ಐಪಿಎಲ್ ಅಬ್ಬರದ ಮುಂದೆ ಸೋತು ಸುಣ್ಣವಾಯ್ತ ಪಾಕ್ ಸೂಪರ್ ಲೀಗ್?

ಪಾಕಿಸ್ತಾನ ಸೂಪರ್ ಲೀಗ್, ಐಪಿಎಲ್ ಜೊತೆಗಿನ ಸ್ಪರ್ಧೆ ಮತ್ತು ಜಾಹೀರಾತು ಕೊರತೆಯಿಂದ ನಷ್ಟ ಅನುಭವಿಸುತ್ತಿದೆ. ಆಟಗಾರರ ಲಭ್ಯತೆ ಮತ್ತು ಆದಾಯದ ಸಮಸ್ಯೆಗಳಿಂದ ಪಿಸಿಬಿ (PCB) ಮುಂದಿನ PSL ಆವೃತ್ತಿಯನ್ನು ಹಿಂದಿನ ವೇಳಾಪಟ್ಟಿಯಂತೆ ಜನವರಿಯಲ್ಲಿ ನಡೆಸಲು ನಿರ್ಧರಿಸಿದೆ. ಇದು IPL ಸಂಘರ್ಷವನ್ನು ತಪ್ಪಿಸಿ, ಲೀಗ್‌ನ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿ ಹೊಂದಿದೆ.

ಐಪಿಎಲ್ ಅಬ್ಬರದ ಮುಂದೆ ಸೋತು ಸುಣ್ಣವಾಯ್ತ ಪಾಕ್ ಸೂಪರ್ ಲೀಗ್?
ಪಿಎಸ್​ಎಲ್ Vs ಐಪಿಎಲ್

Updated on: Sep 06, 2026 | 8:51 PM

ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್. ಎರಡು ಲೀಗ್​ಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ಜನಪ್ರಿಯತೆಯ ವಿಚಾರಕ್ಕೆ ಬಂದರೆ ಮತ್ತು ಲೀಗ್​ಗಳಲ್ಲಿ ಭಾಗವಹಿಸುವ ಆಟಗಾರರ ವಿಚಾರಕ್ಕೆ ಬಂದರೆ, ಪಾಕಿಸ್ತಾನ ಸೂಪರ್ ಲೀಗ್, ಐಪಿಎಲ್​ಗೆ ಯಾವುದೇ ರೀತಿಯಲ್ಲೂ ಹೋಲಿಕೆಯಾಗುವುದಿಲ್ಲ. ಐಪಿಎಲ್​ಗೆ ಬೇಡವಾದ ಮತ್ತು ಐಪಿಎಲ್​ನಲ್ಲಿ ಹರಾಜಾಗದ ಆಟಗಾರರಿಗೆ ಪಿಎಸ್​ಎಲ್ ಬಾಗಿಲು ತೆರೆಯುತ್ತದೆ. ಹಾಗಿದ್ದರೂ ಒಣಜಂಬ ಬಿಡದ ಪಾಕ್ ಕ್ರಿಕೆಟ್ ಮಂಡಳಿ, ಐಪಿಎಲ್​ ಜೊತೆಗೆ ಸ್ಪರ್ಧಿಸುವ ಸಲುವಾಗಿ ಕಳೆದೆರಡು ಆವೃತ್ತಿಯ ಪಾಕ್ ಸೂಪರ್ ಲೀಗ್ ಅನ್ನು, ಐಪಿಎಲ್ ಜೊತೆ ಜೊತೆಗೆ ಆರಂಭಿಸಿತು. ಆದರೀಗ ತನ್ನ ತಪ್ಪಿನ ಅರಿವು ಪಾಕ್ ಮಂಡಳಿಗೆ ಆಗಿರಬೇಕು. ಹೀಗಾಗಿ ಪಾಕ್ ಮಂಡಳಿ ಮುಂದಿನ ಆವೃತ್ತಿಯ ಪಿಎಸ್​ಎಲ್​ನ ತನ್ನ ಹಳೆಯ ಮಾದರಿಯಲ್ಲೇ ನಡೆಸಲು ನಿರ್ಧರಿಸಿದೆ.

ಪಿಎಸ್​ಎಲ್ ವಿಂಡೋ ಬದಲಾವಣೆ

​ವರದಿಯ ಪ್ರಕಾರ, ಐಪಿಎಲ್ ಜೊತೆಗಿನ ವೇಳಾಪಟ್ಟಿಯ ಸಂಘರ್ಷ ಮತ್ತು ಜಾಹೀರಾತಿನ ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಪಾಕಿಸ್ತಾನ ಸೂಪರ್ ಲೀಗ್ ವಿಂಡೋವನ್ನು ಬದಲಾಯಿಸಲು ನಿರ್ಧರಿಸಿದೆ. ವಾಸ್ತವವಾಗಿ 2025 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಮತ್ತು 2026 ರಲ್ಲಿ ನಡೆದ ಟಿ20 ವಿಶ್ವಕಪ್​ನಿಂದಾಗಿ ಪಿಎಸ್ಎಲ್ ಆರಂಭಿಕ ವೇಳಾಪಟ್ಟಿಯನ್ನು ಬದಲಿಸಲಾಗಿತ್ತು. ಅಂದರೆ ಈ ಎರಡು ಆವೃತ್ತಿಗಳಿಗಿಂತ ಮುಂಚೆ ನಡೆದ ಆವೃತ್ತಿಗಳನ್ನು ಜನವರಿಯಿಂದ ಆರಂಭಿಸಲಾಗುತ್ತಿತ್ತು. ಹಾಗಾಗಿ ಆ ಸಮಯದಲ್ಲಿ ಐಪಿಎಲ್ ಆರಂಭಕ್ಕೂ ಮುನ್ನವೇ ಪಿಎಸ್​ಎಲ್ ಮುಗಿದು ಹೋಗುತ್ತಿತ್ತು. ಅಲ್ಲದೆ ಐಪಿಎಲ್ ಜೊತೆಗೆ ಪೈಪೋಟಿ ಇಲ್ಲದ ಕಾರಣ ಸ್ಟಾರ್ ಆಟಗಾರರು ಲಭ್ಯರಿರುತ್ತಿದ್ದರು ಮತ್ತು ಪ್ರಸಾರ ಆದಾಯದ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಆದರೀಗ ಈ ಎರಡೂ ಸಮಸ್ಯೆಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ನಷ್ಟದ ಸುಳಿಗೆ ಸಿಲುಕಿಸಿವೆ.

