15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶುಕ್ರವಾರ ನಡೆದ 16ನೇ ಪಂದ್ಯ ರಣ ರೋಚಕವಾಗಿತ್ತು. ಕೊನೆಯ ಎರಡು ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ 12 ರನ್‌ಗಳು ಬೇಕಿದ್ದಾಗ ಸೂಪರ್ ಹೀರೋ ಆಗಿ ಬಂದ ರಾಹುಲ್ ತೆವಾಟಿಯ (Rahul Tewatia) ಎರಡು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಮುಂಬೈನ ಬ್ರಬೌರ್ನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ (PBKS vs GT) 6 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿ ಹ್ಯಾಟ್ರಿಕ್ ಜಯ ಪಡೆದುಕೊಂಡಿದೆ. ಅಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಒಟ್ಟು ಆರು ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಹೈಸ್ಕೋರ್ ಗೇಮ್ನಲ್ಲಿ ಪಂಜಾಬ್ ಪರ ಲಿಯಾಮ್ ಲಿವಿಂಗ್ಸ್ಟೋನ್ ಮಿಂಚಿದರೆ, ಗುಜರಾತ್ ಪರ ಶುಭ್ಮನ್ ಗಿಲ್ (Shubman Gill) 96 ರನ್ಗೆ ಔಟಾಗಿ ಶತಕ ವಂಚಿತರಾದರು. ಕೊನೇ ಹಂತದಲ್ಲಿ ತೆವಾಟಿಯ ಎರಡು ಸಿಕ್ಸ್ ಸಿಡಿಸಿ ಹಾರ್ದಿಕ್ ಪಡೆಯ ಗೆಲುವಿನಗೆ ಕಾರಣರಾದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಜಾನಿ ಬೈರ್‌ಸ್ಟೋವ್ ವಿಕೆಟ್‌ಅನ್ನು ಶೀಘ್ರವಾಗಿ ಕಳೆದುಕೊಂಡರೂ ಧವನ್ 35 ರನ್‌ಗಳ ಉತ್ತಮ ಕೊಡುಗೆ ನೀಡಿದರು. ಆದರೆ ಮತ್ತೊಂದು ತುದಿಯಲ್ಲಿದ್ದ ಲಿಯಾಮ್ ಲಿವಿಂಗ್ಸ್ಟೋನ್ ಮತ್ತೊಂದು ಭರ್ಜರಿ ಇನ್ನಿಂಗ್ಸ್ ಆಡಿದರು. ಸ್ಪೋಟಕ ಅರ್ಧ ಶತಕ ಸಿಡಿಸಿದ ಲಿವಿಂಗ್ಸ್ಟೋನ್ ಕೇವಲ 27 ಎಸೆತ ಎದುರಿಸಿದ್ದು 64 ರನ್‌ಗಳ ಕೊಡುಗೆ ನೀಡಿದರು. 7 ಫೋರ್ ಮತ್ತು 4 ಸಿಕ್ಸರ್ ಇವರ ಖಾತೆಯಿಂದ ಬಂತು. ಕೊನೆಯಲ್ಲಿ ರಾಹುಲ್ ಚಹರ್ 14 ಎಸೆತಗಲ್ಲಿ ಅಜೇಯ 22 ರನ್ ಚಚ್ಚಿದರು. ಪರಿಣಾಮ ಪಂಜಾಬ್ ಕಿಂಗ್ಸ್ 20 ಓವರ್ಗೆ 9 ವಿಕೆಟ್ ಕಳೆದುಕೊಂಡು 189 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಜಿಟಿ ಪರ ರಶೀದ್ ಖಾನ್ 3 ಹಾಗೂ ದರ್ಶನ್ ನಲ್ಕಂಡೆ 2 ವಿಕೆಟ್ ಪಡೆದರು.
ಬೃಹತ್ ಗುರಿಯನ್ನು ಬೆನ್ನಟ್ಟಿದ ಟೈಟಾನ್ಸ್ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಶುಭ್ಮನ್ ಗಿಲ್ ತಂಡಕ್ಕೆ ಭದ್ರ ಅಡಿಪಾಯವನ್ನು ಒದಗಿಸಿದರು. ಇವರ ಜೊತೆಯಾದ ಸಾಯ್ ಸುಧರ್ಶನ್ 30 ಎಸೆತಗಳಲ್ಲಿ 35 ರನ್ ಬಾರಿಸಿ ಶತಕದ ಜೊತೆಯಾಟ ಆಡಿದರು. ಅದ್ಭುತ ಪ್ರದರ್ಶನ ನೀಡಿದ ಗಿಲ್ 59 ಎಸೆತಗಳನ್ನು ಎದುರಿಸಿ 96 ರನ್‌ಗಳಿಸಿ ಶತಕದ ಅಂಚಿನಲ್ಲಿ ಎಡವಿದರು. 11 ಫೋರ್ ಮತ್ತು 1 ಸಿಕ್ಸರ್ ಇವರು ಸಿಡಿಸಿದ್ದರು. ನಾಯಕ ಹಾರ್ದಿಕ್ ಪಾಂಡ್ಯ (27) 19ನೇ ಓವರ್‌ನ ಮೊದಲ ಎಸೆತದಲ್ಲಿ ರನೌಟ್ ಆದರು.
