
ಟಿ20 ಹಾಗೂ ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ಪಾಕಿಸ್ತಾನ ತಂಡ (Pakistan cricket team), ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು. ಅದರಲ್ಲೂ ಪಾಕ್ ತಂಡ ಏಕದಿನ ಸರಣಿ ಸೋತಿತು ಎಂಬುದಕ್ಕಿಂತ ಸರಣಿಯ ಕೊನೆಯ ಪಂದ್ಯದಲ್ಲಿ ತಂಡ ತೋರಿದ ಪ್ರದರ್ಶನ ಅದರ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಕೆರಳುವಂತೆ ಮಾಡಿದೆ. ವಾಸ್ತವವಾಗಿ ಸರಣಿಯ ಕೊನೆಯ ಪಂದ್ಯದಲ್ಲಿ ಪಾಕ್ ತಂಡ ಕೇವಲ 92 ರನ್‌ಗಳಿಗೆ ಆಲೌಟ್ ಆಗುವ ಮೂಲಕ 202 ರನ್ಗಳಿಂದ ಸೋತಿತು. ತಂಡದ ಈ ಪ್ರದರ್ಶನ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಅವರನ್ನು ಅಸಮಾಧಾನಗೊಳ್ಳುವಂತೆ ಮಾಡಿದ್ದು, ಅವರೀಗ ತಮ್ಮದೇ ತಂಡವನ್ನು ಗೇಲಿ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಎಲ್ಲೆಡೆ ರಾವಲ್ಪಿಂಡಿಯಂತಹ ಪಿಚ್ ಸಿಗುವುದಿಲ್ಲ ಎಂದು ಅಖ್ತರ್ ಲೇವಡಿ ಮಾಡಿದ್ದಾರೆ.
ಉಭಯ ತಂಡಗಳ ನಡುವೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 92 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಈ ಸೋಲಿಗೆ ಅಗ್ರಕ್ರಮಾಂಕದ ವೈಫಲ್ಯ ಪ್ರಮುಖ ಕಾರಣವಾಗಿತ್ತು. ತಂಡದ ನಾಯಕ ಮೊಹಮ್ಮದ್ ರಿಜ್ವಾನ್, ಆರಂಭಿಕರಾದ ಸ್ಯಾಮ್ ಅಯೂಬ್ ಮತ್ತು ಅಬ್ದುಲ್ಲಾ ಶಫೀಕ್ ತಮ್ಮ ಖಾತೆಯನ್ನು ತೆರೆಯಲಿಲ್ಲ. ಇವರ ಜೊತೆಗೆ ಅನುಭವಿ ಬಾಬರ್ ಆಝಂ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಪಾಕಿಸ್ತಾನದ ಈ ಕಳಪೆ ಪ್ರದರ್ಶನದ ಕುರಿತು ‘ಗೇಮ್ ಆನ್ ಹೈ’ ಕಾರ್ಯಕ್ರಮದಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್, ‘ ಈ ಹಿಂದೆ ನಮ್ಮಲ್ಲಿ ಆಕ್ರಮಣಕಾರಿ ಪ್ರತಿಭೆ ಇತ್ತು ಮತ್ತು ಅದಕ್ಕೆ ತಕ್ಕಂತೆ ಆಡಿದೆವು. ನಾವು ಯಾವುದೇ ಒಬ್ಬ ಆಟಗಾರನನ್ನು ಅವಲಂಬಿಸಿರಲಿಲ್ಲ ಮತ್ತು ಎಲ್ಲರೂ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೇವು. ಈಗ ಪರಿಸರ ಬದಲಾಗಿದೆ. ಕಳೆದ 10 ರಿಂದ 15 ವರ್ಷಗಳಲ್ಲಿ, ಎಲ್ಲರೂ ತಮಗಾಗಿ ಮಾತ್ರ ಆಡುತ್ತಿದ್ದಾರೆ. ಎಲ್ಲರೂ ತಮ್ಮ ಸರಾಸರಿಗಾಗಿ ಮಾತ್ರ ಆಡುತ್ತಿದ್ದಾರೆ. ನಿಮ್ಮ ದೇಶಕ್ಕಾಗಿ ಪಂದ್ಯವನ್ನು ಗೆಲ್ಲಿಸಬೇಕು ಎಂಬ ಚಿಂತನೆ ಇರಬೇಕು. ನಾವು ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಮತ್ತು ಎಲ್ಲರೂ ಆಧುನಿಕ ಕ್ರಿಕೆಟ್‌ನಂತೆ ಆಡಬೇಕು. ಇದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವೇ?
PAK vs WI: 202 ರನ್ಗಳಿಂದ ಸೋತ ಪಾಕಿಸ್ತಾನ; ವೆಸ್ಟ್ ಇಂಡೀಸ್ಗೆ ಏಕದಿನ ಸರಣಿ
ಕೊನೆಯ ಏಕದಿನ ಪಂದ್ಯದಲ್ಲಿ ಟಾಪ್ 4 ರಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆಯೇ ಔಟಾದರು. ತಂಡವು ಯಾವ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಚೆಂಡು ಸ್ವಲ್ಪ ತಿರುಗಿದರೆ ತೊಂದರೆ ಉಂಟಾಗುತ್ತದೆ. ಎಲ್ಲಾ ಕಡೆ ರಾವಲ್ಪಿಂಡಿಯಂತಹ ಪಿಚ್ ಅನ್ನು ಬಯಸುವುದು ಸರಿಯಲ್ಲ ಎಂದು ಅಖ್ತರ್ ಹೇಳಿದ್ದಾರೆ
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಿಲ್ಲ. ಇದಾದ ನಂತರವೂ ಅವರು ಏಕದಿನ ಸರಣಿಯಲ್ಲಿ ತಮ್ಮ ಮ್ಯಾಜಿಕ್ ತೋರಿಸಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್, ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದರೆ, ಈಗ ವೆಸ್ಟ್ ಇಂಡೀಸ್ ಕೂಡ 2-1 ಅಂತರದಿಂದ ಸೋಲಿಸಿದೆ.