- Kannada News Photo gallery Cricket photos What The 15-Member Indian Team That Won The 2007 World T20 Is Doing Now zp
2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
2007 T20 World Cup: ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ತಂದುಕೊಟ್ಟ ಬಹುತೇಕ ಆಟಗಾರರು ಇದೀಗ ನಿವೃತ್ತಿಯಾಗಿದ್ದಾರೆ. ಇದಾಗ್ಯೂ ಕೆಲವರು ಈಗಲೂ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.
Updated on:Sep 24, 2022 | 12:15 PM

2007, ಸೆಪ್ಟೆಂಬರ್ 24...ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳ ಪಾಲಿನ ಅವಿಸ್ಮರಣೀಯ ದಿನ. ಏಕೆಂದರೆ 1983 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ತಂಡವು ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ದಿನವಿದು.

ಅಂದು ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದ ಯುವ ಪಡೆ ಟಿ20 ವಿಶ್ವಕಪ್ ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿತ್ತು. ಅಲ್ಲದೆ ಫೈನಲ್‌ನಲ್ಲಿ ಭಾರತದ ಪಾಲಿಗೆ ಎದುರಾಳಿಯಾಗಿ ಸಿಕ್ಕಿದ್ದು ಸಾಂಪ್ರದಾಯಿಕ ವೈರಿ ಪಾಕಿಸ್ತಾನ್.

ಸೌತ್ ಆಫ್ರಿಕಾದ ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ನಡೆದ ರಣ ರೋಚಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 5 ರನ್ಗಳಿಂದ ಸೋಲಿಸಿ ಟೀಮ್ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡಿದ್ದರು. ಈ ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ್ದು ಗೌತಮ್ ಗಂಭೀರ್ ಮತ್ತು ಇರ್ಫಾನ್ ಪಠಾಣ್.

ಅಂದು ಟೀಮ್ ಇಂಡಿಯಾಗೆ ಟಿ20 ವಿಶ್ವಕಪ್ ತಂದುಕೊಟ್ಟ ಬಹುತೇಕ ಆಟಗಾರರು ಈಗ ನಿವೃತ್ತಿಯಾಗಿದ್ದಾರೆ. ಇದಾಗ್ಯೂ ಕೆಲವರು ಈಗಲೂ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ. ಹಾಗಿದ್ರೆ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಟಗಾರರು ಈಗ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎಂದು ನೋಡುವುದಾದರೆ...

1) ಗೌತಮ್ ಗಂಭೀರ್ : ಪಾಕ್ ವಿರುದ್ಧದ ಫೈನಲ್‌ನಲ್ಲಿ ಗಂಭೀರ್ 75 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಗೌತಿ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2) ಯೂಸುಫ್ ಪಠಾಣ್: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದ ಯೂಸುಫ್ ಪಠಾಣ್ ಅಂದು 15 ರನ್ ಗಳಿಸಿದ್ದರು. ಇದೀಗ ನಿವೃತ್ತಿ ಹೊಂದಿರುವ ಯೂಸುಫ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ.

3) ರಾಬಿನ್ ಉತ್ತಪ್ಪ: ಟಿ20 ವಿಶ್ವಕಪ್ ತಂಡದಲ್ಲಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಫೈನಲ್‌ನಲ್ಲಿ 8 ರನ್ ಗಳಿಸಿದ್ದರು. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಉತ್ತಪ್ಪ, ಈಗ ಲೆಜೆಂಡ್ಸ್ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

4) ಯುವರಾಜ್ ಸಿಂಗ್: ಟಿ20 ವಿಶ್ವಕಪ್ನ ಹೀರೋ ಎನಿಸಿಕೊಂಡಿದ್ದ ಯುವರಾಜ್ ಸಿಂಗ್ ಕೂಡ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಅಲ್ಲದೆ ಇದೀಗ ಯುವಿ, ತಮ್ಮದೇ ಕ್ರಿಕೆಟ್ ಅಕಾಡೆಮಿ ಹಾಗೂ ಬಿಸಿನೆಸ್ನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕೆಲ ಫ್ರಾಂಚೈಸಿ ಲೀಗ್ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

5) ಮಹೇಂದ್ರ ಸಿಂಗ್ ಧೋನಿ: ಅಂದಿನ ಟೀಮ್ ಇಂಡಿಯಾ ನಾಯಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ನೀಡಿದ್ದಾರೆ. ಇದಾಗ್ಯೂ ಧೋನಿ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡುತ್ತಿರುವುದು ವಿಶೇಷ.

6) ರೋಹಿತ್ ಶರ್ಮಾ: ಪ್ರಸ್ತುತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ಆಡಿದ್ದರು. ಅಂದು 16 ಎಸೆತಗಳಲ್ಲಿ ಅಜೇಯ 30 ರನ್ ಬಾರಿಸಿ ಮಿಂಚಿದ್ದರು. ಇದೀಗ ರೋಹಿತ್ ಶರ್ಮಾ ಭಾರತ ಏಕದಿನ ಹಾಗೂ ಟೆಸ್ಟ್ ತಂಡಗಳ ನಾಯಕರಾಗಿ ಮುಂದುವರೆದಿದ್ದಾರೆ.