6 ಬಾಲ್ 19 ರನ್:
ಗುಜರಾತ್ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 19 ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬೌಲಿಂಗ್ ದಾಳಿಗಿಳಿದ ಒಡಿಯನ್ ಸ್ಮಿತ್, ಮೊದಲ ಬಾಲ್‌ನಲ್ಲಿ ವೈಡ್ ಮೂಲಕ ಒಂದು ರನ್ ನೀಡಿದರು. ಹೀಗಾಗಿ ಗೆಲುವಿಗೆ 6 ಬಾಲ್‌ಗಳಲ್ಲಿ 18 ರನ್‌ಗಳಿಸಬೇಕಿತ್ತು. ಮೊದಲ ಎಸೆತದಲ್ಲಿ ರನ್‌ಗಳಿಸುವ ಆತುರದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ರನೌಟ್ ಬಲೆಗೆ ಬಿದ್ದರು. ಆಗ ಕಣಕ್ಕಿಳಿದ ರಾಹುಲ್ ತೆವಾಟಿಯ, 20ನೇ ಓವರ್‌ನ 2ನೇ ಬಾಲ್‌ನಲ್ಲಿ 1 ರನ್‌ಗಳಿಸಿದರು. ಬಳಿಕ 3ನೇ ಬಾಲ್‌ನಲ್ಲಿ ಡೇವಿಡ್ ಮಿಲ್ಲರ್ ಬೌಂಡರಿ ಬಾರಿಸಿದರೆ, 4ನೇ ಬಾಲ್‌ನಲ್ಲಿ 1 ರನ್‌ಗಳಿಸಿದರು. ಹೀಗಾಗಿ ಕೊನೆಯ ಎರಡು ಬಾಲ್‌ನಲ್ಲಿ ಗುಜರಾತ್ ಗೆಲುವಿಗೆ 12 ರನ್‌ಗಳು ಬೇಕಾಯಿತು. 5ನೇ ಬಾಲ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ತೆವಾಟಿಯಾ, ಪಂದ್ಯದ ರೋಚಕತೆಯನ್ನ ಮತ್ತಷ್ಟು ಹೆಚ್ಚಿಸಿದರು. ಪರಿಣಾಮ 1 ಬಾಲ್‌ಗೆ 6 ರನ್ ಬೇಕಿತ್ತು.
What a match.What a finish.Incredible.#Tewatia did it again ?
12 runs needed off 2 balls
Two sixes ??
Rahul #Tewatia nam to suna hoga
#PBKSvGT #IPL2022 pic.twitter.com/Ivypd2cmi3— Vikram Pooniya (@PooniyaVikram) April 8, 2022
ಕೊನೆಯ ಬಾಲ್‌ನಲ್ಲೂ ರಾಹುಲ್ ತೆವಾಟಿಯ, ಸಿಕ್ಸರ್ ಬಾರಿಸುವ ಮೂಲಕ ಗುಜರಾತ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದು ತಂಡ ಗೆಲ್ಲಲು ಕೊನೆಯ 2 ಎಸೆತಗಳಲ್ಲಿ 12 ಬೇಕಿದ್ದಾಗ 2 ಸಿಕ್ಸರ್ ಬಾರಿಸಿ ಪಂದ್ಯ ಗೆಲ್ಲಿಸಿ ಕೊಟ್ಟ ಎರಡನೇ ಆಟಗಾರನಾಗಿ ತೆವಾಟಿಯ ಸಾಧನೆ ಮಾಡಿದರು. ಮೊದಲ ಪ್ಲೇಯರ್ ಎಂಎಸ್ ಧೋನಿ ಆಗಿದ್ದಾರೆ.
RCB vs MI Head to Head: ಮುಂಬೈ- ಆರ್‌ಸಿಬಿ ಮುಖಾಮುಖಿ; ಅಂಕಿಅಂಶಗಳ ಪ್ರಕಾರ ಯಾರಿಗೆ ಮೇಲುಗೈ?
Published On - 7:43 am, Sat, 9 April 22