
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿವೆ. ಫೆಬ್ರವರಿ 19 ರಿಂದ ಪಂದ್ಯಾವಳಿ ಆರಂಭವಾದರೂ ಪ್ರೇಕ್ಷಕರು ಕಾದುಕುಳಿತಿರುವ ಪಂದ್ಯ ಫೆಬ್ರವರಿ 23 ರಂದು ನಡೆಯಲಿದೆ. ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಟೂರ್ನಿಯ ಹೈವೋಲ್ಟೇಜ್ ಕದನ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ಇದಕ್ಕಾಗಿ ಎರಡೂ ತಂಡಗಳು ಸಿದ್ಧತೆ ನಡೆಸುತ್ತಿದ್ದು ಆತಿಥೇಯ ಪಾಕಿಸ್ತಾನ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಇತ್ತ ಟೀಂ ಇಂಡಿಯಾ ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಈ ನಡುವೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಈ ಐಸಿಸಿ ಟೂರ್ನಿಯ ಬಗ್ಗೆ ಮಾತನಾಡಿದ್ದು, ನಮಗೆ ಪಂದ್ಯಾವಳಿಯನ್ನು ಗೆಲ್ಲುವುದಕ್ಕಿಂತ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಪಂದ್ಯವನ್ನು ಗೆಲ್ಲುವುದೇ ನಿಜವಾದ ಸವಾಲು ಎಂದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗಾಗಿ ಹೊಸದಾಗಿ ನವೀಕರಿಸಲಾದ ಗಡಾಫಿ ಕ್ರೀಡಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಶಹಬಾಜ್, ‘ನಮ್ಮ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಮಾತ್ರವಲ್ಲದೆ ಫೆಬ್ರವರಿ 23 ರಂದು ದುಬೈನಲ್ಲಿ ಭಾರತವನ್ನು ಸೋಲಿಸುವುದು ಸಹ ನಿಜವಾದ ಸವಾಲು. ತಮ್ಮ ಆಟಗಾರರು ಭಾರತದ ವಿರುದ್ಧ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಬೇಕು. ನಮ್ಮ ತಂಡವು ತುಂಬಾ ಬಲಿಷ್ಠವಾಗಿದ್ದು, ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ.
ಆದರೆ ಈಗ ಅವರ ಮುಂದಿರುವ ನಿಜವಾದ ಸವಾಲು ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವುದು ಮಾತ್ರವಲ್ಲದೆ ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ನಮ್ಮ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಸೋಲಿಸುವುದು. ಪಾಕಿಸ್ತಾನ ತಂಡಕ್ಕೆ ಇಡೀ ದೇಶದ ಬೆಂಬಲವಿದೆ. ಸುಮಾರು 29 ವರ್ಷಗಳ ನಂತರ ನಾವು ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದರಿಂದ ಇದು ಪಾಕಿಸ್ತಾನಕ್ಕೆ ಒಂದು ದೊಡ್ಡ ಸಂದರ್ಭವಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ನಮ್ಮ ತಂಡ ದೇಶಕ್ಕೆ ಹೆಮ್ಮೆ ತರುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ ಎಂದು ಪ್ರಧಾನಿ ಷರೀಫ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡೂ ತಂಡಗಳು ಐದು ಬಾರಿ ಮುಖಾಮುಖಿಯಾಗಿದ್ದು, ಪಾಕಿಸ್ತಾನ ಮೂರು ಬಾರಿ ಗೆದ್ದಿದ್ದರೆ, ಭಾರತ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ. 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಎರಡು ಪಂದ್ಯಗಳನ್ನು ಆಡಿದ್ದವು. ಆ ಸಮಯದಲ್ಲಿ, ಟೀಂ ಇಂಡಿಯಾ ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ತಂಡವು ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು.
ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಆಝಂ, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಆಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Sat, 8 February 25