PAK vs SA: ಆಫ್ರಿಕಾ ವಿರುದ್ಧ ಟಿ20 ಸರಣಿ ಜೊತೆಗೆ ಏಕದಿನ ಸರಣಿಯನ್ನು ಗೆದ್ದ ಪಾಕಿಸ್ತಾನ

Pakistan vs South Africa ODI: ಸತತ ಸೋಲುಗಳ ಬಳಿಕ ಪಾಕಿಸ್ತಾನ ತವರಿನಲ್ಲಿ ಜಯಭೇರಿ ಬಾರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರ 4 ವಿಕೆಟ್ ಸಾಧನೆ ಹಾಗೂ ಸೈಮ್ ಅಯೂಬ್ ಅವರ ಅರ್ಧಶತಕ ಪಾಕಿಸ್ತಾನದ ಗೆಲುವಿಗೆ ಕಾರಣವಾಯಿತು. ಶಹೀನ್ ಶಾ ಅಫ್ರಿದಿ ನಾಯಕನಾಗಿ ತಮ್ಮ ಮೊದಲ ಸರಣಿ ಗೆದ್ದು ಸಂಭ್ರಮಿಸಿದ್ದಾರೆ.

PAK vs SA: ಆಫ್ರಿಕಾ ವಿರುದ್ಧ ಟಿ20 ಸರಣಿ ಜೊತೆಗೆ ಏಕದಿನ ಸರಣಿಯನ್ನು ಗೆದ್ದ ಪಾಕಿಸ್ತಾನ
Pak Vs Sa

Updated on: Nov 08, 2025 | 10:56 PM

ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಇದೀಗ ತನ್ನ ತವರಿನಲ್ಲಿ ಜಯದ ಬೆನ್ನೇರಿದೆ. ಮೊದಲಿಗೆ ದಕ್ಷಿಣ ಆಫ್ರಿಕಾ (Pakistan vs South Africa) ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಂಡಿದ್ದ ಪಾಕಿಸ್ತಾನ, ಇದೀಗ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವು, ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಏಕಪಕ್ಷೀಯ ರೀತಿಯಲ್ಲಿ ಸೋಲಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಫೈಸಲಾಬಾದ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕೇವಲ 143 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಕಾರಣ ಸ್ಪಿನ್ನರ್ ಅಬ್ರಾರ್ ಅಹ್ಮದ್ (Abrar Ahmed), ಮಧ್ಯಮ ಓವರ್‌ಗಳಲ್ಲಿ ತಮ್ಮ ಸ್ಪಿನ್‌ ಮೋಡಿಯ ಮೂಲಕ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಅನ್ನು ನಾಶಪಡಿಸಿದರು. ಇದರ ನಂತರ, ಸೈಮ್ ಅಯೂಬ್ ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ಸುಲಭ ಗೆಲುವು ಸಾಧಿಸಿತು.

ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದಾಗಿ ದಕ್ಷಿಣ ಆಫ್ರಿಕಾವು ನಾಯಕ ತೆಂಬಾ ಬವುಮಾ ಸೇರಿದಂತೆ ಹಲವಾರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿತು. ಇದರ ಹೊರತಾಗಿಯೂ, ಪಾಕಿಸ್ತಾನ ಸರಣಿಯನ್ನು ಗೆಲ್ಲಲು ಹೆಣಗಾಡಿತು. ಆತಿಥೇಯರು ಮೊದಲ ಪಂದ್ಯವನ್ನು ಗೆದ್ದುಕೊಂಡರೆ, ಆ ಬಳಿಕ ದಕ್ಷಿಣ ಆಫ್ರಿಕಾ ಎರಡನೇ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆದಾಗ್ಯೂ, ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾವನ್ನು ಏಕಪಕ್ಷೀಯವಾಗಿ ಸೋಲಿಸಿತು. ಇದರೊಂದಿಗೆ, ಶಹೀನ್ ಶಾ ಅಫ್ರಿದಿ ಏಕದಿನ ನಾಯಕನಾಗಿ ತಮ್ಮ ಮೊದಲ ಸರಣಿಯನ್ನು ಗೆದ್ದ ಸಾಧನೆ ಮಾಡಿದರು.

