದರೆ ಮಾತ್ರ ಉತ್ಪತ್ತಿಯಾಗುತ್ತದೆ. ಈ ಬಗ್ಗೆ ಐಸಿಸಿ ವಿಚಾರಣೆ ನಡೆಸಿದಾಗ, ತಾವು ಪಂದ್ಯಾವಳಿ ಇಲ್ಲದ ಸಮಯದಲ್ಲಿ ಕೇವಲ ಮನರಂಜನೆಗಾಗಿ ಗಾಂಜಾ ಬಳಸಿದ್ದಾಗಿ ಅವರು ಸ್ವತಃ ಒಪ್ಪಿಕೊಂಡಿದ್ದಾರೆ. ಹೀಗಾಗಿ ನವಾಝ್ಗೆ ಕೇವಲ 3 ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ.
ನವಾಝ್ ಅವರ ಮೂರು ತಿಂಗಳ ನಿಷೇಧದ ಅವಧಿಯನ್ನು ಮೇ 1, 2026 ರಿಂದಲೇ ಜಾರಿಗೆ ಬರುವಂತೆ ಪರಿಗಣಿಸಲಾಗಿತ್ತು. ಏಕೆಂದರೆ ಅಂದಿನಿಂದಲೇ ಅವರು ಸ್ವಯಂಪ್ರೇರಿತವಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು.
ಅಲ್ಲದೆ ಐಸಿಸಿ ಸೂಚಿಸಿದ ಮಾದಕ ದ್ರವ್ಯ ದುರ್ಬಳಕೆ ತಡೆ ಪುನರ್ವಸತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನವಾಝ್ ಒಪ್ಪಿಕೊಂಡ ಕಾರಣ, ಅವರ ಪ್ರಮುಖ ಶಿಕ್ಷೆಯ ಅವಧಿಯನ್ನು ಕೇವಲ ಒಂದು ತಿಂಗಳಿಗೆ ಕಡಿತಗೊಳಿಸಲಾಯಿತು.
ನವಾಝ್ ಈಗಾಗಲೇ ಮೇ ತಿಂಗಳಿನಿಂದ ಜುಲೈ ಮಧ್ಯದವರೆಗೆ ಸುಮಾರು ಎರಡುವರೆ ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ಹೊರಗುಳಿದಿರುವುದರಿಂದ, ಅವರ ಅಮಾನತನ್ನು ಐಸಿಸಿ ಅಧಿಕೃತವಾಗಿ ತೆರವುಗೊಳಿಸಿದೆ. ಅವರು ಇಂದಿನಿಂದಲೇ ಯಾವುದೇ ರೀತಿಯ ಕ್ರಿಕೆಟ್ ಆಡಲು ಮುಕ್ತರಾಗಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ ವದಂತಿಗಳಿಗೆ ಬಿಸಿಸಿಐ ಬ್ರೇಕ್!
ಫೆಬ್ರವರಿ 7, 2026 ರಿಂದ ಮೇ 1, 2026 ರ ನಡುವಿನ ಅವಧಿಯಲ್ಲಿ ಮೊಹಮ್ಮದ್ ನವಾಝ್ ಆಡಿರುವ ಎಲ್ಲಾ ಪಂದ್ಯಗಳ ವೈಯಕ್ತಿಕ ಪ್ರದರ್ಶನ ಮತ್ತು ದಾಖಲೆಗಳನ್ನು ಐಸಿಸಿ ಅಮಾನ್ಯಗೊಳಿಸಿದೆ. ಟಿ20 ವಿಶ್ವಕಪ್‌ನಲ್ಲಿ ಅವರು ಆಡಿದ 7 ಪಂದ್ಯಗಳ ದಾಖಲೆಗಳೂ ಇದರಲ್ಲಿ ಸೇರಿವೆ. ಈ ಡೋಪಿಂಗ್ ತನಿಖೆಯ ಕಾರಣದಿಂದಾಗಿ ಅವರು ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ‘ಸರ್ರೆ’ ತಂಡದ ಪರವಾಗಿ ಆಡಬೇಕಿದ್ದ ಪ್ರಮುಖ ಒಪ್ಪಂದವನ್ನು ಕೂಡ ಕಳೆದುಕೊಂಡಿದ್ದಾರೆ.