7) ಇರ್ಫಾನ್ ಪಠಾಣ್: ಮಾಂತ್ರಿಕ ಸ್ವಿಂಗ್ ಬೌಲಿಂಗ್ ಮೂಲಕ ಫೈನಲ್‌ನಲ್ಲಿ ಮೋಡಿ ಮಾಡಿದ್ದ ಇರ್ಫಾನ್ ಪಠಾಣ್ 3 ಪ್ರಮುಖ ವಿಕೆಟ್ ಉರುಳಿಸಿದ್ದರು. ಸದ್ಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಪಠಾಣ್, ವೀಕ್ಷಕರ ವಿವರಣೆಗಾರನಾಗಿ ಹಾಗೂ ಲೆಜೆಂಡ್ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

8) ಆರ್.ಪಿ.ಸಿಂಗ್: ಎಡಗೈ ವೇಗಿ ಆರ್ಪಿ ಸಿಂಗ್ ಫೈನಲ್ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದರು. ಇದೀಗ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಆರ್ಪಿ ಸಿಂಗ್ ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಜೊತೆಗೆ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

9) ಹರ್ಭಜನ್ ಸಿಂಗ್: ಪಾಕ್ ವಿರುದ್ಧದ ಫೈನಲ್‌ನಲ್ಲಿ ಹರ್ಭಜನ್ ಸಿಂಗ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಭಜ್ಜಿ ಲೆಜೆಂಡ್ಸ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.

10) ಜೋಗಿಂದರ್ ಶರ್ಮಾ: ಫೈನಲ್ ಓವರ್ ಎಸೆದಿದ್ದ ಜೋಗಿದಂರ್ ಶರ್ಮಾ ಕೊನೆಯ ವಿಕೆಟ್ ಸೇರಿದಂತೆ ನಿರ್ಣಾಯಕ ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದರು. ಇದೀಗ ಟಿ20 ವಿಶ್ವಕಪ್ ಹೀರೋ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಡಿ.ಎಸ್.ಪಿ. ಆಗಿ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.

11) ಶ್ರೀಶಾಂತ್: ಫೈನಲ್‌ನಲ್ಲಿ ಪಾಕ್ ಬ್ಯಾಟ್ಸ್ಮನ್ ಮಿಸ್ಬಾ ಉಲ್ ಹಕ್ ಅವರ ಕ್ಯಾಚ್ ಹಿಡಿದಿದ್ದ ಶ್ರೀಶಾಂತ್ ಸದ್ಯ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಅಲ್ಲದೆ ಲೆಜೆಂಡ್ಸ್ ಲೀಗ್ ಮೂಲಕ ಮತ್ತೆ ಮೈದಾನಕ್ಕಿಳಿದಿದ್ದಾರೆ.

12) ವೀರೇಂದ್ರ ಸೆಹ್ವಾಗ್: 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಗಾಯದ ಕಾರಣ ಸೆಹ್ವಾಗ್ ಆಡಿರಲಿಲ್ಲ. ಇದೀಗ ನಿವೃತ್ತಿ ನೀಡಿರುವ ಸೆಹ್ವಾಗ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

13) ದಿನೇಶ್ ಕಾರ್ತಿಕ್: ಅಂದು ಟೀಮ್ ಇಂಡಿಯಾದ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದ ದಿನೇಶ್ ಕಾರ್ತಿಕ್ ಕೂಡ ಫೈನಲ್ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ. ಇದೀಗ ಟೀಮ್ ಇಂಡಿಯಾಗೆ ಗುಡ್ ಬೈ ಹೇಳಿರುವ ಡಿಕೆ ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

14) ಪಿಯುಷ್ ಚಾವ್ಲಾ: ಟೀಮ್ ಇಂಡಿಯಾದಲ್ಲಿ ಸ್ಪಿನ್ನರ್ ಆಗಿ ಕಾಣಿಸಿಕೊಂಡ ಚಾವ್ಲಾ ಕೂಡ ಫೈನಲ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಪಿಯುಷ್ ಚಾವ್ಲಾ ಐಪಿಎಲ್ನಲ್ಲಿ ಮುಂದುವರೆದಿದ್ದಾರೆ.

15) ಅಜಿತ್ ಅಗರ್ಕರ್: 15 ಸದಸ್ಯರ ತಂಡದಲ್ಲಿ ವೇಗಿಯಾಗಿ ಸ್ಥಾನ ಪಡೆದಿದ್ದ ಅಜಿತ್ ಅಗರ್ಕರ್ಗೂ ಕೂಡ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ನಿವೃತ್ತಿ ಘೋಷಿಸಿರುವ ಅಗರ್ಕರ್ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Published On - 12:15 pm, Sat, 24 September 22









