AUS-W vs IND-W: 3 ಪಂದ್ಯಗಳಲ್ಲೂ ಸೋತ ಟೀಂ ಇಂಡಿಯಾ; ಆಸ್ಟ್ರೇಲಿಯಾಕ್ಕೆ ಟಿ20 ಸರಣಿ
IND-A vs AUS-A Women 3rd T20I: ಆಸ್ಟ್ರೇಲಿಯಾ ಮಹಿಳಾ ಎ ತಂಡವು ಭಾರತ ಮಹಿಳಾ ಎ ತಂಡವನ್ನು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದಿಂದ ಸೋಲಿಸಿದೆ. ಮೂರು ಪಂದ್ಯಗಳಲ್ಲೂ ಆಸ್ಟ್ರೇಲಿಯಾ ಆಕರ್ಷಕ ಪ್ರದರ್ಶನ ನೀಡಿದರೆ, ಭಾರತ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದೆ. ಶೆಫಾಲಿ ವರ್ಮಾ ಮತ್ತು ರಾಧಾ ಯಾದವ್ ಅವರ ಪ್ರಯತ್ನಗಳ ಹೊರತಾಗಿಯೂ ಭಾರತ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ ಎರಡು ತಂಡಗಳ ನಡುವೆ ಏಕದಿನ ಹಾಗೂ ಟೆಸ್ಟ್ ಸರಣಿಗಳು ಆರಂಭವಾಗಲಿವೆ.

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿ ರಾಧಾ ಯಾದವ್ ನಾಯಕತ್ವದ ಭಾರತ ಮಹಿಳಾ ಎ ತಂಡ (India Women’s A Team), ಆತಿಥೇಯರ ವಿರುದ್ಧ ಆಡಿದ ಮೂರಕ್ಕೆ ಮೂರೂ ಟಿ20 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಮೂಲಕ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಒಳಗಾಗಿದೆ. ಉಭಯ ತಂಡಗಳ ನಡುವೆ ಇಂದು ನಡೆದ ಮೂರನೇ ಟಿ20 ಪಂದ್ಯವನ್ನು ಸಹ ಆಸ್ಟ್ರೇಲಿಯಾ ನಾಲ್ಕು ರನ್‌ಗಳಿಂದ ಗೆದ್ದುಕೊಂಡಿತು. ಆಸ್ಟ್ರೇಲಿಯಾದ ಎಲ್ಲಾ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸರಣಿಯಲ್ಲಿ ಭಾರತೀಯ ಮಹಿಳಾ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾ ಎ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು.
ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ
ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡವು 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 144 ರನ್ ಗಳಿಸಿತು. ತಂಡದ ಪರವಾಗಿ ಮ್ಯಾಡೆಲಿನ್ ಪೆನ್ನಾ 39 ರನ್ ಗಳಿಸಿದರೆ, ಅಲಿಸಾ ಹೀಲಿ 27 ರನ್ ಗಳಿಸಿದರು. ತಹ್ಲಿಯಾ ವಿಲ್ಸನ್ 14 ರನ್ ಗಳಿಸಿದರೆ, ಅನಿಕಾ ಲಿಯೋರ್ಡ್ 22 ರನ್ ಗಳಿಸಿದರು. ಭಾರತ ಎ ಪರ ನಾಯಕಿ ರಾಧಾ ಯಾದವ್ ನಾಲ್ಕು ಓವರ್‌ಗಳಲ್ಲಿ 31 ರನ್‌ಗಳಿಗೆ ಮೂರು ವಿಕೆಟ್ ಪಡೆದರೆ, ಪ್ರೇಮಾ ರಾವತ್ ನಾಲ್ಕು ಓವರ್‌ಗಳಲ್ಲಿ 24 ರನ್‌ಗಳಿಗೆ ಮೂರು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ, ಟೀಂ ಇಂಡಿಯಾ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ ಕೇವಲ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ, ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ 41 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಶೆಫಾಲಿ ಹೊರತುಪಡಿಸಿ ರಾಘವಿ ಬಿಶ್ಟ್ 25 ರನ್‌ಗಳ ಕೊಡುಗೆ ನೀಡಿದರೆ, ಮಿನ್ನು ಮಣಿ 30 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ, ಸಿಯೆನ್ನಾ ಜಿಂಜರ್ ನಾಲ್ಕು ಓವರ್‌ಗಳಲ್ಲಿ 16 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದರು.
IND vs NZ: ರಾಧಾ ಏಕಾಂಗಿ ಹೋರಾಟ ವ್ಯರ್ಥ; 2ನೇ ಏಕದಿನ ಪಂದ್ಯ ಗೆದ್ದ ಕಿವೀಸ್ ತಂಡ
ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಸೋಲು
ಇದಕ್ಕೂ ಮೊದಲು, ಈ ಎರಡೂ ತಂಡಗಳ ನಡುವೆ ನಡೆದ ಮೊದಲ ಅನಧಿಕೃತ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 13 ರನ್‌ಗಳಿಂದ ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 114 ರನ್‌ಗಳಿಂದ ಗೆದ್ದಿತು. ರಾಧಾ ಯಾದವ್ ನಾಯಕತ್ವದಲ್ಲಿ ತಂಡವು ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಯಾವುದೇ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ಈಗ ಈ ಎರಡೂ ತಂಡಗಳ ನಡುವಿನ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿ ಆಗಸ್ಟ್ 13 ರಿಂದ ಪ್ರಾರಂಭವಾಗುತ್ತಿದೆ. ಆ ಬಳಿಕ ಉಭಯ ತಂಡಗಳ ನಡುವೆ ಆಗಸ್ಟ್ 21 ರಿಂದ ಅನಧಿಕೃತ ಟೆಸ್ಟ್ ಪಂದ್ಯವೂ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Sun, 10 August 25
