ಇಂದು ಲಕ್ನೋದ ಅಟಲ್ ಬಿಹಾರಿ ವಾಜಪೈ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದ್ದು ಹೊಸ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ. ಟಿ20 ತಂಡದಲ್ಲಿದ್ದ ಬಹುತೇಕ ಎಲ್ಲ ಸ್ಟಾರ್ ಆಟಗಾರರು ಟಿ20 ವಿಶ್ವಕಪ್ ಇರುವ ಕಾರಣ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಹೀಗಾಗಿ ಶಿಖರ್ ಧವನ್ (Shikhar Dhawan) ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೆಲ ಹೊಸ ಮುಖಗಳು ಕೂಡ ಆಯ್ಕೆಯಾಗಿದ್ದು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಲ್ಲಿ ಮುಂಚೂಣಿಯರಾಗಿ ಐಪಿಎಲ್ 2022 ರಲ್ಲಿ ಆರ್ಸಿಬಿ ತಂಡದ ಪರ ಅಬ್ಬರಿಸಿದ್ದ ರಜತ್ ಪಟಿದಾರ್ (Rajat Patidar) ಇದ್ದಾರೆ.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಪಟಿದಾರ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇತ್ತೀಚೆಗಷ್ಟೆ ನ್ಯೂಜಿಲೆಂಡ್ ಎ ವಿರುದ್ಧದ ಮೊದಲ ಪಂದ್ಯದಲ್ಲಿ 176 ರನ್ ಸಿಡಿಸಿದ್ದ ಪಟಿದಾರ್ ಮೂರನೇ ಪಂದ್ಯದಲ್ಲಿ ಅಜೇಯ 109 ರನ್ ಬಾರಿಸಿದ್ದರು. ಅದಲ್ಲದೆ, ಮಧ್ಯಪ್ರದೇಶ ತಂಡದ ರಣಜಿ ಟ್ರೋಫಿ ಗೆಲುವಿನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ 122 ರನ್ ಬಾರಿಸುವ ಮೂಲಕ ರಜತ್ ಗಮನಸೆಳೆದಿದ್ದರು. ಹೀಗಾಗಿ ಇವರು ಇಂದಿನ ಪಂದ್ಯದ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.
ಇನ್ನು ಮಧ್ಯಪ್ರದೇಶದ ವೇಗಿ ಮುಖೇಶ್ ಕುಮಾರ್ ಕೂಡ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಎ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಇವರು 5 ವಿಕೆಟ್ ಉರುಳಿಸಿ ಮಿಂಚಿದ್ದರು. ಅಲ್ಲದೆ, ಮೂರು ಪಂದ್ಯಗಳ ಸರಣಿಯಲ್ಲಿ 21.78ರ ಸರಾಸರಿಯಲ್ಲಿ 9 ವಿಕೆಟ್ ಉರುಳಿಸುವ ಮೂಲಕ ಸರಣಿಯಲ್ಲಿ ಗರಿಷ್ಠ ವಿಕೆಟ್ ಉರುಳಿಸಿದ ಬೌಲರ್ ಎನಿಸಿಕೊಂಡಿದ್ದರು. ಅದಲ್ಲದೆ, ರಣಜಿ ಟ್ರೋಫಿ ಸೆಮಿಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್‌ಗೆ 4 ವಿಕೆಟ್ ವಿಕೆಟ್ ಉರುಳಿಸಿದ್ದಲ್ಲದೆ, ಇರಾನಿ ಕಪ್ ಟೂರ್ನಿಯಲ್ಲಿ 4 ವಿಕೆಟ್ ಉರುಳಿಸಿದ್ದಾರೆ. ಹೀಗಾಗಿ ಇವರನ್ನು ಕೂಡ ಕಣಕ್ಕಿಳಿಸಿದರೆ ಅಚ್ಚರಿ ಪಡಬೇಕಿಲ್ಲ.
ಉಳಿದಂತೆ ಭಾರತ ಪರ ಓಪನರ್ಗಳಾಗಿ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಆಡಲಿದ್ದಾರೆ. ಉಪ ನಾಯಕನ ಜವಾಬ್ದಾರಿ ಹೊತ್ತಿರುವ ಶ್ರೇಯಸ್ ಅಯ್ಯರ್ ಮೂರನೇ ಸ್ಥಾನದಲ್ಲಿದ್ದರೆ ಇಶಾನ್ ಕಿಶನ್ ನಂತರದ ಸ್ಥಾನದಲ್ಲಿ ಆಡಬಹುದು. ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಜವಾಬ್ದಾರಿ ಹೊರಲಿದ್ದಾರೆ. ರಾಹುಲ್ ತ್ರಿಪಾಠಿ ಕೂಡ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು. ಆಲ್ರೌಂಡರ್ಗಳಾಗಿ ಶಾರ್ದೂಲ್ ಠಾಕೂರ್ ಅಥವಾ ದೀಪಕ್ ಚಹರ್ ಇರಲಿದ್ದಾರೆ. ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್ ಹಾಗೂ ರವಿ ಬಿಷ್ಟೋಯಿ ಅವರಿದ್ದು ಮೊಹಮ್ಮದ್ ಸಿರಾಜ್ಗೆ ಕೂಡ ಅವಕಾಶ ಸಿಗಬಹುದು. ಇವರ ಜೊತೆಗೆ ರುತುರಾಜ್ ಗಾಯಕ್ವಾಡ್, ಶಹ್ಬಾಜ್ ಅಹ್ಮದ್, ಆವೇಶ್ ಖಾನ್ ಕೂಡ ತಂಡದಲ್ಲಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು, ಪಂದ್ಯದ ಟಾಸ್ 1 ಗಂಟೆಗೆ ನಡೆಯಲಿದೆ. ರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನಲ್‌ಗಳಲ್ಲಿ ವಿವಿಧ ಭಾಷೆಗಳಲ್ಲಿ ವೀಕ್ಷಿಸಬಹುದು. ಚಂದಾದಾರಿಕೆಯೊಂದಿಗೆ Hotstar ನಲ್ಲಿ ಪಂದ್ಯದ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ನೋಡಬಹುದು. ಇದಲ್ಲದೆ, ಪಂದ್ಯದ ಲೈವ್ ನವೀಕರಣಗಳನ್ನು tv9kannada.com ನಲ್ಲಿಯೂ ಓದಬಹುದು.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:
ಭಾರತ ತಂಡ: ಶಿಖರ್ ಧವನ್(ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್(ಉಪ ನಾಯಕ), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ತೆಂಬಾ ಬವುಮಾ (ನಾಯಕ), ಆ್ಯಡೆನ್ ಮರ್ಕ್ರಮ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಆನ್ರಿಚ್ ನಾರ್ಟ್ಜೆ.
Published On - 9:08 am, Thu, 6 October 22