ಅಬ್ರಾರ್ ಬಲೆಗೆ ಸಿಲುಕಿದ ಆಫ್ರಿಕಾ

ಹಿಂದಿನ ಪಂದ್ಯದಲ್ಲಿ ಸ್ಫೋಟಕ ಶತಕ ಗಳಿಸಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಈ ಪಂದ್ಯದಲ್ಲೂ ಅರ್ಧಶತಕ ಗಳಿಸಿ ಬಲಿಷ್ಠ ಇನ್ನಿಂಗ್ಸ್ ಆಡಿದರು. ಡಿ ಕಾಕ್ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಲುವಾನ್ ಪ್ರಿಟೋರಿಯಸ್ (39) ತಂಡಕ್ಕೆ ಉತ್ತಮ ಆರಂಭ ನೀಡಿದರು. ತಂಡವು 24.2 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 106 ರನ್ ಗಳಿಸಿತ್ತು, ಆದರೆ ಅಲ್ಲಿಂದ ಪಂದ್ಯ ತಿರುವು ಪಡೆದುಕೊಂಡಿತು. ಡಿ ಕಾಕ್ (53) ಅದೇ ಓವರ್‌ನಲ್ಲಿ ಔಟಾದರೆ ನಂತರ ಬಂದ ಲೆಗ್-ಸ್ಪಿನ್ನರ್ ಅಬ್ರಾರ್ (4/27) ಆಫ್ರಿಕನ್ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಕಳುಹಿಸುವ ಕೆಲಸ ಮಾಡಿದರು. ಅಬ್ರಾರ್ ಸತತ ಎರಡು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿ, ಶೀಘ್ರದಲ್ಲೇ ನಾಲ್ಕನೇ ವಿಕೆಟ್ ಪಡೆದರು. ಇದರ ಪರಿಣಾಮವಾಗಿ ಸ್ವಲ್ಪ ಸಮಯದೊಳಗೆ ದಕ್ಷಿಣ ಆಫ್ರಿಕಾ ಕೇವಲ 37 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 37.5 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟ್ ಆಯಿತು.

IND vs AUS: ಆಸ್ಟ್ರೇಲಿಯಾದಲ್ಲಿ ಸತತ ಐದನೇ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

ಬಾಬರ್ ಮತ್ತೆ ವಿಫಲ

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಉತ್ತಮ ಆರಂಭ ಪಡೆಯಲಿಲ್ಲ, ಎರಡನೇ ಎಸೆತದಲ್ಲೇ ಫಖರ್ ಜಮಾನ್ ವಿಕೆಟ್ ಕಳೆದುಕೊಂಡರು. ಆದಾಗ್ಯೂ, ಅಯೂಬ್ (77) ಮತ್ತು ಬಾಬರ್ ಆಝಂ ಜೊತೆಯಾಗಿ ತಂಡವನ್ನು 60 ರನ್​ಗಳ ಗಡಿ ದಾಟಿಸಿದರು. ಆದಾಗ್ಯೂ, ಬಾಬರ್ ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು, ಈ ಬಾರಿ 27 ರನ್ ಗಳಿಸಿ ರನೌಟ್ ಆದರು. ನಂತರ ಅಯೂಬ್ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದ್ದು, 24 ನೇ ಓವರ್‌ನಲ್ಲಿ ಔಟಾದರು. ಅಲ್ಲಿಂದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ (32) ಮತ್ತು ಸಲ್ಮಾನ್ ಅಘಾ (5) ಉಳಿದ ರನ್ ಗಳಿಸಿ ಕೇವಲ 25.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಂದ ಟ್ರೋಫಿಯನ್ನು ಖಚಿತಪಡಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