AUS vs SA: ರಿಕಲ್ಟನ್ ಹೋರಾಟ ವ್ಯರ್ಥ; ಆಸೀಸ್ ವಿರುದ್ಧ ಮೊದಲ ಟಿ20 ಸೋತ ಆಫ್ರಿಕಾ
Australia vs South Africa T20: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ T20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 17 ರನ್‌ಗಳ ಗೆಲುವು ಸಾಧಿಸಿದೆ. ಟಿಮ್ ಡೇವಿಡ್ (83 ರನ್) ಮತ್ತು ಕ್ಯಾಮರೂನ್ ಗ್ರೀನ್ (35 ರನ್) ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಆಸ್ಟ್ರೇಲಿಯಾ 178 ರನ್ ಗಳಿಸಿತು. ಆಫ್ರಿಕಾ ಪರ ರಯಾನ್ ರಿಕಲ್ಟನ್ (71 ರನ್) ಏಕಾಂಗಿ ಹೋರಾಟ ನಡೆಸಿದರೂ, ತಂಡ 161 ರನ್‌ಗಳಿಗೆ ಸೀಮಿತವಾಗಿ ಸೋಲು ಕಂಡಿತು.

ಮೂರು ಪಂದ್ಯಗಳ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ದಕ್ಷಿಣ ಆಫ್ರಿಕಾಕ್ಕೆ (Australia vs South Africa) ಸರಣಿಯಲ್ಲಿ ಉತ್ತಮ ಆರಂಭ ಸಿಕ್ಕಿಲ್ಲ. ಉಭಯ ತಂಡಗಳ ನಡುವೆ ನಡೆಸ ಸರಣಿಯ ಮೊದಲ ಪಂದ್ಯದಲ್ಲಿ ಆಫ್ರಿಕಾ ತಂಡ 17 ರನ್‌ಗಳ ಸೋಲನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 178 ರನ್ ಕಲೆಹಾಕಿದೆ. ತಂಡದ ಪರ ಅಬ್ಬರಿಸಿದ ಟಿಮ್ ಡೇವಿಡ್ (Tim David) ಕೇವಲ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಹಾಯದಿಂದ ಬರೋಬ್ಬರಿ 83 ರನ್ ಬಾರಿಸಿದರು. ಇತ್ತ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಮಿಂಚಿದ 19 ವರ್ಷದ ಕ್ವೆನಾ ಎಂಫಾಕಾ (Kwena Maphaka) 4 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ ರಯಾನ್ ರಿಕಲ್ಟನ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಗ್ರೀನ್, ಡೇವಿಡ್ ಸಿಡಿಲಬ್ಬರ
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಕ್ರಮವಾಗಿ 13 ಮತ್ತು 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ಜೋಶ್ ಇಂಗ್ಲಿಸ್ ತಮ್ಮ ಖಾತೆಯನ್ನು ತೆರೆಯದೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಕ್ಯಾಮರೂನ್ ಗ್ರೀನ್ 13 ಎಸೆತಗಳಲ್ಲಿ 35 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಇದಾದ ನಂತರ ತಂಡದ ಇನ್ನಿಂಗ್ಸ್ ಜವಾಬ್ದಾರಿವಹಿಸಿಕೊಂಡ ಟಿಮ್ ಡೇವಿಡ್ 52 ಎಸೆತಗಳಲ್ಲಿ 83 ರನ್ ಗಳಿಸುವ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ 8 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ಇವರಿಬ್ಬರ ಆಟದಿಂದಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 10 ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತು.
ಆಫ್ರಿಕಾ ಬ್ಯಾಟಿಂಗ್ ವೈಫಲ್ಯ
ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಐಡೆನ್ ಮಾರ್ಕ್ರಾಮ್ 12 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಲ್ಹುವಾನ್-ಡ್ರೆ ಪ್ರಿಟೋರಿಯಸ್ ಅವರ ಆಟ ಕೂಡ 14 ರನ್‌ಗಳಿಗೆ ಅಂತ್ಯವಾಯಿತು. ಡೆವಾಲ್ಡ್ ಬ್ರೆವಿಸ್ ಕೂಡ 6 ಎಸೆತಗಳಲ್ಲಿ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾದರು.
AUS vs SA: ಸುಲಭ ಕ್ಯಾಚ್ ಕೈಚೆಲ್ಲಿದ ಸ್ಟಬ್ಸ್, ಸಿಕ್ಸರ್‌ಗಳ ಮಳೆಗರೆದ ಆರ್ಸಿಬಿ ಬ್ಯಾಟರ್; ವಿಡಿಯೋ ನೋಡಿ
ರಯಾನ್ ರಿಕಲ್ಟನ್ ಏಕಾಂಗಿ ಹೋರಾಟ
ಕೊನೆಯಲ್ಲಿ ಕೊಂಚ ಹೋರಾಟ ನೀಡಿದ ಟ್ರಿಸ್ಟಾನ್ ಸ್ಟಬ್ಸ್ 27 ಎಸೆತಗಳಲ್ಲಿ 37 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಅವರು ಕೂಡ ನಿರ್ಣಾಯಕ ಹಂತದಲ್ಲಿ ವಿಕೆಟ್ ಕೈಚೆಲ್ಲಿದರು. ಆದಾಗ್ಯೂ ಆರಂಭಿಕರಾಗಿ ಕಣಕ್ಕಿಳಿದು, ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ರಯಾನ್ ರಿಕಲ್ಟನ್ 55 ಎಸೆತಗಳಲ್ಲಿ 71 ರನ್ ಗಳಿಸಿದರು. ಆದರೆ ಕೊನೆಯ ಓವರ್ನಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. ರಿಕಲ್ಟನ್ ಅವರ ವಿಕೆಟ್ ಪತನದೊಂದಿಗೆ ಆಫ್ರಿಕಾದ ಸೋಲು ಕೂಡ ಖಚಿತವಾಯಿತು. ಅಂತಿಮವಾಗಿ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 161 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
