ಪಾಕಿಸ್ತಾನ್ ಸೂಪರ್​ ಲೀಗ್​ಗೆ ‘ಇಂಧನದ ಕೊರತೆ’

Pakistan Super League 2026: ಪಾಕಿಸ್ತಾನ್ ಸೂಪರ್ ಲೀಗ್​ನ (PSL 2026) ವೇಳಾಪಟ್ಟಿ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಪಾಕ್​ನಲ್ಲಿ ಎದುರಾಗಿರುವ ಇಂಧನದ ಕೊರತೆ ಎನ್ನಲಾಗಿದೆ. ದೇಶದಾದ್ಯಂತ ತೈಲ ಬಿಕ್ಟಟ್ಟು ಎದುರಾಗಿದ್ದು, ಹೀಗಾಗಿ ಟೂರ್ನಿ ಆಯೋಜನೆಯನ್ನು ಮುಂದೂಡಲು ಚಿಂತಿಸಲಾಗಿದೆ.

ಪಾಕಿಸ್ತಾನ್ ಸೂಪರ್​ ಲೀಗ್​ಗೆ ಇಂಧನದ ಕೊರತೆ
Psl 2026

Updated on: Mar 10, 2026 | 11:24 AM

ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL) ಟಕ್ಕರ್ ಕೊಡಲು ಮುಂದಾಗಿದ್ದ ಪಾಕಿಸ್ತಾನ್ ಸೂಪರ್ ಲೀಗ್​ಗೆ (PSL) ಇದೀಗ  ‘ಇಂಧನದ ಕೊರತೆ’ ಎದುರಾಗಿದೆ. ಅಂದರೆ ಪಾಕ್​ನಲ್ಲಿ ತೈಲ ಬಿಕ್ಕಟ್ಟು ಎದುರಾಗಿದ್ದು, ಹೀಗಾಗಿ ಟೂರ್ನಿಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಐಪಿಎಲ್​ ಆರಂಭದ ಸಂದರ್ಭದಲ್ಲೇ ಟೂರ್ನಿ ಶುರು ಮಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಪ್ಲ್ಯಾನ್ ರೂಪಿಸಿದ್ದರು. ಅದರಂತೆ ಮಾರ್ಚ್ 26 ರಿಂದ ಪಿಎಸ್​ಎಲ್​ ಆರಂಭಿಸಲು ನಿರ್ಧರಿಸಲಾಗಿತ್ತು.

ಆದರೀಗ ಪಾಕಿಸ್ತಾನದಲ್ಲಿ ಇಂಧನದ ಕೊರತೆ ಎದುರಾಗಿರುವ ಕಾರಣ ಟೂರ್ನಿಯ ವೇಳಾಪಟ್ಟಿಯನ್ನು ಬದಲಿಸಲು ಚಿಂತಿಸಲಾಗಿದೆ.

ಪಾಕಿಸ್ತಾನದಲ್ಲಿ ತೀವ್ರ ಇಂಧನ ಕೊರತೆಯಿದ್ದು, ಸರ್ಕಾರವು ಸಾರಿಗೆಯ ಮೇಲೆ ನಿರ್ಬಂಧ ಹೇರಿದೆ. ಇದರಿಂದ ತಂಡಗಳ ಪ್ರಯಾಣ ಮತ್ತು ಪಂದ್ಯದ ಪ್ರಸಾರಕ್ಕೆ ಅಡ್ಡಿಯಾಗುವ ಭೀತಿ ಎದುರಾಗಿದೆ.

ಅಷ್ಟೇ ಅಲ್ಲದೆ ಪಂಜಾಬ್ ಪ್ರಾಂತ್ಯದಲ್ಲಿ ಇಂಧನ ಉಳಿಸಲು ಶಾಲೆ-ಕಾಲೇಜುಗಳನ್ನು ಮಾರ್ಚ್ 31 ರವರೆಗೆ ಮುಚ್ಚಲು ಆದೇಶಿಸಲಾಗಿದೆ.

ಅಂದರೆ ಈಗಾಗಲೇ ಪಾಕಿಸ್ತಾನದ ಬಹುತೇಕ ಭಾಗಗಳಲ್ಲಿ ಪೆಟ್ರೋಲ್, ಡಿಸೇಲ್ ಅಭಾವವಿದ್ದು, ಈ ಅಭಾವವು ಪಾಕಿಸ್ತಾನ್ ಸೂಪರ್ ಲೀಗ್​ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದೇ ಕಾರಣದಿಂದಾಗಿ ಪಾಕಿಸ್ತಾನ್ ಸೂಪರ್ ಲೀಗ್​ ಅನ್ನು ಮುಂದೂಡುವ ಬಗ್ಗೆ ಪಾಕ್ ಕ್ರಿಕೆಟ್ ಮಂಡಳಿ ಚಿಂತಿಸಿದೆ. ಹೀಗಾಗಿ ಮಾರ್ಚ್ 26 ರಿಂದ ಪಿಎಸ್​ಎಲ್​ ಟೂರ್ನಿ ಆರಂಭವಾಗುವ ಸಾಧ್ಯತೆಯಿಲ್ಲ.

ಇಂಧನ ಕೊರತೆ ಏಕೆ?

ಪಾಕಿಸ್ತಾನದಲ್ಲಿ ಪ್ರಸ್ತುತ ಉಂಟಾಗಿರುವ ಇಂಧನ ಬಿಕ್ಕಟ್ಟಿಗೆ ಮುಖ್ಯ ಕಾರಣ ಮಧ್ಯಪ್ರಾಚ್ಯದ ರಾಜಕೀಯ ಉದ್ವಿಗ್ನತೆ.  ಅಂದರೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ತೀವ್ರತೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಏರುಪೇರಾಗಿದೆ.

ಅಲ್ಲದೆ ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಪಾಕಿಸ್ತಾನದ ಶೇ. 98 ರಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಆಮದು ಇದೇ ಮಾರ್ಗವಾಗಿ ನಡೆಯುವುದರಿಂದ ಪೂರೈಕೆಯಲ್ಲಿ ತೀವ್ರ ಅಡಚಣೆಯಾಗಿದೆ.

ಇನ್ನು ಯುದ್ಧದರಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $100 ದಾಟಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ ದಾಖಲೆಯ 55 ರೂಪಾಯಿಗಳಷ್ಟು (PKR) ಹೆಚ್ಚಳವಾಗಿದೆ.

ಇದನ್ನೂ ಓದಿ: Sanju Samson: ಇಡೀ ಚಿತ್ರಣ ಬದಲಿಸಿದ 25 ನಿಮಿಷಗಳ ಕರೆ..!

ಪಾಕಿಸ್ತಾನವು ಇಂಧನಕ್ಕಾಗಿ ಸೌದಿ ಅರೇಬಿಯಾ ಮತ್ತು ಯುಎಇ (UAE) ರಾಷ್ಟ್ರಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಯುದ್ಧದಿಂದಾಗಿ ಈ ರಾಷ್ಟ್ರಗಳಿಂದ ತೈಲ ತರುವುದು ಕಷ್ಟಕರವಾಗಿದ್ದು, ಇದರಿಂದ ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ.

 

Published On - 11:22 am, Tue, 10 March 26

Follow Us