ಪಾಕಿಸ್ತಾನ್ ತಂಡ ಕೊನೆಗೂ ಗೆಲುವಿನ ಹಾದಿಗೆ ಮರಳಿದೆ. ಸತತ ಕಳಪೆ ಪ್ರದರ್ಶನದಿಂದ ಟೀಕೆ ಎದುರಿಸುತ್ತಿದ್ದ ಪಾಕ್ ತಂಡ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸರಣಿ ಗೆಲುವು ಕೂಡ ಪಾಕಿಸ್ತಾನ್ ತಂಡಕ್ಕೆ ಅತ್ಯಂತ ಮಹತ್ವದ್ದಾಗಿತ್ತು.
ಏಕೆಂದರೆ ಪಾಕಿಸ್ತಾನ್ ತಂಡ ಸುಮಾರು 4 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಈ ಸರಣಿ ಗೆಲ್ಲಲು ಪಾಕಿಸ್ತಾನ್ ಮೊರೆ ಹೋಗಿದ್ದು ಸ್ಪಿನ್ನರ್ಗಳನ್ನ ಎಂಬುದು ವಿಶೇಷ. ಅಂದರೆ ವೇಗಿಗಳ ತವರೂರು ಎಂದು ಕರೆಸಿಕೊಳ್ಳುವ ಪಾಕಿಸ್ತಾನ್ ತಂಡವು ಈ ಬಾರಿ ಸ್ಪಿನ್ನರ್ಗಳೊಂದಿಗೆ ರಣತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ. ಹೀಗೆ ಸ್ಪಿನ್ನರ್ಗಳನ್ನು ಬಳಸಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ್ ತಂಡವು ಟೆಸ್ಟ್ ಕ್ರಿಕೆಟ್ ಹೊಸ ಇತಿಹಾಸವನ್ನೂ ಸಹ ಬರೆದಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಪಾಕಿಸ್ತಾನ 9 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನಲ್ಲಿ ಅವರ ಸ್ಪಿನ್ನರ್ಗಳು ಪ್ರಮುಖ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಇಂಗ್ಲೆಂಡ್ನ 20 ವಿಕೆಟ್ಗಳಲ್ಲಿ 20 ವಿಕೆಟ್ಗಳನ್ನು ಪಾಕಿಸ್ತಾನದ ಸ್ಪಿನ್ನರ್ಗಳು ಪಡೆದಿರುವುದು ವಿಶೇಷ.
ಅದರಲ್ಲೂ ವಿಶೇಷವೆಂದರೆ ಈ ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡದ ನಾಯಕ ಶಾನ್ ಮಸೂದ್ ಒಬ್ಬನೇ ಒಬ್ಬ ವೇಗದ ಬೌಲರ್ಗೂ ಬೌಲಿಂಗ್ ನೀಡಲಿಲ್ಲ ಎಂಬುದು. ಅಂದರೆ ಪಾಕಿಸ್ತಾನದ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್ಗಳನ್ನು ಮಾತ್ರ ಬಳಸಿದ್ದರು.
ಪಾಕಿಸ್ತಾನ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹದೊಂದು ತಂತ್ರ ನಡೆದಿರುವುದು ಇದೇ ಮೊದಲ ಬಾರಿಗೆ. ಎರಡು ಟೆಸ್ಟ್ ಪಂದ್ಯಗಳಲ್ಲಿ ವೇಗದ ಬೌಲರ್ಗಳನ್ನು ಬದಿಗಿಟ್ಟು ಪಾಕ್ ತಂಡವು ಸ್ಪಿನ್ನರ್ಗಳೊಂದಿಗೆ ಇಡೀ ಪಂದ್ಯ ಮುಗಿಸಿದ್ದಾರೆ. ಶಾನ್ ಮಸೂದ್ ಅವರ ಈ ನಿರ್ಧಾರವು ಪಾಕಿಸ್ತಾನದ ಸೋಲಿನ ಸರಣಿಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.
ಈ ಸರಣಿಯಲ್ಲಿ ಉಭಯ ತಂಡಗಳ ಸ್ಪಿನ್ನರ್ಗಳು ಒಟ್ಟಾಗಿ 73 ವಿಕೆಟ್ಗಳನ್ನು ಕಬಳಿಸಿದ್ದು, ಇದು ಕೂಡ ದಾಖಲೆಯಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ನಡೆದ ಯಾವುದೇ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್ಗಳು ಇಷ್ಟು ವಿಕೆಟ್ಗಳನ್ನು ಪಡೆದಿರಲಿಲ್ಲ.
ಇದಕ್ಕೂ ಮುನ್ನ 1969/70ರಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್ಗಳು ಒಟ್ಟು 71 ವಿಕೆಟ್ಗಳನ್ನು ಕಬಳಿಸಿದ್ದರು.
ಇನ್ನು ಈ ಸರಣಿ ಗೆಲುವಿನ ರೂವಾರಿಗಳೆಂದರೆ ಪಾಕಿಸ್ತಾನದ ಸ್ಪಿನ್ನರ್ಗಳಾದ ಸಾಜಿದ್ ಖಾನ್ ಮತ್ತು ನೋಮಾನ್ ಅಲಿ. ಈ ಇಬ್ಬರೂ ಬೌಲರ್ಗಳು ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.
ಆದರೆ ಉಳಿದೆರಡು ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡ ನೊಮಾನ್ ಅಲಿ ಒಟ್ಟು 20 ವಿಕೆಟ್ಗಳನ್ನು ಪಡೆದರೆ, ಸಾಜಿದ್ ಖಾನ್ 2 ಪಂದ್ಯಗಳ 4 ಇನ್ನಿಂಗ್ಸ್ಗಳಲ್ಲಿ ಒಟ್ಟು 19 ಬ್ಯಾಟ್ಸ್ಮನ್ಗಳನ್ನು ಬಲಿಪಶು ಮಾಡಿದರು. ಹಾಗೆಯೇ ಇಂಗ್ಲೆಂಡ್ ಸ್ಪಿನ್ನರ್ ಈ ಸರಣಿಯಲ್ಲಿ ಒಟ್ಟು 16 ವಿಕೆಟ್ಗಳನ್ನು ಕಬಳಿಸಿದರು.
ಇದನ್ನೂ ಓದಿ: 4 ಓವರ್ಗಳಲ್ಲಿ 93 ರನ್ಗಳು… 7 ರನ್ಗಳಿಂದ ಬೌಲರ್ಗೆ ಶತಕ ಮಿಸ್..!
ಅಂದರೆ ರಾವಲ್ಪಿಂಡಿ ಪಿಚ್ ಅನ್ನು ಸ್ಪಿನ್ ಸ್ನೇಹಿಯಾಗಿ ಪರಿವರ್ತಿಸಿದ ಪಾಕಿಸ್ತಾನ್ ತಂಡವು ಭರ್ಜರಿ ರಣತಂತ್ರದೊಂದಿಗೆ ಬಾಝ್ ಬಾಲ್ ಪಡೆ ಇಂಗ್ಲೆಂಡ್ ತಂಡವನ್ನು 9 ವಿಕೆಟ್ಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಪಾಕಿಸ್ತಾನ್ ತಂಡ ಗೆದ್ದುಕೊಂಡಿದೆ.