ಪಾಕ್ ತಂಡದಲ್ಲಿ ಮತ್ತೊಂದು ವಿವಾದ; ಮುಖ್ಯ ಕೋಚ್ ಹುದ್ದೆಗೆ ಜೇಸನ್ ಗಿಲ್ಲೆಸ್ಪಿ ಗುಡ್​​ಬೈ

|

Updated on: Nov 17, 2024 | 8:21 PM

Pakistan cricket controversy: ಜೇಸನ್ ಗಿಲ್ಲೆಸ್ಪಿ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ನಂತರವೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೇತನದಲ್ಲಿ ತಾರತಮ್ಯ ಮತ್ತು ಒಪ್ಪಂದದ ಷರತ್ತುಗಳ ಉಲ್ಲಂಘನೆ ಆರೋಪಗಳನ್ನು ಪಿಸಿಬಿ ಹೊರಿಸಿದೆ. ಆದರೆ ಗಿಲ್ಲೆಸ್ಪಿ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಾಜಿ ವೇಗದ ಬೌಲರ್ ಆಕಿಬ್ ಜಾವೇದ್ ಅವರು ಗಿಲ್ಲೆಸ್ಪಿ ಅವರ ಬದಲಿಯಾಗುವ ಸಾಧ್ಯತೆ ಇದೆ.

ಪಾಕ್ ತಂಡದಲ್ಲಿ ಮತ್ತೊಂದು ವಿವಾದ; ಮುಖ್ಯ ಕೋಚ್ ಹುದ್ದೆಗೆ ಜೇಸನ್ ಗಿಲ್ಲೆಸ್ಪಿ ಗುಡ್​​ಬೈ
ಜೇಸನ್ ಗಿಲ್ಲೆಸ್ಪಿ
Follow us on

ವಿವಾದ ಹಾಗೂ ಪಾಕಿಸ್ತಾನ ಕ್ರಿಕೆಟ್‌ಗೆ ಅದೊಂದು ರೀತಿಯ ಅವಿನಾಭಾವ ಸಂಬಂದ. ಒಂದು ವಿವಾದಕ್ಕೆ ತೆರೆ ಬಿತ್ತು ಎನ್ನುವಷ್ಟರಲ್ಲಿ ಮತ್ತೊಂದು ವಿವಾದ ಪಾಕ್ ಕ್ರಿಕೆಟ್​ನ ಹೆಗಲೇರಿರುತ್ತದೆ. ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಎದ್ದಿರುವ ವಿವಾದಕ್ಕೆ ತೆರೆ ಬೀಳುವ ಮುನ್ನವೇ, ಪಾಕಿಸ್ತಾನ ಕ್ರಿಕೆಟ್​ನಲ್ಲಿ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ವಾಸ್ತವವಾಗಿ ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಆ ಪ್ರಕಾರ ತಂಡಕ್ಕೆ ಬೇರೆ ಬೇರೆ ನಾಯಕರು ಮತ್ತು ಕೋಚ್‌ಗಳು ಬಂದು ಹೋಗಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೊಮ್ಮೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಹಲವು ತಿಂಗಳುಗಳ ನಂತರ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯನ್ನು ಪಾಕಿಸ್ತಾನ ಗೆಲ್ಲುವಂತೆ ಮಾಡಿದ ಕೋಚ್ ಜೇಸನ್ ಗಿಲ್ಲೆಸ್ಪಿ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಲು ಪಾಕ್ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ.

