ಜೆರ್ಸಿ ಲಾಂಚ್ ಕಾರ್ಯಕ್ರಮ ರದ್ದು; ಹೊಸ ನಾಟಕ ಶುರು ಮಾಡಿದ ಪಾಕಿಸ್ತಾನ

Pakistan Cricket's T20 World Cup Saga: 2026ರ ಟಿ20 ವಿಶ್ವಕಪ್‌ಗೆ ಪಾಕಿಸ್ತಾನದ ಭಾಗವಹಿಸುವಿಕೆ ವಿವಾದದ ಸುಳಿಯಲ್ಲಿದೆ. ಬಾಂಗ್ಲಾದೇಶವನ್ನು ಹೊರಹಾಕಿದ್ದಕ್ಕೆ ಪಾಕ್ ಕ್ರಿಕೆಟ್ ಮಂಡಳಿ (PCB) ಪ್ರತಿಭಟಿಸುತ್ತಿದೆ. ಜರ್ಸಿ ಬಿಡುಗಡೆ ಕಾರ್ಯಕ್ರಮ ರದ್ದು, ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ಬೆದರಿಕೆಗಳು ಪರಿಸ್ಥಿತಿಯನ್ನು ಗಂಭೀರಗೊಳಿಸಿವೆ. ಸರ್ಕಾರಿ ಅನುಮತಿಗಾಗಿ ಕಾಯುತ್ತಿರುವ ಪಾಕಿಸ್ತಾನಕ್ಕೆ ಐಸಿಸಿ ದಂಡ ಹಾಗೂ ನಿಷೇಧದ ಭೀತಿ ಎದುರಾಗಿದೆ.

ಜೆರ್ಸಿ ಲಾಂಚ್ ಕಾರ್ಯಕ್ರಮ ರದ್ದು; ಹೊಸ ನಾಟಕ ಶುರು ಮಾಡಿದ ಪಾಕಿಸ್ತಾನ
Pak Team

Updated on: Jan 31, 2026 | 4:52 PM

2026 ರ ಟಿ20 ವಿಶ್ವಕಪ್ (T20 World Cup 2026) ಆರಂಭವಾಗಲು ಕೇವಲ ಒಂದು ವಾರ ಬಾಕಿ ಉಳಿದಿದೆ. ಆದರೆ ಹುಟ್ಟಿಕೊಂಡಿರುವ ವಿವಾದಗಳಿಗೆ ತೆರೆ ಬಿದ್ದಿಲ್ಲ. ಬಾಂಗ್ಲಾದೇಶ ತಂಡವನ್ನು ವಿಶ್ವಕಪ್​ನಿಂದ ಹೊರಹಾಕಿರುವುದಕ್ಕೆ ಕೆರಳಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ದಿನಕ್ಕೊಂದು ನಾಟಕ ಶುರು ಮಾಡಿದೆ. ಈ ಮೊದಲು ಟಿ20 ವಿಶ್ವಕಪ್​ಗೆ ತಂಡವನ್ನು ಕಳುಹಿಸುವುದು ಇನ್ನು ನಿರ್ಧಾರವಾಗಿಲ್ಲ ಎಂದಿದ್ದ ಪಾಕ್ ಮಂಡಳಿ, ಆ ಬಳಿಕ ಈ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿತ್ತು. ತಂಡವನ್ನು ಪ್ರಕಟಿಸಿದ ಬಳಿಕ ಪಾಕ್ ತಂಡ ಟಿ20 ವಿಶ್ವಕಪ್​ನಲ್ಲಿ ಆಡುವುದು ಖಚಿತ ಎಂದಾಗಿತ್ತು. ಆದರೀಗ ಹೊಸ ವರಸೆ ಶುರು ಮಾಡಿರುವ ಪಾಕ್ ಮಂಡಳಿ, ಶನಿವಾರ ನಡೆಯಬೇಕಿದ್ದ ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದೆ.

ಜೆರ್ಸಿ ಅನಾವರಣ ಕಾರ್ಯಕ್ರಮ ರದ್ದು

ವಾಸ್ತವವಾಗಿ ಟಿ20 ವಿಶ್ವಕಪ್​ಗೂ ಮುನ್ನ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಈ ಸರಣಿಯ ಎರಡನೇ ಟಿ20 ಪಂದ್ಯದ ಟಾಸ್ ನಂತರ ಜೆರ್ಸಿಯನ್ನು ಅನಾವರಣಗೊಳಿಸಬೇಕಿತ್ತು. ಆದಾಗ್ಯೂ, ಸರ್ಕಾರದ ವಿದೇಶಾಂಗ ಸಚಿವಾಲಯದ ಅನುಮತಿ ಸಿಕ್ಕಿಲ್ಲದ ಕಾರಣ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಈ ಬೆಳವಣಿಗೆಯೊಂದಿಗೆ, ಪಾಕಿಸ್ತಾನ ನಿಜವಾಗಿಯೂ ವಿಶ್ವಕಪ್ ಆಡುತ್ತದೆಯೇ ಅಥವಾ ಇಲ್ಲವೇ ಎಂಬ ಸಸ್ಪೆನ್ಸ್ ಉತ್ತುಂಗಕ್ಕೇರಿದೆ.

