
ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿರುವ ಪಾಕಿಸ್ತಾನ ತಂಡ ಆಡಿರುವ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲುಕಂಡಿದೆ. ಆತಿಥೇಯ ಇಂಗ್ಲೆಂಡ್, ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇತ್ತ ತಂಡದ ಕಳಪೆ ಪ್ರದರ್ಶನದಿಂದ ಬೇಸತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೂರನೇ ಪಂದ್ಯಕ್ಕೂ ಮುನ್ನ ತಂಡದಲ್ಲಿ ಬರೋಬ್ಬರಿ 7 ಬದಲಾವಣೆಗಳನ್ನು ಮಾಡಿದೆ. ಇದರ ಜೊತೆಗೆ ಕೋಚ್‌ಗಳನ್ನು ಸಹ ಹುದ್ದೆಯಿಂದ ವಜಾಗೊಳಿಸಿದೆ. ಇದು ಸಾಲದೆಂಬಂತೆ ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಪಾಕ್ ಕ್ರಿಕೆಟ್ ಮಂಡಳಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಕೆಲವು ಆಟಗಾರರ ಮೇಲೆ ಮ್ಯಾಚ್ ಫಿಕ್ಸಿಂಗ್ ಅನುಮಾನ ಮೂಡಿದೆ. ಹೀಗಾಗಿ ಅವರ ಮೊಬೈಲ್ ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ವರದಿಯಾಗಿದೆ.
ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ 194 ರನ್‌ಗಳಿಂದ ಸೋತಿತು. ಇದಾದ ನಂತರ ಪಿಸಿಬಿ, ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಲಿ ಅಘಾ, ಇಮಾಮ್-ಉಲ್-ಹಕ್, ಅಲಿ ಉಸ್ಮಾನ್, ಖುರ್ರಮ್ ಶಹಜಾದ್, ಆಮಿರ್ ಜಮಾಲ್ ಮತ್ತು ಮುಹಮ್ಮದ್ ಅವೈಸ್ ಜಾಫರ್ ಅವರನ್ನು ತಂಡದಿಂದ ಹೊರಹಾಕಿದ್ದಲ್ಲದೆ ಅವರನ್ನು ತವರಿಗೆ ವಾಪಸ್ ಕರೆಸಿಕೊಂಡಿತು. ಇವರ ಜೊತೆಗೆ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ಸಹ ತಮ್ಮ ಕರ್ತವ್ಯಗಳಿಂದ ಬಿಡುಗಡೆ ಮಾಡಿತು. ತಂಡದಿಂದ ಹೊರಬಿದ್ದ ಆಟಗಾರರ ಬದಲಿಗೆ 7 ಆಟಗಾರರನ್ನು ಇಂಗ್ಲೆಂಡ್ಗೆ ಕಳುಹಿಸಿಕೊಡಲಾಗಿದೆ. ಇವರಲ್ಲಿ ಇಬ್ಬರು ಆಟಗಾರರು ಮಾತ್ರ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ್ದು, ಉಳಿದ 5 ಆಟಗಾರರು ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಹೀಗಿರುವಾಗ ಇವರುಗಳನ್ನು ಕಣಕ್ಕಿಳಿಸಿ ಪಾಕಿಸ್ತಾನ ಯಾವ ರೀತಿಯ ಪ್ರದರ್ಶನವನ್ನು ಎದುರು ನೋಡುತ್ತಿದೆ ಎಂಬುದು ಪಂದ್ಯದ ವೇಳೆ ಗೊತ್ತಾಗಲಿದೆ.
ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ, ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ತಂಡದಲ್ಲಿರುವ ಕೆಲವ ಆಟಗಾರರ ಫೋನ್‌ಗಳನ್ನು ಮ್ಯಾನೇಜ್ಮೆಂಟ್ ಮುಟ್ಟುಗೋಲು ಹಾಕಿಕೊಂಡಿದೆ. ಇಡೀ ಸರಣಿ ಮುಗಿದ ಬಳಿಕ ಅವರಿಗೆ ಫೋನ್‌ಗಳನ್ನು ವಾಪಸ್ ನೀಡುವುದಾಗಿ ತಿಳಿಸಿದೆ. ಆದಾಗ್ಯೂ ಮಂಡಳಿ ಯಾರ್ಯಾರ ಫೋನ್‌ಗಳನ್ನು ಕಸಿದುಕೊಂಡಿದೆ ಎಂಬುದು ಇದುವರೆಗೆ ಖಚಿತವಾಗಿಲ್ಲ. ಇತ್ತ ಈ ವರದಿಗಳ ಬಗ್ಗೆ ಪಿಸಿಬಿ ಕೂಡ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡದಿರುವುದು ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಐಸಿಸಿ ಮಾಸ್ಟರ್ ಪ್ಲಾನ್; ತ್ರಿಕೋನ ಸರಣಿಯಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ..!
ವಾಸ್ತವವಾಗಿ ನಿಯಮಗಳ ಪ್ರಕಾರ, ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಮೈದಾನದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯ ಮೇಲೆ ಐಸಿಸಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದೆ. ಪಂದ್ಯಗಳ ಸಮಯದಲ್ಲಿ ಮಾಹಿತಿ ವಿನಿಮಯವನ್ನು ತಡೆಗಟ್ಟುವುದು ಮತ್ತು ಫಿಕ್ಸಿಂಗ್ ಸಾಧ್ಯತೆಯನ್ನು ತಡೆಗಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ ಆಟಗಾರರು ಅಭ್ಯಾಸದ ಸಮಯದಲ್ಲಿ ಮತ್ತು ಪಂದ್ಯಗಳಿಲ್ಲದ ಸಮಯದಲ್ಲಿ ಮೊಬೈಲ್ಗಳನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಪಾಕಿಸ್ತಾನದ ವಿಚಾರದಲ್ಲಿ ಹೀಗಾಗಿಲ್ಲ. ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಇನ್ನು ಸಾಕಷ್ಟು ಸಮಯವಿದ್ದರೂ ಪಾಕ್ ಕ್ರಿಕೆಟ್ ಮಂಡಳಿ ಆಟಗಾರರ ಮೊಬೈಲ್ಗಳನ್ನು ಕಸಿದುಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿವೆ.
Published On - 3:06 pm, Mon, 7 September 26