6 ತಿಂಗಳೊಳಗೆ ಗಿಲ್ಲೆಸ್ಪಿ ಅಧಿಕಾರವದಿ ಅಂತ್ಯ

ವರದಿಯೊಂದರ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೇವಲ 6 ತಿಂಗಳೊಳಗೆ ಗಿಲ್ಲೆಸ್ಪಿ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಕಳೆದ ತಿಂಗಳು, ಗ್ಯಾರಿ ಕರ್ಸ್ಟನ್ ಕೂಡ ಪಾಕಿಸ್ತಾನಿ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ESPN-Cricinfo ವರದಿಯ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ಎಲ್ಲಾ ಮೂರು ಸ್ವರೂಪಗಳ ಮುಖ್ಯ ಕೋಚ್‌ ಆಗಿರುವ ಗಿಲ್ಲೆಸ್ಪಿಯನ್ನು ಈ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ. ಗಿಲ್ಲೆಸ್ಪಿ ಪ್ರಸ್ತುತ ಪಾಕಿಸ್ತಾನಿ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರ ನೇತೃತ್ವದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾವನ್ನು ಏಕದಿನ ಸರಣಿಯಲ್ಲಿ ಮಣಿಸಿತ್ತು. ಆದರೆ ಟಿ20 ಸರಣಿ ಗೆಲ್ಲುವಲ್ಲಿ ವಿಫಲವಾಗಿದೆ. ಇದೀಗ ನವೆಂಬರ್ 18 ರಂದು ಸೋಮವಾರ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ಮೂರನೇ ಟಿ20 ಪಂದ್ಯ ನಡೆಯಲಿದ್ದು, ಇದು ಗಿಲ್ಲೆಸ್ಪಿ ತರಬೇತುದಾರರಾಗಿ ಕೊನೆಯ ಪಂದ್ಯ ಎಂದು ಹೇಳಲಾಗುತ್ತಿದೆ.

ಪಿಸಿಬಿ ಈ ವರ್ಷದ ಮೇ ತಿಂಗಳಿನಲ್ಲಿಯೇ ಕರ್ಸ್ಟನ್ ಮತ್ತು ಗಿಲ್ಲೆಸ್ಪಿ ಅವರನ್ನು ತಂಡದ ಮುಖ್ಯ ಕೋಚ್‌ಗಳಾಗಿ ನೇಮಿಸಿತ್ತು. ಕರ್ಸ್ಟನ್ ಅವರನ್ನು ಏಕದಿನ ಮತ್ತು ಟಿ20 ಮಾದರಿಗೆ ತರಬೇತುದಾರರಾಗಿ ನೇಮಿಸಿದರೆ, ಗಿಲ್ಲೆಸ್ಪಿ ಅವರನ್ನು ಟೆಸ್ಟ್ ಸ್ವರೂಪಕ್ಕೆ ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಆದರೆ ಕರ್ಸ್ಟನ್ ಕಳೆದ ತಿಂಗಳಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಪಿಸಿಬಿ, ಸ್ವಲ್ಪ ಸಮಯದವರೆಗೆ ಗಿಲ್ಲೆಸ್ಪಿಯನ್ನು ಮೂರು ಮಾದರಿಗೂ ಕೋಚ್ ಆಗಿ ನೇಮಿಸಿತ್ತು.

ವೇತನದಲ್ಲಿ ತಾರತಮ್ಯ

ಗಿಲ್ಲೆಸ್ಪಿ ಅವರ ಮಾರ್ಗದರ್ಶನದಲ್ಲಿ ಪಾಕ್ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಹೀಗಾಗಿ ಪಿಸಿಬಿ, ಚಾಂಪಿಯನ್ಸ್ ಟ್ರೋಫಿಯವರೆಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಗಿಲ್ಲೆಸ್ಪಿ ಅವರನ್ನು ತಂಡದ ಮುಖ್ಯ ತರಬೇತುದಾರರಾಗಿ ಮುಂದುವರೆಸಲು ಬಯಸಿದೆ. ಆದರೆ ಅವರ ವೇತನ ಒಪ್ಪಂದದಲ್ಲಿ ಮಾತ್ರ ಯಾವುದೇ ಬದಲಾವಣೆಗಳನ್ನು ಮಾಡಲು ಪಿಸಿಬಿ ಸಿದ್ದವಿಲ್ಲ ಎಂದು ಕ್ರಿಕ್ಇನ್ಫೋ ವರದಿ ಹೇಳುತ್ತಿದೆ. ಅಂದರೆ ಗಿಲ್ಲೆಸ್ಪಿ ಅವರನ್ನು ಎಲ್ಲಾ ಮೂರು ಸ್ವರೂಪಗಳಿಗೆ ತರಬೇತುದಾರರಾಗಿ ಆಯ್ಕೆ ಮಾಡಿದರೂ ಅವರಿಗೆ ಕೇವಲ ಟೆಸ್ಟ್ ತರಬೇತುದಾರರಾಗಿ ನೀಡುತ್ತಿದ್ದ ವೇತನವನ್ನು ನೀಡಲು ಪಿಸಿಬಿ ಮುಂದಾಗಿದೆ. ಆದರೆ ಪಿಸಿಬಿಯ ಈ ಪ್ರಸ್ತಾಪವನ್ನು ಗಿಲ್ಲೆಸ್ಪಿ ತಿರಸ್ಕರಿಸಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡಿರುವ ಪಿಸಿಬಿ, ಗಿಲ್ಲೆಸ್ಪಿ ಅವರನ್ನು ಎಲ್ಲಾ ಮೂರು ಸ್ವರೂಪಗಳ ಕೋಚಿಂಗ್‌ ಹುದ್ದೆಯಿಂದ ತೆಗೆದುಹಾಕಲು ನಿರ್ಧರಿಸಿದೆ.

