IPL 2023: RCB ಪರ ಮತ್ತೆ ಆಡ್ತಾರಾ ABD? ಕೊನೆಗೂ ಮೌನ ಮುರಿದ ಡಿವಿಲಿಯರ್ಸ್
AB de Villiers: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.
ಕ್ರಿಕೆಟ್ ಅಂಗಳದ ಸಿಡಿಲಮರಿ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಅಲಿಯಾಸ್ ಎಬಿಡಿ (AB de Villiers) ಐಪಿಎಲ್ಗೆ ಕಂಬ್ಯಾಕ್ ಮಾಡ್ತಾರಾ? ಇಂತಹದೊಂದು ಪ್ರಶ್ನೆ ಕಳೆದ ಒಂದು ವರ್ಷದಿಂದ ಕೇಳಿ ಬರುತ್ತಿದೆ. ಈ ಕುತೂಹಲಕಾರಿ ಪ್ರಶ್ನೆಗೆ ಕಿಚ್ಚು ಹಚ್ಚುವಂತೆ ಎಬಿಡಿ ಕೂಡ ಐಪಿಎಲ್ 2023 ರ (IPL 2023) ವೇಳೆ ನಾನು ಬೆಂಗಳೂರಿಗೆ ಬರಲಿದ್ದೇನೆ ಎಂದು ತಿಳಿಸಿದ್ದರು. ಹೀಗಾಗಿಯೇ ಈ ಕುತೂಹಲ ಇಮ್ಮಡಿಯಾಗಿತ್ತು. ಆದರೀಗ ಈ ಎಲ್ಲಾ ಕುತೂಹಲಕ್ಕೂ ಖುದ್ದು ಎಬಿಡಿಯೇ ತೆರೆ ಎಳೆದಿದ್ದಾರೆ. ಐಪಿಎಲ್ 2023 ರಲ್ಲಿ ಆಡಲಿದ್ದಾರಾ? ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ.
2021 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿರುವ ಎಬಿಡಿ ಐಪಿಎಲ್ 2023 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಬಾರಿ ಆಟಗಾರನಾಗಿ ಅಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.
ನಾನು ಆರ್ಸಿಬಿ ಪರ ಒಂದು ದಶಕಗಳ ಕಾಲ ಆಡಿದ್ದೇನೆ. ಆದರೆ ಆ ವೇಳೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ನನ್ನನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಮುಂದಿನ ಐಪಿಎಲ್ ವೇಳೆ ನಾನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಲಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಯಾವುದೇ ಮಾದರಿಯ ಕ್ರಿಕೆಟ್ಗೆ ಕಂಬ್ಯಾಕ್ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಬಿಡಿ ಕಣ್ಣಿನ ಸರ್ಜರಿ ಮಾಡಿಸಿಕೊಂಡಿರುವುದು. ಬಲಗಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಕಾರಣ ಇನ್ಮುಂದೆ ಆಡಲು ಸಾಧ್ಯವಾಗುವುದಿಲ್ಲ. ಈಗಾಗಲೇ ನನಗೆ ಲೆಜೆಂಡ್ಸ್ ಲೀಗ್ನಿಂದ ಆಫರ್ ಬಂದಿತ್ತು. ಆದರೆ ಕಣ್ಣಿನ ಆಪರೇಷನ್ ನಡೆದಿದ್ದರಿಂದ ನಾನು ಆಹ್ವಾನವನ್ನು ತಿರಸ್ಕರಿಸಿದ್ದೆ ಎಂದು ಎಬಿಡಿ ತಿಳಿಸಿದ್ದಾರೆ.
ನಾನು ಒಂದೇ ಕಣ್ಣಿನಲ್ಲಿ ಆಡಬಹುದೆಂದು ನಿಮಗೆ ಅನಿಸಬಹುದು. ಆದರೆ ನಾನು ಅಂತಹ ಸಾಹಸಕ್ಕೆ ಮುಂದಾಗುವುದಿಲ್ಲ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಅಂಗಳಕ್ಕೆ ಮತ್ತೆ ಕಂಬ್ಯಾಕ್ ಮಾಡುವ ಎಲ್ಲಾ ವದಂತಿಗಳನ್ನು ಖುದ್ದು ಎಬಿಡಿ ತಳ್ಳಿಹಾಕಿದ್ದಾರೆ. ಇದರೊಂದಿಗೆ ಆರ್ಸಿಬಿಗೆ ಎಬಿಡಿ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಕೂಡ ಕಮರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 184 ಪಂದ್ಯಗಳಿಂದ ಒಟ್ಟು 5162 ರನ್ ಕಲೆಹಾಕಿದ್ದರು. ಈ ವೇಳೆ 3 ಭರ್ಜರಿ ಶತಕಗಳು, 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ಪಂದ್ಯವಾಡಿದ ಹಾಗೂ ಅತೀ ಹೆಚ್ಚು ಕಾಲ ಆಡಿದ ವಿದೇಶಿ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ.