1000 ಕೋಟಿ ಖರ್ಚು..! ಒಂದೇ ಮಳೆಗೆ ಸೋರುತ್ತಿದೆ ಗಡಾಫಿ ಸ್ಟೇಡಿಯಂ ಮೇಲ್ಛಾವಣಿ; ವಿಡಿಯೋ ನೋಡಿ

Champions Trophy 2025: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಲಾಹೋರ್‌ನ ಗಡಾಫಿ ಕ್ರೀಡಾಂಗಣದ ನವೀಕರಣಕ್ಕಾಗಿ 1000 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ, ಇತ್ತೀಚಿನ ಮಳೆಯಲ್ಲಿ ಕ್ರೀಡಾಂಗಣದ ಛಾವಣಿ ಸೋರುತ್ತಿದ್ದು, ಪಿಸಿಬಿಯ ಕಳಪೆ ಕಾಮಗಾರಿ ಬಹಿರಂಗವಾಗಿದೆ. ಈ ಸೋರಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ತಂಡ ಟೂರ್ನಮೆಂಟ್‌ನಿಂದ ಹೊರಬಿದ್ದಿದ್ದರಿಂದ, ಗಡಾಫಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಪಿಸಿಬಿಯ ಈ ದುಂದು ವೆಚ್ಚ ತೀವ್ರ ಟೀಕೆಗೆ ಒಳಗಾಗಿದೆ.

1000 ಕೋಟಿ ಖರ್ಚು..! ಒಂದೇ ಮಳೆಗೆ ಸೋರುತ್ತಿದೆ ಗಡಾಫಿ ಸ್ಟೇಡಿಯಂ ಮೇಲ್ಛಾವಣಿ; ವಿಡಿಯೋ ನೋಡಿ
Gaddafi Stadium

Updated on: Mar 02, 2025 | 8:49 PM

ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಸುಮಾರು 29 ವರ್ಷಗಳ ನಂತರ ಐಸಿಸಿ ಟೂರ್ನಮೆಂಟ್ ಅನ್ನು ಆಯೋಜಿಸುವ ಅವಕಾಶ ಪಾಕಿಸ್ತಾನಕ್ಕೆ ಸಿಕ್ಕಿತು. ಆದರೆ ಪಾಕ್ ತಂಡ ಗುಂಪು ಹಂತದಲ್ಲೇ ಟೂರ್ನಿಯಿಂದ ಹೊರಬಿತ್ತು. ಈ ಪಂದ್ಯಾವಳಿ ಆರಂಭವಾಗುವ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಕ್ರೀಡಾಂಗಣಗಳ ನವೀಕರಣಕ್ಕಾಗಿ ಸಾಕಷ್ಟು ಖರ್ಚು ಮಾಡಿತ್ತು. ಇದರಲ್ಲಿ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ, ಲಾಹೋರ್‌ನ ಗಡಾಫಿ ಕ್ರೀಡಾಂಗಣ ಮತ್ತು ರಾವಲ್ಪಿಂಡಿಯ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ ಸೇರಿವೆ. ಅದರಲ್ಲೂ ಲಾಹೋರ್‌ನ ಗಡಾಫಿ ಕ್ರೀಡಾಂಗಣವನ್ನು ನವೀಕರಣಗೊಳಿಸಲು ಪಿಸಿಬಿ 1000 ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಿತ್ತು. ಆದರೆ ಒಂದೇ ಮಳೆಗೆ ಈ ಕ್ರೀಡಾಂಗಣದ ಮೇಲ್ಛಾವಣಿ ಸೋರುತ್ತಿದೆ. ಅದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪಿಸಿಬಿ ಕಳಪೆ ಕಾಮಗಾರಿ ಮಾಡಿದೆ ಎಂದು ದೂರಲಾಗುತ್ತಿದೆ.

1000 ಕೋಟಿ ರೂಪಾಯಿ ವ್ಯರ್ಥ

ಮೇಲೆ ಹೇಳಿದಂತೆ ಲಾಹೋರ್‌ನಲ್ಲಿರುವ ಗಡಾಫಿ ಕ್ರೀಡಾಂಗಣವನ್ನು ನವೀಕರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸುಮಾರು 1000 ಪಾಕಿಸ್ತಾನಿ ರೂಪಾಯಿಗಳನ್ನು ಖರ್ಚು ಮಾಡಿತು. ಚಾಂಪಿಯನ್ಸ್ ಟ್ರೋಫಿಗಾಗಿ ಈ ಕ್ರೀಡಾಂಗಣವನ್ನು ಸಿದ್ಧಪಡಿಸಲು 1000 ಕಾರ್ಮಿಕರು 117 ದಿನಗಳ ಕಾಲ ಕೆಲಸ ಮಾಡಿದರು. ಆದರೆ ಇತ್ತೀಚೆಗೆ ಲಾಹೋರ್‌ನಲ್ಲಿ ಬಿದ್ದ ಮಳೆ ಪಿಸಿಬಿಯ ಕಳಪೆ ಕಾಮಗಾರಿಯನ್ನು ಜಗಜ್ಜಾಹೀರುಗೊಳಿಸಿದೆ. ಗಡಾಫಿ ಕ್ರೀಡಾಂಗಣದ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅರ್ಧ ಗಂಟೆಗೂ ಕಡಿಮೆ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ಗಡಾಫಿ ಕ್ರೀಡಾಂಗಣದ ವಿಐಪಿ ಕಾಂಪೌಂಡ್‌ನ ಶೌಚಾಲಯದ ಛಾವಣಿಯಿಂದ ನೀರು ತೊಟ್ಟಿಕ್ಕುತ್ತಿರುವುದನ್ನು ಕಾಣಬಹುದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಛಾವಣಿಯಿಂದ ನೀರು ತೊಟ್ಟಿಕ್ಕುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ಈ ವಿಡಿಯೋ ವೈರಲ್ ಆದ ತಕ್ಷಣ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನದೇ ದೇಶವಾಸಿಯರ ಕಟು ಟೀಕೆಗೆ ಗುರಿಯಾಗಿದೆ. ವಾಸ್ತವವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಗಡಾಫಿ ಕ್ರೀಡಾಂಗಣದ ನವೀಕರಣಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದರೂ, ಈ ಪಂದ್ಯಾವಳಿಯಲ್ಲಿ ಪಾಕ್ ತಂಡವು ಈ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನ ತಂಡವು ತನ್ನ ಮೊದಲ ಪಂದ್ಯವನ್ನು ಕರಾಚಿಯಲ್ಲಿ ಮತ್ತು ಎರಡನೇ ಪಂದ್ಯವನ್ನು ದುಬೈನಲ್ಲಿ ಆಡಿತು. ಇದಾದ ನಂತರ ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯಿಂದ ರದ್ದಾಗಿತ್ತು. ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಿದ್ದರೆ, ಗಡಾಫಿ ಕ್ರೀಡಾಂಗಣದಲ್ಲಿ ಆಡುವ ಅವಕಾಶ ಸಿಗುತ್ತಿತ್ತು, ಆದರೆ ಅದು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