ಆದಾಗ್ಯೂ, ಪಿಸಿಬಿ ತನ್ನ ಈ ನಡೆಯನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದು, ಗಿಲ್ಲೆಸ್ಪಿ ಅವರ ಮೇಲೆ ಆರೋಪವನ್ನು ಹೊರಿಸಲಾರಂಭಿಸಿದೆ. ಪಾಕ್ ಮಂಡಳಿಯ ಆರೋಪದ ಪ್ರಕಾರ, ಒಪ್ಪಂದದಲ್ಲಿ ನಿಗದಿಪಡಿಸಿದಂತೆ ಗಿಲ್ಲೆಸ್ಪಿ ತಂಡದೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಿಲ್ಲವಂತೆ. ಆದರೆ ಗಿಲ್ಲೆಸ್ಪಿ ಪಾಕಿಸ್ತಾನದ ಈ ಆರೋಪವನ್ನು ತಿರಸ್ಕರಿಸಿದ್ದು, ನಾನು ಒಪ್ಪಂದದ ನಿಯಮಗಳಿಗೆ ಬದ್ಧನಾಗಿದ್ದು, ಆಟಗಾರರು ಮತ್ತು ಜೂನಿಯರ್ ತಂಡದೊಂದಿಗೆ ಹೆಚ್ಚುವರಿ ಸಮಯವನ್ನು ಕಳೆಯುತ್ತಿದ್ದೇನೆ. ಅಲ್ಲದೆ ಇನ್ನು ಹೆಚ್ಚುವರಿಯಾಗಿಯೂ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಆಕಿಬ್ ಜಾವೇದ್​ಗೆ ಕೋಚ್ ಹುದ್ದೆ

ವರದಿಯ ಪ್ರಕಾರ, ಜೇಸನ್ ಗಿಲ್ಲೆಸ್ಪಿ ಬದಲಿಗೆ ಮಾಜಿ ವೇಗದ ಬೌಲರ್ ಆಕಿಬ್ ಜಾವೇದ್ ಅವರನ್ನು ಎಲ್ಲಾ ಸ್ವರೂಪಗಳ ತರಬೇತುದಾರರನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಆಕಿಬ್ ಜಾವೇದ್ ಅವರನ್ನು ಕೆಲವು ವಾರಗಳ ಹಿಂದೆ ಪಾಕಿಸ್ತಾನದ ಆಯ್ಕೆ ಸಮಿತಿಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅವರ ಆಗಮನದ ನಂತರ, ಪಾಕಿಸ್ತಾನಿ ತಂಡವು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ಮೂಲಕ ಪಂದ್ಯವನ್ನು ಗೆದ್ದಿತ್ತು. ಆ ಬಳಿಕ ಈ ಗೆಲುವಿನ ಶ್ರೇಯವನ್ನು ಜಾವೇದ್ ಅವರಿಗೆ ನೀಡಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Sun, 17 November 24