ಪಾಕ್ ಕ್ರಿಕೆಟ್ ಕೇಂದ್ರ ಒಪ್ಪಂದದಿಂದ ವೇಗಿ ಹ್ಯಾರಿಸ್ ರೌಫ್ ಕಿಕ್ ಔಟ್..!

|

Updated on: Feb 15, 2024 | 10:01 PM

Haris Rauf: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾತನ್ನು ದಿಕ್ಕರಿಸಿದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರ ಕೇಂದ್ರ ಒಪ್ಪಂದವನ್ನು ರದ್ದುಗೊಳಿಸಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ತನ್ನ ಹೆಸರನ್ನು ಹಿಂಪಡೆದಿದ್ದಕ್ಕಾಗಿ ಮಂಡಳಿ, ರೌಫ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ.

ಪಾಕ್ ಕ್ರಿಕೆಟ್ ಕೇಂದ್ರ ಒಪ್ಪಂದದಿಂದ ವೇಗಿ ಹ್ಯಾರಿಸ್ ರೌಫ್ ಕಿಕ್ ಔಟ್..!
ಹ್ಯಾರಿಸ್ ರೌಫ್
Follow us on

ವರ್ಷದಿಂದ ಸಾಕಷ್ಟು ವಿವಾದಗಳಿಂದಲೇ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) ಇದೀಗ ತನ್ನ ತಂಡದ ಸ್ಟಾರ್ ವೇಗದ ಬೌಲರ್ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಅದರಂತೆ ಮಂಡಳಿಯ ಮಾತನ್ನು ದಿಕ್ಕರಿಸಿದ ವೇಗದ ಬೌಲರ್ ಹ್ಯಾರಿಸ್ ರೌಫ್ (Haris Rauf) ಅವರ ಕೇಂದ್ರ ಒಪ್ಪಂದವನ್ನು ರದ್ದುಗೊಳಿಸಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ತನ್ನ ಹೆಸರನ್ನು ಹಿಂಪಡೆದಿದ್ದಕ್ಕಾಗಿ ಮಂಡಳಿ, ರೌಫ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಹಾಗೆಯೇ ಜೂನ್ 20, 2024 ರವರೆಗೆ ಯಾವುದೇ ವಿದೇಶಿ ಲೀಗ್‌ನಲ್ಲಿ ಆಡಲು ಹ್ಯಾರಿಸ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಲಾಗುವುದಿಲ್ಲ ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಿಸಿಬಿ, ‘2023-24ರ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಪಾಕಿಸ್ತಾನ ಟೆಸ್ಟ್ ತಂಡವನ್ನು ಸೇರಲು ನಿರಾಕರಿಸಿದ್ದ ಬಗ್ಗೆ ಹ್ಯಾರಿಸ್ ರೌಫ್‌ ಅವರನ್ನು ತನಿಖೆಗೆ ಒಳಪಡಿಸಿದ್ದು, ಇದೀಗ ತನಿಖೆ ಮಾಡಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹ್ಯಾರಿಸ್ ರೌಫ್‌ಗೆ ಶಿಕ್ಷೆ ವಿಧಿಸಿದೆ ಎಂದಿದೆ.

ವಿದೇಶಿ ಲೀಗ್‌ನತ್ತ ಚಿತ್ತ

ರೌಫ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲು ನಿರಾಕರಿಸಿದ್ದರು. ಹೀಗಾಗಿ ಅನಾನುಭವಿಗಳನ್ನು ಕಟ್ಟಿಕೊಂಡು ಕಣಕ್ಕಿಳಿದಿದ್ದ ಪಾಕ್ ತಂಡ ವೈಟ್ ವಾಶ್ ಮುಖಭಂಗಕ್ಕೆ ತುತ್ತಾಗಿತ್ತು. ಇತ್ತ ಪಾಕ್ ತಂಡದ ಪರ ಆಡಲು ಒಲ್ಲೆ ಎಂದಿದ್ದ ರೌಫ್, ವಿದೇಶಿ ಲೀಗ್‌ಗಳಲ್ಲಿ ಆಡುವುದಾಗಿ ನಿರ್ಧರಿಸಿದ್ದರು. ಇದರಿಂದ ಅಸಮಾಧಾನಗೊಂಡಿರುವ ಪಿಸಿಬಿ ತನ್ನ ಕೇಂದ್ರ ಒಪ್ಪಂದದಿಂದ ಹ್ಯಾರಿಸ್ ರೌಫ್ ಅವರನ್ನು ಕೈಬಿಟ್ಟಿದೆ. ಹಾಗೆಯೇ ಜೂನ್​ವರೆಗೆ ಯಾವುದೇ ಲೀಗ್ ಕ್ರಿಕೆಟ್ ಆಡಲು ಎನ್​ಒಸಿ ನೀಡದಿರಲು ನಿರ್ಧರಿಸಿದೆ.

ಜೂನ್ ವರೆಗೆ ಫ್ರಾಂಚೈಸಿ ಕ್ರಿಕೆಟ್ ಆಡುವಂತಿಲ್ಲ

ಮೇಲೆ ಹೇಳಿದಂತೆ ಜೂನ್ 30 ರವರೆಗೆ ಯಾವುದೇ ರೀತಿಯ ಫ್ರಾಂಚೈಸಿ ಲೀಗ್‌ನಲ್ಲಿ ಆಡಲು ರೌಫ್‌ಗೆ ಅವಕಾಶ ನೀಡುವುದಿಲ್ಲ ಎಂದು ಪಿಸಿಬಿ ನಿರ್ಧರಿಸಿದೆ. ಹೀಗಾಗಿ ರೌಫ್ ಯಾವುದೇ ವಿದೇಶಿ ಲೀಗ್‌ನಲ್ಲಿ ಆಡಲು ಪಿಸಿಬಿಯಿಂದ ಎನ್‌ಒಸಿ ಪಡೆಯುವುದಿಲ್ಲ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲು ರೌಫ್ ಯಾವುದೇ ವೈದ್ಯಕೀಯ ವರದಿ ಅಥವಾ ಮಾನ್ಯ ಕಾರಣಗಳನ್ನು ನೀಡದಿರುವುದು ಮಂಡಳಿಯ ಅತೃಪ್ತಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಬಿಬಿಎಲ್​ನಲ್ಲಿ ಆಡಲು ನಿರ್ಧಾರ

ಈ ಹಿಂದೆ ತನ್ನ ಕೆಲಸದ ಹೊರೆ ಮತ್ತು ಫಿಟ್ನೆಸ್ ಬಗ್ಗೆ ವೇಗಿ ಹ್ಯಾರಿಸ್ ರೌಫ್ ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೆ ರೌಫ್ ಇಂಜುರಿಯಿಂದ ಬಳಲುತ್ತಿರುವ ಬಗ್ಗೆ ಪಾಕಿಸ್ತಾನ ತಂಡದ ಫಿಸಿಯೋ ಯಾವುದೇ ವರದಿ ಮಾಡಿರಲಿಲ್ಲ. ಆದರೆ ಇದರ ಹೊರತಾಗಿಯೂ, ಹ್ಯಾರಿಸ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದು, ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಬಿಬಿಎಲ್​ನಲ್ಲಿ ಆಡಲು ನಿರ್ಧರಿಸಿದ್ದರು. ಹೀಗಿರುವಾಗ ಪಿಸಿಬಿ ಹ್ಯಾರಿಸ್ ಮೇಲೆ ಬಹಳ ದಿನಗಳಿಂದ ಸಿಟ್ಟು ಮಾಡಿಕೊಂಡಿತ್ತು.

ರೌಫ್ ವೃತ್ತಿಜೀವನ

30 ವರ್ಷದ ಹ್ಯಾರಿಸ್ ರೌಫ್ 2020 ರಲ್ಲಿ ಪಾಕಿಸ್ತಾನಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಒಂದು ಟೆಸ್ಟ್, 37 ಏಕದಿನ ಮತ್ತು 66 ಟಿ20 ಗಳನ್ನು ಆಡಿದ್ದಾರೆ. ಹ್ಯಾರಿಸ್ ರೌಫ್ ತಮ್ಮ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವುದರಿಂದ ಹಿಡಿದು ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ಆಡುವವರೆಗೆ ಹ್ಯಾರಿಸ್ ರೌಫ್ ಪಾಕಿಸ್ತಾನದಲ್ಲಿ ವಿಭಿನ್ನ ಅಭಿಮಾನಿಗಳನ್ನು ಹೊಂದಿದ್ದಾರೆ. 2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರೌಫ್ ಬೌಲಿಂಗ್​ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ್ದ ಸಿಕ್ಸರ್ ವಿಶ್ವದಾದ್ಯಂತ ವೈರಲ್ ಆಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Thu, 15 February 24