ಸಭೆಯಲ್ಲಿ ಈ ಬಗ್ಗೆ ನಿರ್ಧಾರ

ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಸೆಪ್ಟೆಂಬರ್ 1 ರಂದು ಲಂಡನ್‌ನಲ್ಲಿ ಪಿಸಿಬಿ ಮತ್ತು ಎಂಟು ಫ್ರಾಂಚೈಸಿಗಳ ನಡುವೆ ಸಭೆ ನಡೆದಿದೆ. ಈ ಸಭೆಯಲ್ಲಿ ಪಿಸಿಬಿ, ಪಿಎಸ್‌ಎಲ್ ವಿಂಡೋವನ್ನು ಬದಲಾಯಿಸುವ ಬಗ್ಗೆ ಚರ್ಚಿಸಿದೆ. ಲೀಗ್‌ನ ನೇರ ಪ್ರಸಾರ ಮತ್ತು ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿರುವ ವಾಲಿ ಟೆಕ್ನಾಲಜಿ ಪಿಸಿಬಿಗೆ ಈ ಸಲಹೆ ನೀಡಿದೆ ಎಂದು ವರದಿಯಾಗಿದೆ. ಪ್ರಸಾರಕರ ಈ ಸಲಹೆಗೆ ಕಾರಣವೂ ಇದ್ದು, ಕಳೆದ ಎರಡು ಆವೃತ್ತಿಗಳು ರಂಜಾನ್ ಮುಗಿದ ನಂತರ ಆರಂಭವಾಗಿದ್ದವು.

ವೇಳಾಪಟ್ಟಿ ಬದಲಿಸಲು ಕಾರಣವೇನು?

ಆ ಹೊತ್ತಿಗೆ ಪಾಕಿಸ್ತಾನದ ಕಂಪನಿಗಳು ತಮ್ಮ ಮಾರ್ಕೆಟಿಂಗ್ ಮತ್ತು ದೂರದರ್ಶನ ಜಾಹೀರಾತು ಬಜೆಟ್‌ನ ಭಾಗಶಃ ಭಾಗವನ್ನು ರಂಜಾನ್​ ಹಬ್ಬದ ಸಂದರ್ಭದಲ್ಲಿ ಖಾಲಿ ಮಾಡಿರುತ್ತಿದ್ದವು. ಇದರಿಂದ ಲೀಗ್​ ಮೇಲೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಬಜೆಟ್ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಪ್ರಸಾರಕರಿಗೆ ಜಾಹೀರಾತಿನಿಂದ ಹೆಚ್ಚಿನ ಆದಾಯ ಗಳಿಸುವುದು ಕಷ್ಟಕರವಾಗುತ್ತಿತ್ತು. ಆದ್ದರಿಂದ, ಫ್ರಾಂಚೈಸಿಗಳು ಜನವರಿಯಲ್ಲಿ ಪಂದ್ಯಾವಳಿಯನ್ನು ನಡೆಸಬೇಕೆಂದು ಮನವಿ ಮಾಡಿವೆ. ಇದಲ್ಲದೆ, ಪ್ರಸಾರ ಆದಾಯದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಈ ಸಮಸ್ಯೆಗಳನ್ನು ಪರಿಹರಿಸಲು, ಫ್ರಾಂಚೈಸಿಗಳು ಪಿಎಸ್‌ಎಲ್ ಅನ್ನು ಮೊದಲೇ ನಡೆಸಬೇಕೆಂದು ಒತ್ತಾಯಿಸಿವೆ.

ಐಪಿಎಲ್‌ನ ಸಾರ್ವಕಾಲಿಕ ಪ್ಲೇಯಿಂಗ್ 11 ಹೆಸರಿಸಿದ ಆರ್​ಸಿಬಿ ನಾಯಕ

ಆದಾಗ್ಯೂ ಐಪಿಎಲ್ ಜೊತೆಗಿನ ಪೈಪೋಟಿಯಿಂದ ಪಿಎಸ್‌ಎಲ್‌ ವೀಕ್ಷಕರಲ್ಲಿ ಇಳಿಮುಖವಾಗಿದೆ ಎಂದು ಹೇಳುವುದು ಕಷ್ಟ. ಏಕೆಂದರೆ 2025 ರಲ್ಲಿ ಪಿಎಸ್‌ಎಲ್ ಎಕ್ಸ್ ಪಾಕಿಸ್ತಾನದಲ್ಲಿ 3.4 ಬಿಲಿಯನ್ ಲೈವ್-ಸ್ಟ್ರೀಮಿಂಗ್ ವೀಕ್ಷಣೆಗಳನ್ನು ದಾಖಲಿಸಿತ್ತು. ಇನ್ನು ಹಿಂದಿನ ಆವೃತ್ತಿಯಲ್ಲಿ 455 ಮಿಲಿಯನ್ ವೀಕ್ಷಣೆಯಾಗಿತ್ತು ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:49 pm, Sun, 6 September 26

Loading...
Unable to load recommendations.
Follow Us