Women’s Asia Cup 2024: ರೇಣುಕಾ, ರಾಧಾ ದಾಳಿಗೆ ತತ್ತರಿಸಿದ ಬಾಂಗ್ಲಾ- ಭಾರತಕ್ಕೆ 81 ರನ್ ಗುರಿ

Women's Asia Cup 2024: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ, ಹರ್ಮನ್ ಪಡೆಯ ಕರಾರುವಕ್ಕಾದ ದಾಳಿಗೆ ತತ್ತರಿಸಿ ನೂರು ರನ್​ಗಳನ್ನು ದಾಖಲಿಸಲು ಸಾಧ್ಯವಾಗದೆ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 80 ರನ್​​ಗಳಿಗೆ ಇನ್ನಿಂಗ್ಸ್​ ಮುಗಿಸಿದೆ. ಈ ಮೂಲಕ ಭಾರತಕ್ಕೆ 81 ರನ್​​ಗಳ ಗೆಲುವಿನ ಗುರಿ ನೀಡಿದೆ.

Women's Asia Cup 2024: ರೇಣುಕಾ, ರಾಧಾ ದಾಳಿಗೆ ತತ್ತರಿಸಿದ ಬಾಂಗ್ಲಾ- ಭಾರತಕ್ಕೆ 81 ರನ್ ಗುರಿ
ಭಾರತ- ಬಾಂಗ್ಲಾದೇಶ
Follow us
ಪೃಥ್ವಿಶಂಕರ
|

Updated on:Jul 26, 2024 | 3:47 PM

ಶ್ರೀಲಂಕಾದ ದಂಬುಲಾದ ರಂಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ ಹಾಗೂ ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ, ಹರ್ಮನ್ ಪಡೆಯ ಕರಾರುವಕ್ಕಾದ ದಾಳಿಗೆ ತತ್ತರಿಸಿ ನೂರು ರನ್​ಗಳನ್ನು ದಾಖಲಿಸಲು ಸಾಧ್ಯವಾಗದೆ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 80 ರನ್​​ಗಳಿಗೆ ಇನ್ನಿಂಗ್ಸ್​ ಮುಗಿಸಿದೆ. ಈ ಮೂಲಕ ಭಾರತಕ್ಕೆ 81 ರನ್​​ಗಳ ಗೆಲುವಿನ ಗುರಿ ನೀಡಿದೆ. ಬಾಂಗ್ಲಾ ತಂಡದ ಪರ ನಾಯಕಿ ನಿಗರ್ ಸುಲ್ತಾನಾ ಅತ್ಯಧಿಕ 32 ರನ್ ದಾಖಲಿಸಿದರೆ, ಶೋರ್ನಾ ಅಖ್ತರ್ 19 ರನ್​ಗಳ ಕಾಣಿಕೆ ನೀಡಿದರು. ಉಳಿದವರಿಂದ ಒಂದಂಕಿ ಮೊತ್ತ ದಾಟಲೂ ಸಾಧ್ಯವಾಗಲಿಲ್ಲ. ಭಾರತದ ಪರ ವೇಗಿ ರೇಣುಕಾ ಸಿಂಗ್ ಠಾಕೂರ್ ಹಾಗೂ ಸ್ಪಿನ್ನರ್ ರಾಧಾ ಯಾದವ್ ತಲಾ 3 ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ ಹಾಗೂ ದೀಪ್ತಿ ಶರ್ಮಾ ತಲಾ 1 ವಿಕೆಟ್ ಪಡೆದರು.

ರೇಣುಕಾ ಮಾರಕ ದಾಳಿ

ಭಾರತದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಲು ಆರಂಭಿಸಿದ ಬಾಂಗ್ಲಾ ತಂಡಕ್ಕೆ ಮೊದಲ ಓವರ್​ನಲ್ಲೇ ವೇಗಿ ರೇಣುಕಾ ಶಾಕ್ ನೀಡಿದರು. ಅವರು ಬಾಂಗ್ಲಾ ಓಪನರ್ ದಿಲಾರಾ ಅಖ್ತರ್ ವಿಕೆಟ್ ಉರುಳಿಸಿ ಭಾರತಕ್ಕೆ ಮೊದಲ ಯಶಸ್ಸು ನೀಡಿದರು. ತಮ್ಮ ಖೋಟಾದ ಎರಡನೇ ಓವರ್​ನಲ್ಲೂ ವಿಕೆಟ್ ಭೇಟೆ ಮುಂದುವರೆಸಿದ ರೇಣುಕಾ ಮತ್ತೊಬ್ಬ ಓಪನರ್ ಮುರ್ಷಿದಾ ಖಾತೂನ್ ಅವರನ್ನು ಪೆವಿಲಿಯನ್​ಗಟ್ಟಿದರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಇಶ್ಮಾ ತಂಜೀಮ್ ಕೂಡ 8 ರನ್‌ಗಳಿಸಿ ರೇಣುಕಾ ಸಿಂಗ್​ಗೆ ಬಲಿಯಾದರು. ಹೀಗಾಗಿ ತಂಡ ಕೇವಲ 23 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು.

ರಾಧಾ ಯಾದವ್ ಸ್ಪಿನ್ ಮ್ಯಾಜಿಕ್

ಆ ನಂತರವೂ ಬಾಂಗ್ಲಾ ತಂಡದ ಪೆವಿಲಿಯನ್ ಪರೇಡ್ ಮುಂದುವರೆದಿತ್ತು. ಮೊದಲು ರೇಣುಕಾ ಸಿಂಗ್ ದಾಳಿಗೆ ಬೆದರಿದ ಬಾಂಗ್ಲಾ, ಆ ನಂತರ ರಾಧಾ ಯಾದವ್​ರ ಸ್ಪಿನ್​ ಮೋಡಿಗೆ ಮಕಾಡೆ ಮಲಗಿತು. ರಾಧಾ ಕೂಡ ರೇಣುಕಾರಂತೆ ಪ್ರಮುಖ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಒಂದೆಡೆ ಸತತ ವಿಕೆಟ್ ಪತನದ ನಡುವೆಯೂ ಜವಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕಿ ನಿಗರ್ ಸುಲ್ತಾನಾ ಅತ್ಯಧಿಕ 32 ರನ್ ದಾಖಲಿಸಿ, ತಂಡವನ್ನು 80 ರನ್​ಗಳ ಗಡಿಗೆ ತಂದರು. ಇಲ್ಲದಿದ್ದರೆ ತಂಡ 50 ರನ್​ಗಳ ಗಡಿ ಕೂಡ ದಾಟುತ್ತಿರಲಿಲ್ಲ.

ಉಭಯ ತಂಡಗಳು

ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಛೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್ ಮತ್ತು ರೇಣುಕಾ ಠಾಕೂರ್ ಸಿಂಗ್.

ಬಾಂಗ್ಲಾದೇಶದ ತಂಡ: ದಿಲಾರಾ ಅಖ್ತರ್, ಮುರ್ಷಿದಾ ಖಾತೂನ್, ನಿಗರ್ ಸುಲ್ತಾನಾ (ಕ್ಯಾಪ್ಟನ್), ರುಮಾನಾ ಅಹ್ಮದ್, ಇಷ್ಮಾ ತಂಜಿಮ್, ರಿತು ಮೋನಿ, ರಬೇಯಾ ಖಾನ್, ಶೋರ್ನಾ ಅಖ್ತರ್, ನಹಿದಾ ಅಖ್ತರ್, ಜಹಾನಾರಾ ಆಲಂ ಮತ್ತು ಮಾರುಫಾ ಅಖ್ತರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Fri, 26 July 24