ಭಾರತದಿಂದ ಸಂಕಷ್ಟದಲ್ಲಿರುವ ಶ್ರೀಲಂಕಾ ಕ್ರಿಕೆಟ್​ಗೆ 107 ಕೋಟಿ ಆದಾಯ: ದ್ರಾವಿಡ್​ಗೆ ಧನ್ಯವಾದ ಎಂದ ಮಂಡಳಿ

| Updated By: Vinay Bhat

Updated on: Aug 16, 2021 | 12:26 PM

ಟಿ-20 ಸರಣಿ ಮಧ್ಯೆ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಹೀಗಾಗಿ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸುವ ಸಂದರ್ಭ ಎದುರಾಗಿತ್ತು. ಆದರೆ, ದ್ರಾವಿಡ್ ನಿರ್ವಹಿಸಿದ ಪ್ರಮುಖ ಪಾತ್ರದಿಂದ ಸರಣಿಗೆ ಯಾವುದೇ ತೊಂದರೆ ಆಗಲಿಲ್ಲ - ಮೋಹನ್ ಡಿ ಸಿಲ್ವಾ

ಭಾರತದಿಂದ ಸಂಕಷ್ಟದಲ್ಲಿರುವ ಶ್ರೀಲಂಕಾ ಕ್ರಿಕೆಟ್​ಗೆ 107 ಕೋಟಿ ಆದಾಯ: ದ್ರಾವಿಡ್​ಗೆ ಧನ್ಯವಾದ ಎಂದ ಮಂಡಳಿ
Rahul Dravid
Follow us on

ಇತ್ತೀಚೆಗಷ್ಟೆ ಭಾರತ ಕ್ರಿಕೆಟ್ ತಂಡದ (Indian Cricket Team) ಶ್ರೀಲಂಕಾ ಪ್ರವಾಸ ಬೆಳೆಸಿ ತವರಿಗೆ ವಾಪಾಸ್ಸಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಗೆದ್ದು ಬೀಗಿದರೆ, ಟಿ-20 ಸರಣಿ ಶ್ರೀಲಂಕಾ (Sri Lanka) ಕೈವಶ ಮಾಡಿಕೊಂಡಿತು. ಟಿ-20 ಸರಣಿಗೆ ಸಾಕಷ್ಟು ಅಡೆತಡೆಗಳು ಉಂಟಾಗಿದ್ದವು. ಭಾರತದ ಕೆಲ ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಿ ಎರಡನೇ ಪಂದ್ಯವನ್ನು ಮುಂದೂಡಲಾಗಿತ್ತು. ಆದರೆ, ಇದರ ನಡುವೆಯೂ ಭಾರತ ತಂಡ ಅರ್ಧದಲ್ಲಿಯೇ ಹಿಂತಿರುಗದೆ ಸರಣಿಯ ಎಲ್ಲ ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಕಾರಣವಾದ ಭಾರತ ತಂಡ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಧನ್ಯವಾದ ತಿಳಿಸಿದೆ.

ಟಿ-20 ಸರಣಿ ಮಧ್ಯೆ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಮೊದಲಿಗೆ ಆಲ್ರೌಂಡರ್ ಕ್ರುನಾಲ್ ಪಾಂಡ್ಯಗೆ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸುವ ಸಂದರ್ಭ ಎದುರಾಗಿತ್ತು. ಆದರೆ, ದ್ರಾವಿಡ್ ಅವರು ನಿರ್ವಹಿಸಿದ ಪ್ರಮುಖ ಪಾತ್ರದಿಂದ ಸರಣಿಗೆ ಯಾವುದೇ ತೊಂದರೆ ಆಗಲಿಲ್ಲ. ಅವರು ಬಯಸಿದ್ದರೆ ತಮ್ಮ ತಂಡವನ್ನು ವಾಪಾಸ್ ಭಾರತಕ್ಕೆ ಕರೆದೊಯ್ಯುವ ಅವಕಾಶವಿತ್ತು. ಹಾಗೆ ಮಾಡದೆ ಆಟಗಾರರನ್ನು ಹುರಿದುಂಬಿಸಿದರು ಎಂದು ಲಂಕಾ ಕ್ರಿಕೆಟ್​ನ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಹೇಳಿದ್ದಾರೆ.