ಐಸಿಸಿಯಿಂದ ಭಾರಿ ದಂಡ

ಭಾರತ ಮತ್ತು ಶ್ರೀಲಂಕಾ 2026 ರ ಟಿ20 ವಿಶ್ವಕಪ್ ಅನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದ್ದರೂ, ಪಾಕಿಸ್ತಾನವು ಪ್ರತಿ ಹಂತದಲ್ಲೂ ಹೊಸ ಹೊಸ ಕ್ಯಾತೆ ತೆಗೆಯುತ್ತಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗಾಗಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಐಸಿಸಿ ಟೂರ್ನಮೆಂಟ್‌ನಿಂದ ಬಾಂಗ್ಲಾದೇಶವನ್ನು ತೆಗೆದುಹಾಕಿ ಸ್ಕಾಟ್ಲೆಂಡ್ ಅನ್ನು ಸೇರಿಸಿದ್ದನ್ನು ಪಾಕಿಸ್ತಾನ ತೀವ್ರವಾಗಿ ಪ್ರತಿಭಟಿಸುತ್ತಿದೆ. ಪಾಕಿಸ್ತಾನ ಸರ್ಕಾರ ಆರಂಭದಲ್ಲಿ ಬಾಂಗ್ಲಾದೇಶವನ್ನು ಬೆಂಬಲಿಸುವ ಸಲುವಾಗಿ ಪಂದ್ಯಾವಳಿಯನ್ನು ಬಹಿಷ್ಕರಿಸಲು ಯೋಚಿಸಿದ್ದರೂ, ಐಸಿಸಿಯಿಂದ ಭಾರಿ ದಂಡ ಮತ್ತು ನಿರ್ಬಂಧಗಳ ಭಯದಿಂದಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ತೋರುತ್ತದೆ. ಆದಾಗ್ಯೂ, ಜೆರ್ಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದಿರುವ ಹಿಂದೆ ಕೆಲವು ಬಲವಾದ ರಾಜಕೀಯ ತಂತ್ರವಿದೆ ಎಂಬ ಮಾತು ಕೇಳಿಬರುತ್ತಿದೆ.

ಐಸಿಸಿ ಆದಾಯಕ್ಕೆ ಹೊಡೆತ

ಇತ್ತೀಚಿನ ಮಾಹಿತಿಯ ಪ್ರಕಾರ, ಪಾಕಿಸ್ತಾನ ತಂಡವು ಫೆಬ್ರವರಿ 2 (ಸೋಮವಾರ) ರಂದು ಕೊಲಂಬೊಗೆ ಪ್ರಯಾಣಿಸಲು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದೆ. ಅದೇ ದಿನ ಪಾಕಿಸ್ತಾನ ಸರ್ಕಾರ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ. ಸರ್ಕಾರ ಹಸಿರು ನಿಶಾನೆ ತೋರಿಸಿದರೆ, ತಂಡವು ನೇರವಾಗಿ ಶ್ರೀಲಂಕಾವನ್ನು ತಲುಪುತ್ತದೆ. ಹೈಬ್ರಿಡ್ ಮಾದರಿಯ ಪ್ರಕಾರ, ಪಾಕಿಸ್ತಾನವು ತನ್ನ ಗುಂಪು ಪಂದ್ಯಗಳನ್ನು ಶ್ರೀಲಂಕಾದಲ್ಲಿಯೇ ಆಡಲಿದೆ. ಆದರೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಪಾಕ್ ತಂಡ ಈ ಪಂದ್ಯವನ್ನು ಬಹಿಷ್ಕರಿಸುವ ಮಾತುಗಳನ್ನಾಡುತ್ತಿದೆ. ಒಂದು ವೇಳೆ ಪಾಕ್ ತಂಡ ಈ ನಿರ್ಧಾರ ತೆಗೆದುಕೊಂಡರೆ ಅದು ಐಸಿಸಿ ಆದಾಯಕ್ಕೆ ಹೊಡೆತ ನೀಡಲಿದೆ.

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ

ನಾನು ರೆಡಿ ಎಂದ ಉಗಾಂಡ

ಮತ್ತೊಂದೆಡೆ ಉಗಾಂಡಾದಂತಹ ಸಣ್ಣ ದೇಶದ ಕ್ರಿಕೆಟ್ ಮಂಡಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ನಿಲುವನ್ನು ಗೇಲಿ ಮಾಡುತ್ತಿವೆ. “ನೀವು ಬರದಿದ್ದರೆ, ನಾವು ಬರಲು ಸಿದ್ಧರಿದ್ದೇವೆ, ನಮ್ಮ ಪಾಸ್‌ಪೋರ್ಟ್‌ಗಳು ಸಿದ್ಧವಾಗಿವೆ” ಎಂದು ಉಗಾಂಡಾ ಕ್ರಿಕೆಟ್ ಪೋಸ್ಟ್ ಮಾಡಿರುವ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಐಸಿಸಿ ನಿಯಮಗಳ ಪ್ರಕಾರ, ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರೆ, ಅದರ ಮೇಲೆ ಶಾಶ್ವತ ನಿಷೇಧ ಹೇರುವ ಸಾಧ್ಯತೆಯಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ವಾರ್ಷಿಕ $34.5 ಮಿಲಿಯನ್ ಆದಾಯಕ್ಕೆ ಕತ್ತರಿ ಬೀಳಲಿದೆ.

Published On - 4:50 pm, Sat, 31 January 26