ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಇತಿಹಾಸ ನಿರ್ಮಿಸಿದೆ. ಮೊದಲ ಪಂದ್ಯವನ್ನು ಸೋತ ನಂತರ, ಅದ್ಭುತ ಪುನರಾಗಮನವನ್ನು ಮಾಡಿದ ಪಾಕಿಸ್ತಾನ, ಸತತ 2 ಪಂದ್ಯಗಳನ್ನು ಗೆದ್ದು ಸರಣಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಪಾಕಿಸ್ತಾನ 22 ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದ ಇತಿಹಾಸ ನಿರ್ಮಿಸಿದೆ. ವಾಸ್ತವವಾಗಿ ಈ ಸರಣಿಗೂ ಮುನ್ನ ಮೊಹಮ್ಮದ್ ರಿಜ್ವಾನ್ ಅವರನ್ನು ಪಾಕ್ ತಂಡದ ಸೀಮಿತ ಓವರ್ಗಳ ನಾಯಕನನ್ನಾಗಿ ಮಾಡಲಾಗಿತ್ತು. ಇದೀಗ ರಿಜ್ವಾನ್, ನಾಯಕನಾಗಿ ಮೊದಲ ಸರಣಿಯಲ್ಲೇ ದಾಖಲೆಯ ಗೆಲುವು ಸಾಧಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನು ಗೆದ್ದ ನಂತರ ಮಾತನಾಡಿದ ರಿಜ್ವಾನ್, ಪಾಕಿಸ್ತಾನ ತಂಡವನ್ನು ಅಪಾರವಾಗಿ ಹೊಗಳಿದರು.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡ ಬಳಿಕ ಮಾತನಾಡಿದ ರಿಜ್ವಾನ್, ತಮ್ಮ ಆಟಗಾರರನ್ನು ಅಪಾರವಾಗಿ ಹೊಗಳಿದರು. ಈ ಐತಿಹಾಸಿಕ ಸರಣಿ ಗೆಲುವು ನನಗೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಹೇಳಿದರು. ಇಂದು ಇಡೀ ದೇಶದಲ್ಲೇ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಇದೀಗ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ನಾನು ನೂತನ ನಾಯಕನಾಗಿದ್ದರೂ, ನಾನು ಟಾಸ್ ಮತ್ತು ಪ್ರೆಸೆಂಟೇಷನ್ಗೆ ಮಾತ್ರ ನಾಯಕ. ಉಳಿದಂತೆ ಪ್ರತಿಯೊಬ್ಬ ಆಟಗಾರನೂ ನನಗೆ ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಸಲಹೆ ನೀಡುತ್ತಾರೆ. ಈ ಗೆಲುವಿನ ಶ್ರೇಯ ಪಾಕಿಸ್ತಾನದ ಬೌಲರ್‌ಗಳಿಗೆ ಸಲ್ಲುತ್ತದೆ ಎಂದಿದ್ದಾರೆ.
ಪರ್ತ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡ ಪಾಕ್ ಬೌಲರ್‌ಗಳು ಮತ್ತೊಮ್ಮೆ ಆಸೀಸ್ ಬ್ಯಾಟಿಂಗ್ ವಿಭಾಗವನ್ನು ಛಿದ್ರಗೊಳಿಸಿದರು. ಇತ್ತ ಪಾಕ್ ವೇಗಿಗಳ ದಾಳಿಗೆ ನಲುಗಿದ ಆಸೀಸ್ ತಂಡ ಕೇವಲ 31.5 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 140 ರನ್‌ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ ಸೀನ್ ಅಬಾಡ್ ಅತ್ಯಧಿಕ 30 ರನ್ ಕಲೆಹಾಕಿದರೆ, ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬರಲಿಲ್ಲ. ಪಾಕ್ ಪರ ಬೌಲಿಂಗ್ನಲ್ಲಿ ಮಿಂಚಿದ ಶಾಹೀನ್ ಮತ್ತು ನಸೀಮ್ ತಲಾ 3 ವಿಕೆಟ್ ಪಡೆದರೆ, ಹಾರಿಸ್ ರೌಫ್ 7 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ 2 ವಿಕೆಟ್ ಪಡೆದರು.
140 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಆರಂಭಿಕರಾದ ಅಬ್ದುಲ್ಲಾ ಶಫೀಕ್ ಮತ್ತು ಸ್ಯಾಮ್ ಅಯೂಬ್ 84 ರನ್‌ಗಳ ಪ್ರಬಲ ಆರಂಭ ನೀಡಿದರು. ಆದರೆ, ಇದಾದ ಬಳಿಕ ಆರಂಭಿಕರಿಬ್ಬರೂ ಕೇವಲ 1 ರನ್ ಅಂತರದಲ್ಲಿ ಔಟಾದರು. ಶಫೀಕ್ 37 ರನ್ ಮತ್ತು ಸ್ಯಾಮ್ 42 ರನ್‌ಗಳ ಇನ್ನಿಂಗ್ಸ್ ಆಡಿದರು. ಇದಾದ ಬಳಿಕ ಬಾಬರ್ ಆಝಂ 28 ರನ್ ಹಾಗೂ ನಾಯಕ ರಿಜ್ವಾನ್ 30 ರನ್‌ಗಳ ಇನಿಂಗ್ಸ್ ಆಡಿ 26.5 ಓವರ್‌ಗಳಲ್ಲಿಯೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