ಸರಣಿಯ ಎಲ್ಲ ಪಂದ್ಯಗಳು ಯಶಸ್ವಿಯಾಗಲು ಭಾರತ ತಂಡದ ಆಟಗಾರರು ಹಾಗೂ ಕೋಚ್ ರಾಹುಲ್ ದ್ರಾವಿಡ್ ಪ್ರಮುಖ ಕಾರಣ. ಈ ಸರಣಿಯ ಎಲ್ಲ ಪಂದ್ಯಗಳನ್ನು ಆಡಿದ್ದರಿಂದ ಲಂಕಾ ಮಂಡಳಿಗೆ 107 ಕೋಟಿ ರೂ. (280 ಕೋಟಿ ಶ್ರೀಲಂಕಾ ರೂಪಾಯಿ) ಆದಾಯ ಲಭಿಸಿತು. ಸದ್ಯ ನಾವಿರುವ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇದು ನಮಗೆ ಬಹುದೊಡ್ಡ ಬಲ ತುಂಬಿದೆ. ಇದಕ್ಕೆ ಕಾರಣವಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಡಿಸಿಲ್ವ ಸಂಸತ ಹಂಚಿಕೊಂಡಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಣ ಟಿ-20 ಕ್ರಿಕೆಟ್‌ ಸರಣಿಯ 2ನೇ ಪಂದ್ಯವನ್ನು ಕೊರೊನಾ ವೈರಸ್‌ ಕಾರಣ ಅನಿವಾರ್ಯವಾಗಿ ಒಂದು ದಿನ ಮುಂದೂಡಲಾಗಿತ್ತು. ಪಂದ್ಯ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳ ಸಮಯ ಬಾಕಿ ಇದೆ ಎನ್ನುವಾಗ ಟೀಮ್ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಕ್ರುನಾಲ್ ಪಾಂಡ್ಯ ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿರುವ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸಿತ್ತು. ಬಳಿಕ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಅವರೊಟ್ಟಿಗೆ ಸಂಪರ್ಕದಲ್ಲಿದ್ದ 9 ಆಟಗಾರರನ್ನು ಕೂಡ ಐಸೊಲೇಷನ್‌ನಲ್ಲಿ ಇರಿಸಲಾಗಿತ್ತು.

ಭಾರತ ತಂಡ ಪ್ರವಾಸದಲ್ಲಿ 4 ಪಂದ್ಯ ಆಡಿದ ಬಳಿಕ ಕ್ರುನಾಲ್ ಪಾಂಡ್ಯ ಕೊರೊನಾ ಸೋಂಕಿತರಾಗಿದ್ದರೆ, ಇತರ 9 ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದರು. ಇದರಿಂದಾಗಿ ಭಾರತ ತಂಡಕ್ಕೆ ಕಣಕ್ಕಿಳಿಸಲು ಭರ್ತಿ 11 ಆಟಗಾರರಷ್ಟೇ ಲಭ್ಯವಿದ್ದರು. ಹೀಗಿದ್ದರೂ ಸರಣಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸದೆ ಭಾರತ ಪಂದ್ಯವನ್ನು ಆಡಿತ್ತು.

India vs England 2nd Test: ಭಾರತ ತಂಡ ಇಷ್ಟು ರನ್ ಗಳಿಸಿದರೆ ನಮಗೆ ಗೆಲುವು ತುಂಬಾನೆ ಕಷ್ಟ ಎಂದ ಮೊಯೀನ್ ಅಲಿ

India vs England 2nd Test: 5ನೇ ದಿನ ಭಾರತವನ್ನು ಕಾಪಾಡುತ್ತಾನ ವರುಣದೇವ?: ಹವಾಮಾನ ವರದಿ ಏನು ಹೇಳುತ್ತೇ?

(Rahul Dravid SLC credits Rahul Dravid for ensuring India completing series despite COVID outbreak)